ತೈಲ ಬೆಲೆ ನಮ್ಮ ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಅಗಾಧವಾದದ್ದು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಾಗುವ ಚಿಕ್ಕದೊಂದು ಬದಲಾವಣೆಯೂ ನಮ್ಮಲ್ಲಿ ದೊಡ್ಡ ಕಂಪನಕ್ಕೆ ಕಾರಣವಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ತೈಲ ಬೆಲೆ ಗಗನಕ್ಕೇರಿದಾಗ ಉಂಟಾದ ಪರಿಸ್ಥಿತಿ ಇದಕ್ಕೆ ಸ್ಪಷ್ಟ ಉದಾಹರಣೆ. ತೈಲ ಬೆಲೆ ಆರ್ಥಿಕ ವಿಷಯವಾದರೂ ಅದೀಗ ರಾಜಕೀಯ ಆಯಾಮ ಹೊಂದಿರುವುದರಿಂದ ದೇಶದ ಭವಿಷ್ಯವನ್ನೇ ಬದಲಾಯಿಸುವ ತಾಕತ್ತು ಅದಕ್ಕಿದೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.
ಅಕ್ಟೋಬರ್‌ನಲ್ಲಿ ಪೆಟ್ರೋಲು ಬೆಲೆ ಲೀಟರಿಗೆ 80 ರೂ. ದಾಟಿದಾಗ ಎನ್‌ಡಿಎ ಸರಕಾರ ತೀವ್ರ ಟೀಕೆ ಎದುರಿಸಬೇಕಾಗಿ ಬಂತು. ಇದು ಆರ್ಥಿಕ ಸ್ಥಿತಿಗತಿಯ ಕುರಿತಾದ ಕಳವಳದ ಟೀಕೆ ಎನ್ನುವುದಕ್ಕಿಂತಲೂ ರಾಜಕೀಯ ಲಾಭ ಉದ್ದೇಶಿತ ಟೀಕೆ ಎಂಬ ಅಭಿಪ್ರಾಯ ವ್ಯಕ್ತವಾದರೂ ಸರಕಾರ ಒಂದಷ್ಟು ಸಮಯ ಆತಂಕದ ಪರಿಸ್ಥಿತಿ ಎದುರಿಸಿದ್ದು ನಿಜ. ಹೀಗೆ ತೈಲ ಬೆಲೆ ರಾಜಕೀಯಕ್ಕೆ ನೇರವಾಗಿ ತಳಕು ಹಾಕಿಕೊಂಡಿರುವುದರಿಂದ ಅದರ ಲ್ಲಾಗುವ ಏರುಪೇರು ಶೇ. 80ರಷ್ಟು ತೈಲ ಆಮದುಗೊಳಿಸುವ ನಮಗೆ ಹೆಚ್ಚು ಮುಖ್ಯ. ಈ ಹಿನ್ನೆಲೆಯಲ್ಲಿ ಇದೀಗ ಸೌದಿ ಅರೇಬಿಯಾ ತೈಲ ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿರುವುದು ಮತ್ತೆ ಸಣ್ಣದೊಂದು ಆತಂಕಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗೆ ತಕ್ಕಂತೆ ನಮ್ಮಲ್ಲೂ ಬೆಲೆ ಏರಿಕೆ-ಇಳಿಕೆಯಾಗುವುದು ನಡೆದುಕೊಂಡು ಬಂದಿದೆ. ಹಾಗೆಂದು ಕಚ್ಚಾತೈಲ ಬೆಲೆ ತೀರಾ ಇಳಿದಾಗಲೂ ಇಂಧನ ಬೆಲೆಯನ್ನು ಆ ಮಟ್ಟಕ್ಕೆ ಇಳಿಸದೆ ಕೇಂದ್ರ ಸರಕಾರ ರಕ್ಷಣಾತ್ಮಕ ಆಟ ಆಡಿದ್ದನ್ನೂ ನಾವು ನೋಡಿದ್ದೇವೆ. ಇದು ಬೇರೆ ಸಂಗತಿ.
ಇರಾನ್‌ನಿಂದ ತೈಲ ಆಮದಿನ ಮೇಲೆ ಅಮೆರಿಕ ನಿಷೇಧ ಹೇರಲು ಮುಂದಾದಾಗ ತೈಲ ಬೆಲೆ ಇನ್ನಷ್ಟು ಹೆಚ್ಚಾಗುವ ಭೀತಿ ತಲೆದೋರಿತ್ತು. ಆದರೆ ಈ ನಿಷೇಧದಿಂದ ಭಾರತಕ್ಕೆ ಅಮೆರಿಕ ವಿನಾಯಿತಿ ನೀಡಿದ ಕಾರಣ ಭೀತಿ ದೂರವಾಗಿದೆ. ಈ ಕಾರಣಕ್ಕೆ ತೈಲ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿಲ್ಲ. ಇದು ತುಸು ಸಮಾಧಾನಕರ ಸಂಗತಿ. ಆದರೆ ಇದೀಗ ಪೂರೈಕೆ ಹೆಚ್ಚಾಗಿ ಬೆಲೆ ಇಳಿಯುತ್ತಿದೆ ಎಂಬ ಕಾರಣವೊಡ್ಡಿ ಸೌದಿ ನೇತೃತ್ವದ ತೈಲ ಉತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನೇ ಕಡಿತಗೊಳಿಸಲು ಮುಂದಾಗಿವೆ.
