ನವದೆಹಲಿ: ರಾಷ್ಟ್ರೀಯ ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ಬಿಗಿ ನಿರ್ಬಂಧ ವನ್ನು ವಾಹನಗಳ ಮೇಲೆ ಹೇರಿದೆ. ಇಂಧನ ಬಳಕೆ ಕಡಿಮೆ ಮಾಡಲು, ಎಲ್ಲ ಮಾದರಿ ವಾಹನಗಳು ಮುಂದಿನ ಏಪ್ರಿಲ್‌ನಿಂದ ಇಂಧನ ಬಳಕೆ ಗುಣಮಟ್ಟಕ್ಕೆ ಬದ್ಧರಾಗುವಂತೆ ಸೂಚಿಸಿದೆ.
ವಾಹನಗಳ ತೈಲ ಬಳಕೆಯ ಗುಣಮಟ್ಟವನ್ನು, ವಾಹನೋದ್ಯಮ ಗುಣಮಟ್ಟ 149 ವಿಧಿಯ ಪ್ರಕಾರ ಪರಿಶೀಲಿಸಲಾಗುವುದು ಎಂದು ತಿಳಿಸಿದೆ.
ಜು.1ರಂದೇ ಅಧಿಸೂಚನೆ ಹೊರಡಿಸಿರುವ ಸಚಿವಾಲಯ, ವಿವಿಧ ವರ್ಗಕ್ಕೆ ಸೇರಿದ ಹಗುರ, ಮಧ್ಯಮ ಮತ್ತು ಭಾರೀ ತೂಕದ ವಾಹನಗಳು ತೈಲ ಬಳಕೆ ಗುಣಮಟ್ಟಕ್ಕೆ ಬದ್ಧವಾಗಿರಬೇಕು. ಅವು ಭಾರತದಲ್ಲೇ ತಯಾರಾಗಿರಲಿ, ವಿದೇಶ ದಲ್ಲೇ ತಯಾರಾಗಿರಲಿ ನಿಯಮಗಳಿಗೆ ಬದ್ಧವಾಗಿರುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಈ ಅಧಿಸೂಚನೆಗೂ ಮುನ್ನ ಸಚಿವಾಲಯ ಬಿಡುಗಡೆ ಮಾಡಿದ್ದ ಒಂದು ಹೇಳಿಕೆಯಲ್ಲಿ ಎಂ1 ವರ್ಗಕ್ಕೆ ಸೇರಿದ ವಾಹನಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಾಗಿತ್ತು. ಇದೀಗ ಎಲ್ಲ ವಾಹನಗಳಿಗೂ ಕಡ್ಡಾಯ ಮಾಡಲಾಗಿದೆ.