Advertisement

‘ಕೈ’ಬಿಟ್ಟೇ ಲೋಕಪಾಲ ನೇಮಿಸಿ

02:09 AM Apr 28, 2017 | Team Udayavani |

ಹೊಸದಿಲ್ಲಿ: ‘ಪ್ರತಿಪಕ್ಷ ನಾಯಕ ಲೋಕಪಾಲ ಆಯ್ಕೆ ಸಮಿತಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ವಿಳಂಬ ಸಲ್ಲದು. ಪ್ರತಿಪಕ್ಷ ನಾಯಕನನ್ನು ಬಿಟ್ಟೇ ಲೋಕಪಾಲರನ್ನು ನೇಮಿಸಿ.’ ಹೀಗೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಗುರುವಾರ ಲೋಕಪಾಲರ ನೇಮಕಕ್ಕೆ ವಿಳಂಬ ಮಾಡುತ್ತಿರುವ ಕೇಂದ್ರದ ವಿರುದ್ಧ ಹರಿಹಾಯ್ದಿರುವ ನ್ಯಾಯಾಲಯ, ‘ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013 ಸಮರ್ಥವಾಗಿದ್ದು, ಅವುಗಳ ಕಾರ್ಯನಿರ್ವಹಣೆಗೆ ತಡೆಯೊಡ್ಡಿರುವುದು ಸಮರ್ಥನೀ ಯವಲ್ಲ. ಪ್ರತಿಪಕ್ಷ ನಾಯಕನಿಲ್ಲದಿದ್ದರೆ ಏನಾಯಿತು? ಅವರಿಲ್ಲ ಎನ್ನುವುದು ನೇಮಕ ವಿಳಂಬ ಮಾಡಲು ಹೇಳುವ ಸರಿಯಾದ ಕಾರಣವಲ್ಲ,’ ಎಂದಿದೆ. ಈ ಮೂಲಕ, ಕೇಂದ್ರ ಸರಕಾರಕ್ಕೆ ಕಾಂಗ್ರೆಸ್‌ ಹೊರತಾಗಿಯೇ ಲೋಕಪಾಲರ ಆಯ್ಕೆಗೆ ನ್ಯಾಯಾಲಯದಿಂದ ಸಮ್ಮತಿ ನೀಡಿದೆ. ದೇಶದಲ್ಲಿ ಲೋಕಪಾಲರ ಆಯ್ಕೆಯನ್ನು ತ್ವರಿತಗೊಳಿಸುವಂತೆ ಕೋರಿ ಎನ್‌ಜಿಒ ಕಾಮನ್‌ಕಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಕಳೆದ ನವೆಂಬರ್‌ನಲ್ಲೂ ಕೇಂದ್ರಸರಕಾರದ ವಿರುದ್ಧ ಕಿಡಿಕಾರಿದ್ದ ಸುಪ್ರೀಂ, ಲೋಕ ಪಾಲ ಕಾನೂನನ್ನು ನಿರ್ಜೀವ ಕಾಗದವಾಗಿ ಉಳಿಯಲು ಬಿಡುವುದಿಲ್ಲ ಎಂದು ಖಾರವಾಗಿ ನುಡಿದಿತ್ತು. ಇದೇ ವೇಳೆ, ಸುಪ್ರೀಂ ಆದೇಶವನ್ನು ಸ್ವಾಗತಿಸಿರುವ ನ್ಯಾಯವಾದಿ ಪ್ರಶಾಂತ್‌ ಭೂಷಣ್‌, ‘3 ವರ್ಷಗಳಿಂದ ಸರಕಾರ ನೆಪ ಹೇಳುತ್ತಾ ಬಂದಿತ್ತು. ಈಗ ನ್ಯಾಯಾಲಯವು ಆ ಎಲ್ಲ ನೆಪಗಳನ್ನು ತಿರಸ್ಕರಿಸಿ, ಲೋಕಪಾಲರ ನೇಮಕ ಮಾಡದ್ದಕ್ಕೆ ಕಾರಣಗಳೇ ಇಲ್ಲ ಎಂದು ಹೇಳಿರುವುದು ಸಂತಸದ ಸಂಗತಿ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next