ಸೌದಿ ಅರೇಬಿಯ ಮುಂದಿನ ತಿಂಗಳಿನಿಂದಲೇ ನಿತ್ಯ 5 ಲಕ್ಷ ಬ್ಯಾರಲ್ ಕಚ್ಚಾತೈಲ ಉತ್ಪಾದನೆ ಕಡಿತಗೊಳಿಸಲಿದೆ. ಮುಂದಿನ ವರ್ಷದಿಂದ ಉತ್ಪಾದನೆ ಕಡಿತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಉಳಿದ ತೈಲ ಉತ್ಪಾದಕ ದೇಶಗಳೂ ಈ ಹಾದಿಯನ್ನು ಅನುಸರಿಸಲಿವೆ. ಆಗ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿ ಕಚ್ಚಾತೈಲ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗೆ ಕೃತಕ ಅಭಾವ ಸೃಷ್ಟಿಸಿ ತನ್ನ ಬೆಲೆ ಕುಸಿಯದಂತೆ ತಡೆಯುವ, ಆ ಮೂಲಕ ತಮ್ಮ ಹಿತ ಕಾಯ್ದುಕೊಳ್ಳಲು ತೈಲ ಉತ್ಪಾದಕ ದೇಶಗಳು ಅನುಸರಿಸಿದರೆ ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕತೆಯ ಮೇಲೆ ಹೊರೆ ಬೀಳಲಿದೆ. ಉತ್ಪಾದಕ ರಾಷ್ಟ್ರಗಳಿಗೆ ಬೇಕಾಗಿರುವುದೂ ಇದೇ. ತೈಲ ಆಮದಿನಲ್ಲಿ ನಮಗೆ ಜಗತ್ತಿನಲ್ಲಿ ನಾಲ್ಕನೇ ಸ್ಥಾನವಿದೆ. ಜಗತ್ತಿನ ಒಟ್ಟಾರೆ ಆಮದಿನಲ್ಲಿ ನಮ್ಮ ಪಾಲು ಶೇ. 6.9. ಹಾಗಾಗಿ ಆಮದು ಅನಿವಾರ್ಯ. ಆದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಏರುಪೇರು ಎದುರಿಸಲು ತಕ್ಕಷ್ಟು ಸಿದ್ಧತೆ ಮಾಡಿಕೊಳ್ಳುವುದಷ್ಟೇ ನಮ್ಮ ಮುಂದಿರುವ ದಾರಿ.
ಮೊದಲಿನಿಂದಲೂ ಈ ನಿಟ್ಟಿನಲ್ಲಿ ನಮ್ಮ ನೀತಿ ನಿರೂಪಕರು ಮತ್ತು ಆಡಳಿತ ನಡೆಸುವವರು ಗಮನಹರಿಸಿದ್ದು ಬಹಳ ಕಡಿಮೆ. ದೇಶದಲ್ಲಿ ಲಭ್ಯವಿರುವ ತೈಲ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಕೆಲಸವೂ ನಡೆಸುತ್ತಿಲ್ಲ. ಆಮದು ನೀತಿಯೂ ಸಮರ್ಪಕವಾಗಿಲ್ಲ. ದೇಶದ ಅಪಾರವಾದ ಇಂಧನ ಬೇಡಿಕೆಯನ್ನು ಈಡೇರಿಸಲು ಅತ್ಯಂತ ಸ್ಪಷ್ಟ ಮತ್ತು ಸಮಗ್ರವಾದ ನೀತಿಯೊಂದರ ಅಗತ್ಯ ನಮಗಿದೆ. ಈ ನೀತಿ ಬಿಕ್ಕಟ್ಟಿನ ಸಂದರ್ಭಗಳಲ್ಲೂ ತೈಲ ಪೂರೈಕೆ ಸರಾಗವಾಗಿರುವಂತೆ ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಆಗಬೇಕಾದ ಬದಲಾವಣೆಗಳತ್ತ ಗಮನ ಹರಿಸಲು ಈಗ ಸಕಾಲ. ಬೆಂಕಿ ಹತ್ತಿಕೊಂಡ ಬಳಿಕ ಬಾವಿ ತೋಡುವ ಧೋರಣೆ ಬಿಟ್ಟು ಈಗಲೇ ಸೂಕ್ತ ಉಪಕ್ರಮಗಳತ್ತ ಕಾರ್ಯೋನ್ಮುಖವಾಗುವುದು ಆದ್ಯತೆಯ ಕರ್ತವ್ಯ.