Advertisement

ತೈಲ ಬೆಲೆಗಳ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

11:24 PM Jul 08, 2021 | Team Udayavani |

ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನೇದಿನೆ ಹೆಚ್ಚುತ್ತಲೇ ಸಾಗಿದೆ. ಗುರುವಾರದಂದು ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಶತಕದ ಗಡಿ ದಾಟಿದ್ದರೆ ಡೀಸೆಲ್‌ ಕೂಡ ಕೆಲವೊಂದು ರಾಜ್ಯಗಳಲ್ಲಿ ಶತಕವನ್ನು ತಲುಪಿದ್ದರೆ ಮತ್ತೆ ಹಲವೆಡೆ ನೂರರ ಸನಿಹದಲ್ಲಿದೆ. ಇನ್ನು ಅಡುಗೆ ಇಂಧನದ ಬೆಲೆಯೂ ಏರುಗತಿಯಲ್ಲಿ ಸಾಗಿದ್ದು ಒಟ್ಟಾರೆ ಜನಜೀವನದ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದೆ.

Advertisement

ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದು ಬಹುತೇಕ ರಾಜ್ಯಗಳಲ್ಲಿ ಎಲ್ಲ ವಾಣಿಜ್ಯ ವ್ಯವಹಾರಗಳು, ದೈನಂದಿನ ಚಟುವಟಿಕೆಗಳು ನಿಧಾನಗತಿಯಲ್ಲಿ ಸಹಜ ಸ್ಥಿತಿಯತ್ತ ಮರಳತೊಡಗಿವೆ. ಎಲ್ಲ ವ್ಯವಹಾರಗಳು ಪುನರಾರಂಭಗೊಂಡಿರುವುದರಿಂದ ಆರ್ಥಿಕತೆ ಮತ್ತೆ ಹಳಿಗೆ ಬರುವ ನಿರೀಕ್ಷೆ ಸರಕಾರದ್ದಾಗಿದೆ. ಆದರೆ ತೈಲ ಬೆಲೆ ಮಾತ್ರ ಗಗನಮುಖೀಯಾಗಿಯೇ ಸಾಗಿರುವುದರಿಂದ ಸರಕಾರ ನಿರೀಕ್ಷಿಸಿದ ವೇಗದಲ್ಲಿ ಆರ್ಥಿಕತೆ ಚೇತರಿಕೆ ಕಾಣುವುದು ಕಷ್ಟಸಾಧ್ಯ. ಕೃಷಿಯಿಂದ ಹಿಡಿದು ಪ್ರತಿಯೊಂದೂ ವಲಯವೂ ತೈಲೋತ್ಪನ್ನಗಳನ್ನು ಆಧರಿಸಿರುವು ದರಿಂದ ತೈಲ ಬೆಲೆ ಈ ಎಲ್ಲ ವಲಯಗಳ ಚೇತರಿಕೆಗೆ ಬಲುದೊಡ್ಡ ತಡೆಯಾಗಿ ಪರಿಣಮಿಸಿದೆ. ಇನ್ನು ಜನರಿಗೂ ತೈಲ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ. ಕೊರೊನಾದಿಂದಾಗಿ ಮೊದಲೇ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಜನಸಾಮಾನ್ಯರಂತೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶದಲ್ಲಿ ಗುರುವಾರವೂ ತೈಲೆ ಬೆಲೆಗಳು ಏರಿಕೆಯಾಗಿವೆ. ಮೇ 4ರ ಬಳಿಕ ಪೆಟ್ರೋಲ್‌ ಬೆಲೆ 37ನೇ ಬಾರಿ ಮತ್ತು ಡೀಸೆಲ್‌ ಬೆಲೆ 35ನೇ ಬಾರಿ ಹೆಚ್ಚಳವಾದಂತಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ಲೀ.ಗೆ 10.16ರೂ. ಮತ್ತು ಡೀಸೆಲ್‌ ಲೀ. ಗೆ 8.89 ರೂ.ಗಳಷ್ಟು ಏರಿಕೆಯಾಗಿದೆ. ಅಂತಾ ರಾಷ್ಟ್ರೀ ಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿ ರುವುದರ ಪರಿಣಾಮ ದೇಶದಲ್ಲಿ ತೈಲ ಬೆಲೆಗಳು ಹೆಚ್ಚುತ್ತಿವೆ ಎಂದು ಸರಕಾರ ಮತ್ತು ತೈಲ ಕಂಪೆನಿಗಳು ಸ್ಪಷ್ಟನೆ ನೀಡುವ ಮೂಲಕ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 76.5 ಡಾಲರ್‌ಗಳಷ್ಟಿದೆ. ತೈಲ ಪೂರೈಕೆ ಯನ್ನು ಹೆಚ್ಚಿಸಬೇಕೆಂಬ ಭಾರತ ಸಹಿತ ಜಗತ್ತಿನ ಬಹುತೇಕ ತೈಲ ಆಮದು ರಾಷ್ಟ್ರಗಳ ಬೇಡಿಕೆಗೆ ಪೆಟ್ರೋ ಲಿಯಂ ರಫ್ತುದಾರ ರಾಷ್ಟ್ರ (ಒಪೆಕ್‌)ಗಳು ಸಮ್ಮತಿಸದೇ ಇರುವುದರಿಂದ ಸದ್ಯೋಭವಿಷ್ಯದಲ್ಲಿ ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 80-100 ಡಾಲರ್‌ಗಳಿಗೇರುವ ಸಾಧ್ಯತೆ ಇದೆ. ಹೀಗಾದಲ್ಲಿ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ 150 ರೂ. ಗಳ ಸನಿಹಕ್ಕೆ ಬಂದರೂ ಅಚ್ಚರಿ ಇಲ್ಲ.

ತೈಲೋತ್ಪಾದನೆ ಮತ್ತು ಪೂರೈಕೆ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಒಪೆಕ್‌ ರಾಷ್ಟ್ರಗಳ ಮನವೊಲಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಜ ತಾಂತ್ರಿಕ ಪ್ರಯತ್ನ, ಒತ್ತಡಗಳನ್ನು ಹೇರುವ ಜತೆಯಲ್ಲಿ ದೇಶದಲ್ಲಿನ ಜನ ಸಾಮಾನ್ಯರ ಹಿತದೃಷ್ಟಿಯಿಂದ ತೈಲೋತ್ಪನ್ನಗಳ ಬೆಲೆಗಳನ್ನು ಇಳಿ ಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು.

ಈ ಸಂದಿಗ್ಧ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆ ಪ್ರಮಾಣ ವನ್ನು ಕೊಂಚ ತಗ್ಗಿಸಿದರೆ ಮತ್ತು ತೈಲ ಕಂಪೆನಿಗಳು ತಾತ್ಕಾಲಿಕವಾಗಿಯಾದರೂ ತಮ್ಮ ಲಾಭಾಂಶದ ಒಂದು ಪಾಲನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಜನ  ಸಾಮಾನ್ಯರ ಮೇಲಣ ಹೊರೆ ಕಿಂಚಿತ್‌ ಆದರೂ ಕಡಿಮೆಯಾಗಲಿದೆ. ಇದರಿಂದ ಹಣದುಬ್ಬರವೂ ಕಡಿಮೆಯಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಇಳಿಕೆಯಾಗಲಿದೆ. ಇವೆಲ್ಲವೂ ದೇಶದ ಆರ್ಥಿಕತೆಯನ್ನು ಸಹಜ ಸ್ಥಿತಿಯತ್ತ ಮರಳಲು ಪೂರಕವಾದ ಬೆಳವಣಿಗೆಗಳಾಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next