Advertisement
ಚುನಾವಣಾ ಸಿದ್ಧತೆ: ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸ್ಥಾನ ಹೊಂದಾಣಿಕೆ ಮೂಲಕ ಚುನಾವಣೆ ಎದುರಿಸಲು ನಿರ್ಧರಿಸಿರುವುದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ತೀರ್ಮಾನವೇ ಇಲ್ಲಿ ಅಂತಿಮವಾಗುತ್ತದೆ. ವಿಧಾನ ಸಭಾ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಕುರುಬ ಸಮುದಾಯ ದವರಾದ ಮಾಜಿ ಸಂಸದ ಸಿ.ಎಚ್.ವಿಜಯ ಶಂಕರ್ ಪ್ರಬಲ ಆಕಾಂಕ್ಷಿಯಾಗಿದ್ದು, ಈಗಾಗಲೇ ತಮ್ಮದೇ ಆದ ರೀತಿಯಲ್ಲಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ.
Related Articles
Advertisement
ವಿರೋಧ ಕಟ್ಟಿಕೊಂಡಿದ್ದ ವಿಶ್ವನಾಥ್: 2014ರ ಚುನಾವಣೆಯಲ್ಲಿ ನರೇಂದ್ರಮೋದಿ ಅವರ ಅಲೆಯಲ್ಲಿ ಕ್ಷೇತ್ರಕ್ಕೆ ಹೊಸಬರಾದ ಪ್ರತಾಪ್ ಸಿಂಹ ಕಾಂಗ್ರೆಸ್‌ನ ಎಚ್.ವಿಶ್ವನಾಥ್ ವಿರುದ್ಧ 31608 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಾಪ್ ಸಿಂಹ ಅವರ ಗೆಲುವಿಗೆ ಮೋದಿ ಅಲೆಯ ಜೊತೆಗೆ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದುದು, ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿದ್ದ ಎಚ್.ವಿಶ್ವನಾಥ್ ಅವರು
ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರ ಬಗ್ಗೆ ತೀವ್ರ ವಾಗ್ಧಾಳಿ ನಡೆಸುತ್ತಾ ಒಕ್ಕಲಿಗ ಸಮುದಾಯದ ವಿರೋಧ ಕಟ್ಟಿಕೊಂಡಿದ್ದರಿಂದ ವಿಶ್ವನಾಥ್ ಅವರನ್ನು ಸೋಲಿಸಲೇಬೇಕು ಎಂಬ ಐಕೈಕ ಉದ್ದೇಶದಿಂದ ಆ ಸಮುದಾಯದ ಮತಗಳು ಅನಾಯಾಸವಾಗಿ ಬಿಜೆಪಿಯ ಪ್ರತಾಪ್ ಸಿಂಹ ಅವರ ಪಾಲಾಗಿ, ಮೊದಲ ಯತ್ನದಲ್ಲೇ ಪ್ರತಾಪ್ ಸಿಂಹ ಸಂಸತ್ ಪ್ರವೇಶಿಸಿದರೆ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಚಂದ್ರಶೇಖರಯ್ಯ ಕೇವಲ 138587 ಮತಗಳನ್ನಷ್ಟೇ ಗಳಿಸಿ, ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಬದಲಾದ ಪರಿಸ್ಥಿತಿಯಲ್ಲಿ ಅದೇ ವಿಶ್ವನಾಥ್ ಅವರು ಈಗ ಜೆಡಿಎಸ್‌ನ ಶಾಸಕರು ಮಾತ್ರವಲ್ಲ. ಆ ಪಕ್ಷದ ರಾಜ್ಯಾಧ್ಯಕ್ಷರು! ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಶಾಸಕರನ್ನು ಹೊಂದಿರುವ ಬಿಜೆಪಿ ಸಂಘಟನಾತ್ಮಕವಾಗಿ ಬಲವಾಗಿದ್ದರೆ, ಜೆಡಿಎಸ್ ಮೂರು ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ಒಬ್ಬರು ಶಾಸಕರನ್ನಷ್ಟೇ ಹೊಂದಿದೆ.
ಸಿದ್ದು ಕಟ್ಟಿ ಹಾಕಲು ತಂತ್ರ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಾಗಿ ಸಿ.ಎಚ್.ವಿಜಯಶಂಕರ್ ಅವರನ್ನು ಪಕ್ಷಕ್ಕೆ ಕರೆತಂದಿರುವುದರಿಂದ ಟಿಕೆಟ್ ಕೊಡಿಸಲೇಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಂಟಾದ ಸೋಲಿನಿಂದ ಇನ್ನೂ ಹೊರಬರದ ಸಿದ್ದರಾಮಯ್ಯ ಅವರು ಮತ್ತು ಅವರ ಆಪ್ತ ಶಾಸಕರು, ಹೋದಲ್ಲಿ ಬಂದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಮಾತುಗಳನ್ನಾಡುತ್ತಾ
ಅಂತರ ಹೆಚ್ಚಿಸಿಕೊಳ್ಳುತ್ತಿರುವುದರಿಂದ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಕೈ ಬಲಪಡಿಸಲು ಜೆಡಿಎಸ್ ಶಾಸಕರು ಮುಂದಾಗುತ್ತಾರಾ, ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರೊಂದಿಗೆ ಹೇಗೆ ಕೈ ಜೋಡಿಸಿ ಕೆಲಸ ಮಾಡುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಬೇಕು ಎಂಬ ಕಾರಣಕ್ಕಾಗಿಯೇ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ಹುಟ್ಟುಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಚುನಾವಣಾ ಸಿದ್ಧತೆ ಬಗ್ಗೆ ಸಿದ್ದರಾಮಯ್ಯ ಅವರು ಕ್ಷೇತ್ರದ ಮುಖಂಡರನ್ನು ಕರೆಸಿಕೊಂಡು ಮಾತುಕತೆಯನ್ನೂ ನಡೆಸಿದ್ದಾರೆ.
* ಗಿರೀಶ್ ಹುಣಸೂರು