Advertisement
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಮನಸ್ಸು ಪುಳಕಗೊಳ್ಳುತ್ತದೆ. ಬೆಳಕಿನ ಗುಣವೇ ಹಾಗೆ. ಮನೆ-ಮನಗಳಲ್ಲಿ ನವೋತ್ಸಾಹ, ಅಪ್ರತಿಮ ಚೈತನ್ಯವನ್ನು ತುಂಬಬಲ್ಲ ಶಕ್ತಿ ಬೆಳಕಿಗಿದೆ. ಇನ್ನೇನು ಚಳಿಗಾಲ ಆರಂಭವಾಗುತ್ತದೆ ಎನ್ನುವ ಹೊತ್ತಿನಲ್ಲಿ ಬರುವ ಈ ಹಬ್ಬದಲ್ಲಿ, ಹಣತೆಗಳ ಸಾಲು ದೀಪ, ಪಟಾಕಿಗಳ ಸದ್ದು, ಭೂರಿಭೋಜನ, ಅಭ್ಯಂಗ ಸ್ನಾನಗಳೆಲ್ಲವೂ ಮಿಳಿತಗೊಂಡಿವೆ.
Related Articles
Advertisement
ಅಭ್ಯಂಗವನ್ನು ನಿತ್ಯವೂ ಆಚರಿಸಬೇಕು. ಏಕೆಂದರೆ, ಅದು ಮುಪ್ಪನ್ನು ಮುಂದೂಡುತ್ತದೆ! “ಜರಾ’ ಎಂದರೆ ಮುಪ್ಪು. ವಯಸ್ಸಾಗುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗದು. ಆದರೆ, ಅದನ್ನು ನಿಧಾನಗೊಳಿಸಿ, ಮುಂದೂಡಬಹುದು. ಇದಕ್ಕೆ ಸಂಬಂಧಿಸಿದ, ಜಿರಿಯಾಟ್ರಿಕ್ ಎಂಬ ವೈದ್ಯ ವಿಭಾಗ ಆಧುನಿಕವಾಗಿ ಹುಟ್ಟಿ ಕೆಲವೇ ದಶಕಗಳಾಗಿವೆ. ಆದರೆ, ಸಾವಿರಾರು ವರ್ಷಗಳಿಂದ ಜನರ ಸ್ವಾಸ್ಥ್ಯ ಪಾಲನೆ ಮಾಡುತ್ತಿರುವ ಆಯುರ್ವೇದದ ಎಂಟು ಅಂಗಗಳಲ್ಲಿ ಜರಾ ಚಿಕಿತ್ಸೆಯೂ ಒಂದು!
ದೇಹದ ವಯಸ್ಸನ್ನು ಎರಡು ರೀತಿಯಲ್ಲಿ ಅಳೆಯಬಹುದು. ಕ್ಯಾಲೆಂಡರ್‌ಗೆ ಅನುಗುಣವಾಗಿ ಆಗುವ ವಯಸ್ಸು ಕ್ರೊನೋಲಾಜಿಕಲ್ ವಯಸ್ಸು. ಇದನ್ನು ಬದಲಿಸಲಾಗದು. ಶರೀರದ ಜೀವಕೊಶಗಳಿಗೆ ಆಗುವ ವಯಸ್ಸು ಬಯೋಲಾಜಿಕಲ್ ವಯಸ್ಸು. ಇದನ್ನು ಬದಲಿಸಲು ಸಾಧ್ಯವಿದೆ. ದೇಹದ ಒಂದು ಅಂಗವಾದ ಕಣ್ಣು, ನಾನಾರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದರೆ, ಕಣ್ಣಿನ ಜೀವಕೋಶಗಳ ವಯಸ್ಸು ಕ್ಯಾಲೆಂಡರ್ ಪ್ರಕಾರದ ವಯಸ್ಸಿಗಿಂತ ಹೆಚ್ಚಾಗಿರುತ್ತದೆ.
