Advertisement

ರಸ್ತೆಗೆ ವಾಹನಗಳಿಂದ ಆಯಿಲ್‌ ಸೋರಿಕೆ; ಸವಾರರಿಗೆ ಸಂಕಷ್ಟ

01:11 AM Apr 13, 2019 | Team Udayavani |

ವಿಶೇಷ ವರದಿ- ಮಹಾನಗರ: ವಾಹನಗಳು ಸಂಚರಿಸುತ್ತಿರುವಾಗಲೇ ಆಯಿಲ್‌ ಸೋರಿಕೆಯಾಗಿ ರಸ್ತೆಗೆ ಬೀಳುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಪರಿಣಾಮ ಇತರೇ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಎರಡು ವಾರಗಳಲ್ಲಿ ಈ ರೀತಿಯ ಮೂರು ಘಟನೆಗಳು ನಡೆದಿದ್ದು, ಮೆಕ್ಯಾನಿಕ್‌ಗಳ ಪ್ರಕಾರ ಇದಕ್ಕೆ ಮಾಲಕರ ಬೇಜವಾಬ್ದಾರಿ ಮತ್ತು ಕರಾವಳಿಯ ಉರಿ ಬಿಸಿಲು ಕೂಡ ಒಂದು ರೀತಿಯ ಕಾರಣ ಎನ್ನಲಾಗುತ್ತಿದೆ.

Advertisement

ವಾಹನಗಳು ಚಾಲನೆಯ ಸಮಯದಲ್ಲಿ ವಾತಾವರಣದ ಉಷ್ಣಾಂಶಕ್ಕಿಂತ ಹೆಚ್ಚಿನ ಬಿಸಿ ಇರುತ್ತದೆ. ಇದೇ ಕಾರಣಕ್ಕೆ ಎಂಜಿನ್‌ ಜತೆಗೆ ಗಾಡಿಯಲ್ಲಿರುವ ಆಯಿಲ್‌ ಸೀಲ್‌ ಕೂಡ ಬಿಸಿಯಿಂದ ಕೂಡಿರುತ್ತದೆ. ಉಷ್ಣತೆಯ ಹೆಚ್ಚಳದಿಂದ ಆಯಿಲ್‌ ಸೀಲ್‌ಗ‌ಳು ಸವೆದು ಹೋಗುವ ಸಾಧ್ಯತೆ ಹೆಚ್ಚಿದೆ. ಸವೆದು ಹೋದ ಜಾಗದಲ್ಲಿ ಆಯಿಲ್‌ ಸೋರಿಕೆಯಾಗುತ್ತದೆ. ವಾಹನಗಳಿಂದ ರಸ್ತೆಗೆ ಆಯಿಲ್‌ ಸೋರಿಕೆಯಾಗಿ ಇತರೇ ವಾಹನ ಸವಾರರು ಸಂಕಷ್ಟ ಅನುಭವಿಸಿದ ಪ್ರಕರಣಗಳು ನಗರದಲ್ಲಿ ಆಗಾಗ್ಗೆ ಸಂಭವಿಸುತ್ತಿದೆ. ಮಾ. 31ರಂದು ನಗರದ ಅಂಬೇಡ್ಕರ್‌ ವೃತ್ತದಿಂದ ಲಾಲ್‌ಬಾಗ್‌ವರೆಗೆ ಕೆಎಸ್ಸಾರ್ಟಿಸಿ ಬಸ್‌ನಿಂದ ಆಯಿಲ್‌ ಸೋರಿಕೆಯಾದ ಪರಿಣಾಮ 10ಕ್ಕೂ ಹೆಚ್ಚಿನ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದರು. ಇದೇ ವೇಳೆ, ಮಾನವೀಯತೆ ಮೆರೆದ ಆಟೋ ಚಾಲಕರು ತಮ್ಮ ರಿಕ್ಷಾದಲ್ಲಿ ಮಣ್ಣು ತುಂಬಿಸಿ ರಸ್ತೆಯಲ್ಲಿ ಚೆಲ್ಲಿದ್ದ ಆಯಿಲ್‌ ಮೇಲೆ ಹಾಕಿದ್ದರು.

ಅದೇ ರೀತಿ ಎ. 4ರಂದು ನಗರದ ಲಾಲ್‌ಬಾಗ್‌ನಲ್ಲಿ ಲಾರಿಯೊಂದರಿಂದ ಆಯಿಲ್‌ ಸೋರಿಕೆಯಾಗಿ ದ್ವಿಚಕ್ರವಾಹನ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದರು.

ಇದೇ ವೇಳೆ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಆ ಸ್ಥಳಕ್ಕೆ ಮಣ್ಣು ಹಾಕಿ ಅನಾಹುತ ತಡೆದಿದ್ದರು. ಎ. 12ರಂದು ನಗರದ ಕದ್ರಿ ರಸ್ತೆಯಲ್ಲಿ ವಾಹನದಿಂದ ಆಯಿಲ್‌ ಸೋರಿಕೆಯಾಗಿ ಅನೇಕ ವಾಹನಗಳು ಸ್ಕಿಡ್‌ ಆದ ಘಟನೆ ನಡೆದಿದೆ. ಬಳಿಕ ಸ್ಥಳೀಯರ ಸಹಾಯದಿಂದ ಆ ಸ್ಥಳಕ್ಕೆ ಮರಳು ಮತ್ತು ಮಣ್ಣು ಹಾಕಲಾಯಿತು. ಬಳಿಕ ಸುಗಮ ಸಂಚಾರ ಆರಂಭವಾಯಿತು.

