Advertisement

ಓಕಿನಾವಾ ಓಕೇನ? 

12:30 AM Feb 11, 2019 | |

ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಉತ್ಪಾದನೆಗೆ ಹೆಸರಾಗಿರುವ ಓಕಿನಿವಾ, ಇದೀಗ ಐ-ಪ್ರೈಸ್‌ ಸ್ಕೂಟರನ್ನು ಪರಿಚಯಿಸಿದೆ. ಇದರ ಪ್ಲಸ್‌ಪಾಯಿಂಟ್‌ ಎಂದರೆ- ಸುಲಭದಲ್ಲಿ ಪ್ರತ್ಯೇಕಿಸಬಹುದಾದ ಬ್ಯಾಟರಿ. ಅದನ್ನು ಮನೆಯೊಳಗೂ ಜಾರ್ಜ್‌ ಮಾಡಬಹುದು. 4 ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ, 170 ಕಿ.ಮೀ. ದೂರದವರೆಗೂ ಪ್ರಯಾಣಮಾಡಬಹುದು…

Advertisement

ಓಕಿನಾವಾ ಭಾರತದ ಎಲೆಕ್ಟ್ರಿಕ್‌ ಸ್ಕೂಟರ್‌ ಕಂಪನಿ. ಇದು, ಸದ್ಯಕ್ಕೆ ಮಾರುಕಟ್ಟೆಯಲ್ಲೂ ಹೆಚ್ಚೆಚ್ಚು ಚಲಾವಣೆಯಾಗುತ್ತಿರುವ ಹೆಸರು. ಭಾರತವೂ ಸದ್ಯ ಎಲೆಕ್ಟ್ರಿಕ್‌ ಮಾರುಕಟ್ಟೆಗೆ ತೆರೆದುಕೊಳ್ಳುತ್ತಿದ್ದು ಎಲೆಕ್ಟ್ರಿಕ್‌ ಸ್ಕೂಟರು, ಕಾರು, ಪ್ರಯಾಣಿಕ ವಾಹನಗಳು ಒಂದೊದಾಗಿ ಲಗ್ಗೆ ಇಡುತ್ತಿವೆ.  ಓಕಿನಾವಾ ಆಟೋಟೆಕ್‌, ಗುರುಗ್ರಾಮದಲ್ಲಿ 2015ರಲ್ಲಿ ಸ್ಥಾಪನೆಯಾಗಿದ್ದು ರಾಜಸ್ಥಾನದಲ್ಲಿ ದ್ವಿಚಕ್ರವಾಹನಗಳನ್ನು ಉತ್ಪಾದಿಸುತ್ತಿದೆ. ಭಾರತದ ನಗರಗಳಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ನ ಹವಾ ಸೃಷ್ಟಿಸಲು ಓಕಿನಾವಾ ಪ್ರಯತ್ನಿಸುತ್ತಿದ್ದು ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸನ್ನೂ ಕಂಡಿದೆ. ಈಗಾಗಲೇ ನಾಲ್ಕು ಮಾಡೆಲ್‌ಗ‌ಳನ್ನು ಓಕಿನಾವಾ ರಸ್ತೆಗೆ ಬಿಟ್ಟಿದ್ದು ಅವುಗಳಲ್ಲಿ ಐ-ಪ್ರೈಸ್‌ ಮಾಡೆಲ್‌ ಹೊಸದು. 

ಆಕರ್ಷಕ ಸ್ಕೂಟರ್‌ 
ಓಕಿನಾವಾ ಐ ಪ್ರೈಸ್‌ ಅತ್ಯಂತ ಆಕರ್ಷಕ ಸ್ಕೂಟರ್‌. ಕೆಂಪು, ಬಂಗಾರದ ಬಣ್ಣ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಕೂಟರ್‌, ಮುಂಭಾಗದಲ್ಲಿ ಡೇಟೈಂ ರನ್ನಿಂಗ್‌ ಲೈಟ್‌ ಮತ್ತು ಹೆಚ್ಚು ಫೋಕಸ್‌ ಇರುವ ಮುಂಭಾಗದ ಎಲ್‌ಇಡಿ ಬಲ್ಬ್ ಹೊಂದಿದೆ. ಹಿಂಭಾಗ ಎಲ್‌ಇಡಿ ಬ್ರೇಕ್‌ಲೈಟ್‌ಗಳನ್ನು ಹೊಂದಿದೆ. ಯಮಹಾ ರೇ ಮಾದರಿಯ ಸ್ಕೂಟರ್‌ನ ಹೋಲಿಕೆಯಿದ್ದು, ನಗರಗಳಲ್ಲಿ ಸವಾರಿಗೆ ಹೆಚ್ಚು ಅನುಕೂಲಕರವಾಗಿದೆ. ಸೀಟಿನಡಿ ಸಾಕಷ್ಟು ಸ್ಥಳಾವಕಾಶ ಇದೆ. ಇಬ್ಬರು ಸಂಚರಿಸಲು ಸೂಕ್ತವಾಗಿದೆ. ಅಷ್ಟೇ ಅಲ್ಲದೆ, ಮುಂಭಾಗ ಮತ್ತು ಹಿಂಭಾಗದಲ್ಲಿರುವ ಡಿಸ್ಕ್ ಬ್ರೇಕ್‌ ಮತ್ತು ಎರಡೂ ಚಕ್ರಗಳಿಗೆ ಅಲಾಯ್‌ ವೀಲ್‌ಗ‌ಳು ಸ್ಕೂಟರ್‌ನ್ನು ಸುಂದರವಾಗಿ ಕಾಣುವಂತೆ ಮಾಡಿದೆ. 800 ಎಂಎ.ಎಂ. ಸೀಟಿನ ಎತ್ತರ, 175 ಎಂ.ಎಂ. ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿದೆ. 

