ಹೊಸದಿಲ್ಲಿ/ ಚೆನ್ನೈ : ದೇಶದಲ್ಲಿ ತೈಲದರ ಏರಿಕೆಯಾಗುತ್ತಲೇ ಇದೆ. ಶನಿವಾರವೂ ಪೆಟ್ರೋಲ್ ದರದಲ್ಲಿ 40 ಪೈಸೆ ಏರಿಕೆಯಾಗಿದ್ದು, 93.61 ರೂ.ಗಳಿಗೆ ಮುಟ್ಟಿದೆ. ಡೀಸೆಲ್ ದರದಲ್ಲೂ 40 ಪೈಸೆ ಏರಿಕೆಯಾಗಿದ್ದು, 85.84 ರೂ.ಗಳಿಗೆ ತಲುಪಿದೆ. ಈ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು “ಇದೊಂದು ದುಃಖಕರ ವಿಚಾರ’ ಎಂದಿದ್ದಾರೆ.
ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ. ಹೀಗಾಗಿ ಕೇಂದ್ರ -ರಾಜ್ಯ ಸರಕಾರಗಳು ಮಾತುಕತೆ ನಡೆಸಿ ದರ ಇಳಿಸಬೇಕು ಎಂದಿದ್ದಾರೆ.
ಏರುತ್ತಿರುವ ಇಂಧನ ದರ ತನ್ನ ಪಾಲಿಗೆ “ಧರ್ಮ ಸಂಕಟ’ದ ಸ್ಥಿತಿಯನ್ನು ತಂದೊಡ್ಡಿದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಚೆನ್ನೈ ಸಿಟಿಜನ್ ಫೋರಂನಲ್ಲಿ ಬಜೆಟ್ ಮೇಲಣ ಚರ್ಚೆಯಲ್ಲಿ ಭಾಗವಹಿಸಿದ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭ ಸಚಿವೆ ಈ ಮಾತನ್ನಾಡಿದ್ದಾರೆ. ಇಂಧನ ತೈಲ ದರ ಏರಿಕೆ ಎಲ್ಲರನ್ನೂ ಬಾಧಿಸುವ ವಿಚಾರ, ಇದಕ್ಕೆ ದರ ಇಳಿಕೆ ಮಾತ್ರವೇ ಪರಿಹಾರ ಎಂದರು. ತೈಲ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ ಎಂದು ತೈಲೋತ್ಪಾದಕ ದೇಶಗಳು ಹೇಳಿದ್ದು, ಇದರಿಂದ ಪೆಟ್ರೋಲ್ – ಡೀಸೆಲ್ ದರಗಳ ಮೇಲೆ ಇನ್ನಷ್ಟು ಒತ್ತಡ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದರ ಇಳಿಸಲು ಏನಾದರೂ ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ ಎಂಬ ವಿಚಾರವಾಗಿ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಚರ್ಚೆ ನಡೆಸಬೇಕು ಎಂದರು.
ಪೆಟ್ರೋಲ್, ಡೀಸೆಲ್ ಮಾರಾಟವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ದರ ಏರಿಕೆಗೆ ಪರಿಹಾರ ಸಿಗಬಹುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಜಿಎಸ್‌ಟಿ ಮಂಡಳಿಯಲ್ಲಿ ಕೂಲಂಕಷ ಚರ್ಚೆ, ರಾಜ್ಯಗಳ ಜತೆಗೆ ವಿಚಾರ ವಿಮರ್ಶೆ ನಡೆಯಬೇಕಿದೆ ಎಂದರು.