Advertisement

ಒಕ್ಕಲಿಗರ ಸಂಘ ಮಹಾರಾಷ್ಟ್ರ: 8ನೇ ವಾರ್ಷಿಕ ಮಹಾಸಭೆ

03:54 PM Jul 26, 2017 | Team Udayavani |

ಮುಂಬಯಿ: ಒಕ್ಕಲಿಗರ ಸಂಘ ಮಹಾರಾಷ್ಟ್ರ  ಇದರ ಎಂಟನೇ ವಾರ್ಷಿಕ ಮಹಾಸಭೆಯು ಜು. 23 ರಂದು ಪೂರ್ವಾಹ್ನ ಅಂಧೇರಿ ಪೂರ್ವದ ಜೆ. ಬಿ. ನಗರದ ಪಂಚಾಯತಿ ಸೇವಾ ಟ್ರಸ್ಟ್‌ನ ಗೋಯೆಂಕಾ ಭವನದಲ್ಲಿ ನಡೆಯಿತು.

Advertisement

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಂಗಪ್ಪ ಸಿ. ಗೌಡ ಅವರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿ, ಒಕ್ಕಲಿಗರಲ್ಲಿನ ಅನೇಕರು ಆರ್ಥಿಕವಾಗಿ ಸಬಲರಾಗಿರಬಹುದು. ಆದರೆ ಮೂಲ ಸಂಸ್ಕೃತಿ, ಪರಂಪರೆಯನ್ನು ಕಾಯ್ದುಕೊಂಡು ಉಳಿಸಿ-ಬೆಳೆಸುವಲ್ಲಿ ಎಂದೂ ಹಿಂದುಳಿದಿಲ್ಲ. ಒಟ್ಟಾರೆಯಾಗಿ ನಮ್ಮ ಸಮಾಜ ಇತರ ಸಮಾಜಕ್ಕಿಂತಲೂ ಎಲ್ಲಾ ವಿಧಗಳಲ್ಲಿಯೂ ಅಭಿವೃದ್ಧಿಯತ್ತ ಸಾಗುತ್ತಿರುವುದು ಹೆಮ್ಮೆಯಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲೂ ನಾವು ಹಿಂದೆ ಬಿದ್ದಿಲ್ಲ.   ಭವಿಷ್ಯತ್ತಿನ ದಿನಗಳಲ್ಲೂ ಸಮಾಜಮುಖೀ ಸೇವೆಯೊಂದಿಗೆ ನಮ್ಮಲ್ಲಿನ ಒಗ್ಗಟ್ಟು ಭದ್ರಪಡಿಸುವ ಅಗತ್ಯ ನಮಗಿದೆ. ಇದಕ್ಕಾಗಿ ಇಂತಹ ಸಂಸ್ಥೆಗಳಲ್ಲಿ ಒಗ್ಗೂಡಿ ಸಮಾಜ ಬಾಂಧವರು ಸ್ವಂತಿಕೆಯ ಅಸ್ತಿತ್ವಕ್ಕೆ ಬದ್ಧರಾಗ‌ಬೇಕು ಎಂದು ನುಡಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪುಟ್ಟ ಸ್ವಾಮೀ ಎನ್‌. ಗೌಡ ಮತ್ತು ಮೋಹನ್‌ ಕುಮಾರ್‌ ಗೌಡ, ಜತೆ ಕಾರ್ಯರ್ಶಿ ಮಂಜುನಾಥ ಕೆ. ಗೌಡ, ಜತೆ ಕೋಶಾಧಿಕಾರಿ ಮಂಜುನಾಥ ಸಿ. ಗೌಡ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ   ಡಿ. ಎಸ್‌. ಮುತ್ತೇ ಗೌಡ, ಉಮೇಶ್‌ ಆರ್‌. ಗೌಡ ಮತ್ತು ಎ. ಕೆಂಪೇಗೌಡ ವೇದಿಕೆಯಲ್ಲಿ ಆಸೀನರಾಗಿದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕೆ. ರಾಜೇ ಗೌಡ ಸ್ವಾಗತಿಸಿ ಸಭಾ ಕಲಾಪ ನಡೆಸಿ, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ರವೀಂದ್ರ ಎನ್‌. ಗೌಡ ಅವರು ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ಈ ಸಂಸ್ಥೆಯು ಮಹಾರಾಷ್ಟ್ರದಲ್ಲಿನ ಒಕ್ಕಲಿಗರ ಪಾಲಿನ ಮಾತೃ ಸಂಸ್ಥೆ ಎಂದೇ ಹೇಳಬಹುದು. ಯುಗಯೋಗಿ ಜಗದ್ಗುರು ಶ್ರೀ  ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಆಶಯ ಮತ್ತು ಅಭಯ ಹಸ್ತದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ ಇದಾಗಿದೆ. ಪೂಜನೀಯ ಶ್ರೀಗಳ ಉದ್ದೇಶಗಳನ್ನೇ ಪೂರೈಸಲು ಸಕ್ರಿಯವಾಗಿರುವ ಸಂಸ್ಥೆಯನ್ನು ಮುನ್ನಡೆಸಲು ಸರ್ವ ಒಕ್ಕಲಿಗರು ಒಮ್ಮತದಿಂದ ಸಹರಿಸುವ ಅಗತ್ಯವಿದೆ ಎಂದು ಪ್ರಸ್ತಾವಿಕವಾಗಿ ಮಾತನಾಡಿದ ರಾಜೇ ಗೌಡ ನುಡಿದರು.

ಸಂಘದ  ಎಂ. ಎನ್‌. ರಾಮಲಿಂಗಯ್ಯ, ಜಿತೇಂದ್ರ ಜವರಪ್ಪ  ಗೌಡ,  ಶುಭಾ ರಾಮಲಿಂಗ  ಗೌಡ, ಗಂಗಾಧರ್‌ ಎನ್‌. ಗೌಡ, ಸಿಂಗಾರಿ ಗೌಡ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಸಲಹೆಗಳ‌ನ್ನಿತ್ತು ಸಂಘದ ಅಭಿವೃದ್ಧಿಯಲ್ಲಿ ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದರು.ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next