ಕೀಳಬಹುದಾದ ಬ್ಯಾಟರಿ 
ಓಕಿನಾವಾ ಸ್ಕೂಟರ್‌ನ ಪ್ಲಸ್‌ಪಾಯಿಂಟೇ ಇದು. ಸ್ಕೂಟರ್‌ ಸೀಟು ಎತ್ತಿದರೆ, ಒಳಗಿರುವ ಲೀಥಿಯಂ ಬ್ಯಾಟರಿಯನ್ನು ತೆಗೆದು ಮನೆಯೊಳಗೆ ಚಾರ್ಜ್‌ ಮಾಡಬಹುದು. ಸುಮಾರು 3-4 ಗಂಟೆ ಚಾರ್ಜ್‌ ಮಾಡಿದರೆ ಸಾಕು 170 ಕಿ.ಮೀ.ಗಳಷ್ಟು ದೂರ ಓಡುತ್ತದೆ. ಇದರ ಬ್ಯಾಟರಿಗೆ ಹ್ಯಾಂಡಲ್‌ ಇದ್ದು, ಮಕ್ಕಳೂ ಸುಲಭವಾಗಿ ಎತ್ತಿಕೊಂಡು ಹೋಗಬಹುದಾಗಿದೆ. ಸ್ಕೂಟರ್‌ ಚಾಲನೆ ಮಾಡಬೇಕೆಂದಾದಲ್ಲಿ ಬ್ಯಾಟರಿ ಸಿಕ್ಕಿಸಿದರೆ ಮುಗೀತು. ಇದರ ಚಾರ್ಜ್‌ ಮಾಡಲು ಅನುಕೂಲವಾಗುವಂತೆ ಅದರಲ್ಲೇ ವಯರ್‌ ಮತ್ತು ಪ್ಲಗ್‌ ಕೂಡ ಇದೆ. 

ಸಖತ್‌ ಸ್ಮಾರ್ಟ್‌ 
ಓಕಿನಾವಾ ಬ್ಯಾಟರಿ ಸ್ಕೂಟರ್‌ ಮಾತ್ರ ಅಲ್ಲ, ಇದೊಂದು ರೀತಿ ಸ್ಮಾರ್ಟ್‌ ಸ್ಕೂಟರ್‌ ಕೂಡ ಹೌದು. ಮೊಬೈಲ್‌ನಲ್ಲಿ ಇದರ ಸಾಫ್ಟ್ವೇರ್‌ ಅಳವಡಿಸಿಕೊಂಡರೆ, ಚಾರ್ಜಿಂಗ್‌ ಇತ್ಯಾದಿಗಳನ್ನು ನಿರ್ವಹಿಸಬಹುದು. ಓಕಿನಾವಾ ಇಕೋ ಆ್ಯಪ್‌ ಎನ್ನುವ ಆ್ಯಪ್‌ ಸದ್ಯ ಆಂಡ್ರಾಯಿಡ್‌ ಫೋನ್‌ಗಳಿಗೆ ಲಭ್ಯವಿದ್ದು, ಇದರಲ್ಲಿ ಎಷ್ಟು ಚಾರ್ಜ್‌ ಇದೆ, ಎಷ್ಟು ದೂರ ಕ್ರಮಿಸಬಲ್ಲದು,  ಎಷ್ಟು ಹೊತ್ತು ಚಾರ್ಜ್‌ ಅಗತ್ಯವಿದೆ ಇತ್ಯಾದಿಗಳನ್ನು ನೋಡಬಹುದು. ಜತೆಗೆ ಸ್ಕೂಟರ್‌  ಕಳುವಾದರೆ ಪತ್ತೆ ಹಚ್ಚುವುದಕ್ಕೂ ಸಾಧ್ಯ. ಜಿಪಿಎಸ್‌ ವ್ಯವಸ್ಥಯೂ ಇದಕ್ಕಿದೆ. ರಿಮೋಟ್‌ ಆಗಿ ಸ್ಕೂಟರ್‌ ಅನ್ನು ಆನ್‌-ಆಫ್ ಮಾಡುವ ಸೌಕರ್ಯ, ಸ್ಕೂಟರ್‌ ಸ್ಕ್ರೀನ್‌ನಲ್ಲಿ ಕಾಲ್‌, ಮೆಸೇಜ್‌ ಅಲರ್ಟ್‌ಗಳನ್ನೂ ನೋಡಬಹುದಾಗಿದೆ. 