ಆರಕ್ಷಕರೇ ರಕ್ಷಕರು
ವಾಹನಗಳಿಂದ ರಸ್ತೆಯಲ್ಲಿ ಆಯಿಲ್‌ ಸೋರಿಕೆಯಾದ ವೇಳೆಯಲ್ಲಿ ಉಳಿದ ವಾಹನಗಳು ಸಾಮಾನ್ಯವಾಗಿ ಸ್ಕಿಡ್‌ ಆಗುತ್ತವೆ. ಈ ಸಮಯದಲ್ಲಿ ನೆರವಿಗೆ ಧಾಮಿಸುವವರು ಸ್ಥಳೀಯರು ಮತ್ತು ಆರಕ್ಷಕರು. ಅಕ್ಕ ಪಕ್ಕದ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನೇಕ ಬಾರಿ ರಸ್ತೆಗೆ ಆಯಿಲ್‌ ಸೋರಿದ ಜಾಗಕ್ಕೆ ಮಣ್ಣು ಹಾಕಿದ್ದ ಉದಾಹರಣೆ ಇವೆ.

Advertisement

ಇತ್ತೀಚೆಗೆ ಲಾಲ್‌ಬಾಗ್‌ ವೃತ್ತದಲ್ಲಿ ವಾಹನದಿಂದ ಆಯಿಲ್‌ ಸೋರಿಕೆಯಾದ ಸಮಯದಲ್ಲಿ ಅಲ್ಲೇ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್‌ ಶ್ರೀಕಾಂತ್‌ ಅವರು ಆಯಿಲ್‌ ಚೆಲ್ಲಿದ ರಸ್ತೆಗೆ ಮಣ್ಣುಹಾಕಿ ಅನಾಹುತ ತಡೆದಿದ್ದರು.

ಹೀಗೆ ಮಾಡಿ ..
ವಾಹನ ಚಾಲನೆ ಸಮಯದಲ್ಲಿ ಒಂದು ವೇಳೆ ಆಯಿಲ್‌ ಸೋರಿಕೆ ಕಂಡುಬಂದರೆ ಕೂಡಲೇ ವಾಹನ ನಿಲ್ಲಿಸಿ ಮೆಕ್ಯಾನಿಕ್‌ಗೆ ಕರೆ ಮಾಡಿ. ಬೇಸಗೆ ಕಾಲದಲ್ಲಿ ಆಯಿಲ್‌ ಸೀಲ್‌ಗ‌ಳು ಸವೆದು ಹೋಗುವ ಸಾಧ್ಯತೆ ಹೆಚ್ಚಿದ್ದು, ಶೋರೂಂಗಳಲ್ಲಿ ಪರಿಶೀಲನೆ ನಡೆಸಿ. ಕೆಲವೊಂದು ಬಾರಿ ಆಯಿಲ್‌ ಬಾಕ್ಸ್‌ನ ಬೋಲ್ಟ್ ಸಡಿಲವಾಗಿದ್ದರೂ ಸೋರಿಯಾಗಬಹುದು. ಪ್ರಯಾಣದ ಮುನ್ನ ಪರಿಶೀಲಿಸಿ.

 ಆಯಿಲ್‌ ಸೀಲ್‌ ಸವೆದು ಸೋರಿಕೆ
ಬೇಸಗೆ ಸಮಯದಲ್ಲಿ ವಾಹನಗಳ ಎಂಜಿನ್‌ ಬಿಸಿ ಜಾಸ್ತಿ ಇರುತ್ತದೆ. ಇದರ ಪರಿಣಾಮ ಆಯಿಲ್‌ ಸೀಲ್‌ಗ‌ಳು ಸವೆದು ಹೋಗಬಹುದು. ಇದರಿಂದ ಆಯಿಲ್‌ ಸೋರಿಕೆ ಆಗಬಹುದು. ಒಂದು ವೇಳೆ ಆಯಿಲ್‌ ಸೋರಿಕೆ ಕಂಡುಬಂದರೆ ಹತ್ತಿರದ ಮೆಕ್ಯಾನಿಕ್‌ ಸಂಪರ್ಕಿಸಿ.
 - ರಾಜೇಶ್‌ ನಂತೂರು,
ಮೆಕ್ಯಾನಿಕ್‌

 ನ್ಯೂನತೆಗಳಿದ್ದಲ್ಲಿ ಸರಿಪಡಿಸಿ
ಸಾಮಾನ್ಯವಾಗಿ ವಾಹನ ಮಾಲಕರ ಬೇಜವಾಬ್ದಾರಿಯಿಂದಾಗಿ ಆಯಿಲ್‌ ಸೋರಿಕೆಯಾಗುತ್ತದೆ. ಸರಿಯಾದ ಸಮಯದಲ್ಲಿ ವಾಹನ ಸರ್ವಿಸ್‌ ಮಾಡಿಸಬೇಕು. ವಾಹನಗಳ ಬಿಡಿ ಭಾಗದಲ್ಲಿ ಯಾವುದಾದರೂ ನ್ಯೂನತೆಗಳಿದ್ದಲ್ಲಿ ಸರಿಪಡಿಸಬೇಕು.
 - ಅರುಣ್‌,
ವಾಹನ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next