Advertisement

ರಾಷ್ಟ್ರೀಯ ಹೆದ್ದಾರಿಯಲ್ಲೇ ಒಕ್ಕಣೆ

06:11 PM Nov 05, 2019 | Suhan S |

ಮುಳಬಾಗಿಲು: ರೈತರು ಬೆಳೆಯುವ ಧಾನ್ಯಗಳ ಒಕ್ಕಣೆಗಾಗಿ ಸರ್ಕಾರ ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ವಿತರಣೆ ಮಾಡುತ್ತಿದೆ. ಆದರೂ ರೈತರು ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

Advertisement

ತಾಲೂಕಿನಲ್ಲಿ ಹಲವು ವರ್ಷಗಳ ಹಿಂದೆ ರೈತರು ಬೆಳೆದ ರಾಗಿ, ಭತ್ತ, ಜೋಳ, ತೊಗರಿ, ಅವರೆ, ಹುರಳಿ, ನವಣೆ, ಸಜ್ಜೆಯಂತಹ ಬೆಳೆಯನ್ನು ತಮ್ಮ ಜಮೀನಿನಲ್ಲೇ ಕಣ ಮಾಡಿ ಇಲ್ಲವೆ, ಬಂಡೆಗಳ ಮೇಲೆ ಎತ್ತುಗಳಿಂದ ತುಳಿಸಿ, ಕಲ್ಲಿನ ಗುಂಡು ಉರುಳಿಸಿ ಧಾನ್ಯಗಳ ಒಕ್ಕಣೆ ಮಾಡುತ್ತಿದ್ದರು. ಇದ್ದರಿಂದ ಆರೋಗ್ಯ ಭರಿತ ಧಾನ್ಯ ಮನೆಗೆ ಬರುತ್ತಿತ್ತು. ಅಂತಹ ಧಾನ್ಯಗಳ ಬಳಕೆಯಿಂದ ರೈತರ ಆರೋಗ್ಯ ಕೂಡ ಸದೃಢವಾಗಿರುತ್ತಿತ್ತು.

ಒಕ್ಕಣೆ ನಿಂತಿಲ್ಲ: ಕಾಲ ಬದಲಾದಂತೆ ಒಕ್ಕಣೆಗೆ ಎತ್ತುಗಳು ಹಾಗೂ ಆಳುಗಳ ಕೊರತೆ ಉಂಟಾದ ಕಾರಣ ಗ್ರಾಮಗಳಲ್ಲಿನ ರಸ್ತೆ, 24 ಗಂಟೆ ಸಾವಿರಾರು ವಾಹನ ಸಂಚರಿಸುವ ಹೆದ್ದಾರಿ ಗಳಲ್ಲೂ ಒಕ್ಕಣೆ ಮಾಡಲು ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಕಮದಟ್ಟಿ, ಕಾಮನೂರು, ದೇವರಾಯ ಸಮುದ್ರ, ಕಾಂತರಾಜವೃತ್ತ, ಜಮ್ಮನಹಳ್ಳಿ ಗೇಟ್‌, ಶೀಗೇನಹಳ್ಳಿ, ಕಪ್ಪಲ ಮಡಗು, ಶ್ರೀರಂಗಪುರ, ಪದ್ಮಘಟ್ಟ, ತಾತಿಕಲ್ಲು, ಹಳೆಕುಪ್ಪ, ನಂಗಲಿ, ಮುಷ್ಟೂರು ಕ್ರಾಸ್‌ ಯಡಹಳ್ಳಿ, ಚೆನ್ನಾಪುರ ಮತ್ತು ರಾಷ್ಟ್ರೀಯ ಹೆದ್ದಾರಿ 234ರ ಸೊನ್ನವಾಡಿ, ಕವತನಹಳ್ಳಿ, ಕಾಡು ಕಚ್ಚನಹಳ್ಳಿ, ವಜ್ರನಾಗೇನಹಳ್ಳಿ, ದೊಮ್ಮಸಂದ್ರ, ತಿಮ್ಮನಾಯ ಕನಹಳ್ಳಿ, ಮಲ್ಲನಾಯಕನಹಳ್ಳಿ, ಮೋಪರಹಳ್ಳಿ, ಕರವಿರೆಡಿಹಳ್ಳಿ ಸೇರಿ ವಿವಿಧ ಊರಗಳಲ್ಲೂ ಒಕ್ಕಣೆ ಮಾಡುತ್ತಿದ್ದಾರೆ. ಧಾನ್ಯಗಳ ಮೇಲೆ ಸಂಚರಿಸಿದ್ರೆ ಅಪಘಾತ: ಹುಲ್ಲಿನ ಮೆದೆಗಳ ಮೇಲೆ ನೂರಾರು ವಾಹನಗಳು ಓಡಾಡುವುದರಿಂದ ಗಂಟೆಯೊಳಗೆ ಒಕ್ಕಣೆ ಮುಗಿಯುತ್ತದೆ. ಹುಲ್ಲು ಪುಡಿಯಾದರೂ ಧಾನ್ಯ ಜಾರುವುದರಿಂದ ದ್ವಿಚಕ್ರ ವಾಹನಗಳು ಅಪಘಾತಕ್ಕೆ ತುತ್ತಾಗುತ್ತವೆ.

ಒಕ್ಕಣೆ ನಿಲ್ಲಿಸಿಲ್ಲ: ವಾಹನಗಳಲ್ಲಿನ ಇಂಧನ ಧಾನ್ಯಗಳ ಮೇಲೆ ಸೋರಿಕೆಯಾಗಿ, ಚಕ್ರಗಳಲ್ಲಿನ ಮಣ್ಣು ಹಾಗೂ ಹೊಲಸು ಎಲ್ಲರೂ ಧಾನ್ಯದೊಂದಿಗೆ ಬೆರೆತು ಆಹಾರ ಧಾನ್ಯ ಮಲಿನವಾಗುತ್ತಿದೆ. ಇಂತಹ ಧಾನ್ಯಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದಾಗಿದೆ. ಇಷ್ಟಾದರೂ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ರೈತರು ನಿಲ್ಲಿಸುತ್ತಿಲ್ಲ ಮುಖ್ಯವಾಗಿ ದಿನದ 24 ಗಂಟೆ ವಾಹನ ಸಂಚಾರವಿರುವ ರಾಷ್ಟ್ರೀಯ ಹೆದ್ದಾರಿ 75ರ ಪದ್ಮಘಟ್ಟ ಬಳಿ ಇರುವ ಆರ್‌ಟಿಒ ಕಚೇರಿ ಎದುರೇ ರೈತರೊಬ್ಬರು ನೆಲಗಡೆಲೆ ಕಾಯಿಗಳನ್ನು ರಸ್ತೆಯಲ್ಲಿಯೇ ಒಣಗಿ ಹಾಕಿದ್ದರೂ ಇತ್ತ ಕಡೆ ಗಮನ ಹರಿಸಿಲ್ಲ. ಇದು ವಾಹನ ಸವಾರರಿಗೆ ಬೇಸರ ಉಂಟು ಮಾಡಿದೆ. ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ರೈತರು, ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಕೈ ಬಿಡಬೇಕಾಗಿದೆ. ಅಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.

 

Advertisement

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next