Advertisement

ತಾಂತ್ರಿಕ ಮಾಹಿತಿ 
ಓಕಿನಾವಾ, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಇರುವ ಎಲ್ಲ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗಿಂತ ಸಿಂಗಲ್‌ ಚಾರ್ಜ್‌ಗೆ ಅತ್ಯಧಿಕ ದೂರ ಕ್ರಮಿಸಬಲ್ಲ ಸಾಮರ್ಥ್ಯವಿರುವ ಸ್ಕೂಟರ್‌. ಕಂಪನಿಯವರೇ ಹೇಳುವಂತೆ ಇದು 2500 ವ್ಯಾಟ್‌ನಷ್ಟು ಗರಿಷ್ಠ ಪವರ್‌ ಹೊಂದಿದ್ದು ಒಂದು ಚಾರ್ಜ್‌ಗೆ 180 ಕಿ.ಮೀ.ವರೆಗೆ ಕ್ರಮಿಸುತ್ತದೆ. 1000 ವ್ಯಾಟ್‌ನ ಬಿಎಲ್‌ಡಿಸಿ ಮೋಟಾರ್‌ ಹೊಂದಿದ್ದು ಗರಿಷ್ಠ 75-80 ಕಿ.ಮೀ.ವರೆಗೆ ವೇಗದಲ್ಲಿ ಕ್ರಮಿಸಬಲ್ಲದು. 150 ಕೆ.ಜಿಯಷ್ಟು ಲೋಡ್‌ ಹೊರಬಲ್ಲದು. ಅಂದರೆ ಇಬ್ಬರು ಆರಾಮಾಗಿ ಸಂಚರಿಬಹುದು. 90/90 ಟ್ಯೂಬ್‌ಲೆಸ್‌ ಟಯರ್‌ ಹೊಂದಿದ್ದು, ಗ್ರಿಪ್‌ಗೆ ಉತ್ತಮವಾಗಿದೆ. 72 ವೋಲ್ಟೆàಜ್‌ಅನ್ನು ಇದು ಬಯಸುತ್ತದೆ. ಮನೆಯ ಸಾಮಾನ್ಯ ಪ್ಲಗ್‌ಗೆ ಇಟ್ಟು ಚಾರ್ಜ್‌ ಮಾಡಬಹುದು. ಸೀಟಿನ ಅಡಿಯಲ್ಲಿ 7 ಲೀಟರ್‌ನಷ್ಟು ಸ್ಟೋರೇಜ್‌ ಅವಕಾಶ ಇದೆ.

ಬೆಲೆ ಎಷ್ಟು? 
ಓಕಿನಾವಾ ಐ ಪ್ರೈಸ್‌ಗೆ ಸುಮಾರು 1.15 ಲಕ್ಷ ರೂ.ಗಳಷ್ಟು (ಎಕ್ಸ್‌ಷೋರೂಂ) ಬೆಲೆ ಇದೆ. ಲೀಥಿಯಂ ಬ್ಯಾಟರಿ, ಸುದೀರ್ಘ‌ ಚಾಲನೆ ಸಾಧ್ಯವಿರುವ ಈ ಸ್ಕೂಟರ್‌ಗೆ ಒಂದು ಲೆಕ್ಕಾಚಾರದ ಪ್ರಕಾರ ಬೆಲೆ ಸ್ಪರ್ಧಾತ್ಪಕವಾಗಿಯೂ ಇದೆ. ಸದ್ಯ ದೇಶದ ಟಯರ್‌ 1 ಮತ್ತು ಟಯರ್‌ 2 ಮಾದರಿ ನಗರಗಳಲ್ಲಿ ಓಕಿನಾವಾ ಲಭ್ಯವಿದೆ. ದೇಶಾದ್ಯಂತ ಸುಮಾರು 200ರಷ್ಟು ಡೀಲರ್‌ಶಿಪ್‌ ಹೊಂದಿದ್ದು, ಶೀಘ್ರ ವಿಸ್ತರಣೆಯಾಗುತ್ತಿದೆ. ಜನವರಿಯಲ್ಲಿ ಬಿಡುಗಡೆಯಾದ ಬಳಿಕ ಐ ಪ್ರೈಸ್‌ ಮಾಡೆಲ್‌ ಈಗಾಗಲೇ 500ರಷ್ಟು ಬುಕ್ಕಿಂಗ್‌ ಪಡೆದಿದೆ. 

 – ಈಶ

Advertisement

Udayavani is now on Telegram. Click here to join our channel and stay updated with the latest news.

Next