40 ವರ್ಷ ಪ್ರಾಯದ ವ್ಯಕ್ತಿಯ ಕಣ್ಣಿಗೆ 50 ವರ್ಷವಾಗಿರಬಹುದು. ಬಹಳ ಚೆನ್ನಾಗಿ ಆರೈಕೆ ಮಾಡಿ ಕಣ್ಣನ್ನು ಸಂರಕ್ಷಿಸಿದ್ದರೆ, ಅಲ್ಲಿನ ಜೀವಕೋಶಗಳಿಗೆ ಕಡಿಮೆ ವಯಸ್ಸಾಗಿರುತ್ತದೆ. ನಿಜಾರ್ಥದಲ್ಲಿ ಕಣ್ಣುಗಳಿಗೆ ಕೇವಲ ಮೂವತ್ತರ ಪ್ರಾಯ! ಹೀಗೆ ಸಾವು-ಬದುಕು, ಆರೋಗ್ಯ- ಅನಾರೋಗ್ಯವು ಅಂಗಾಂಗ-ಆವಯವಗಳ ಜೀವಕೋಶಗಳಿಗಾದ ವಯಸ್ಸನ್ನು ಅವಲಂಬಿಸಿರುತ್ತದೆಯೇ ಹೊರತು, ನಾವು ಲೆಕ್ಕ ಹಾಕುವ ವಯಸ್ಸನ್ನಲ್ಲ. ಈ ಕೌಶಲ್ಯವನ್ನೇ ಮುಪ್ಪು ಮುಂದೂಡುವುದು ಎನ್ನುತ್ತೇವೆ.
ಇದುವೇ ಅಭ್ಯಂಗದಿಂದ ಆಗುವ ಮೊದಲ ಪ್ರಯೋಜನ. ಶರೀರದ ಸುಸ್ತು ನಿವಾರಣೆ, ಅಧಿಕ ಶ್ರಮದಿಂದಾದ ವಾತದ ಹತೋಟಿ, ವಾತರೋಗಗಳೆಲ್ಲವೂ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ನಿವಾರಣೆಯಾಗುತ್ತವೆ. ಕಣ್ಣುಗಳಿಗೆ ಬಲ ನೀಡಿ ಶರೀರ ಪುಷ್ಟಿಗೆ ಕಾರಣವಾಗುತ್ತದೆ. ಆರೋಗ್ಯಪೂರ್ಣ ದೀರ್ಘಆಯುಷ್ಯ, ಸೊಂಪಾದ ನಿದ್ರೆ, ಕಾಂತಿಯುತ ಚರ್ಮ, ದೇಹದಾರ್ಢ್ಯತೆಗಳೆಲ್ಲವೂ ಅಭ್ಯಂಜನದಿಂದ ಫಲಿಸುತ್ತವೆ. ಶರೀರವನ್ನು ಎಣ್ಣೆ ಹಚ್ಚಿ ನೀಯುವುದರಿಂದ ಮನಃಶಾಂತಿ, ಮನೋಲ್ಲಾಸ, ನವಚೈತನ್ಯದಿಂದ ಲವಲವಿಕೆ ನಳನಳಿಸುವುದು ಎಲ್ಲರಿಗೂ ಅನುಭವ ವೇದ್ಯ ವಿಚಾರ.
ಎಳ್ಳೆಣ್ಣೆಯೇ ಒಳ್ಳೆಣ್ಣೆ: ಇಂಥ ಅಭ್ಯಂಗದ ಕುರಿತಾಗಿ ಜಪಾನ್‌ನಲ್ಲಿ ಮೂರು ದಶಕಗಳ ಹಿಂದೆ ಒಂದು ಸಂಶೋಧನೆ ನಡೆಯಿತು. ಜಗತ್ತಿನಲ್ಲಿ ಅವಿರತ ಪ್ರಯತ್ನಗಳಿಂದ ಅಲ್ಲಿಯ ತನಕ ಕಂಡು ಹಿಡಿಯಲಾಗಿದ್ದ ಅತಿಶ್ರೇಷ್ಠ ಆ್ಯಂಟಿ ಓಕ್ಸಿಡೆಂಟ್ ಔಷಧಕ್ಕಿಂತ ಬೆಟ್ಟದ ನೆಲ್ಲಿಕಾಯಿ ಹದಿನಾರು ಪಟ್ಟು ಹೆಚ್ಚು ಶಕ್ತಿಶಾಲಿ ಎಂದು ಫಲಿತಾಂಶ ಹೇಳಿತು! (ಜೀವಕೋಶಗಳಿಗೆ ವಯಸ್ಸಾಗುವುದನ್ನು ನಿಧಾನಗೊಳಿಸುವ ಅಂಶಕ್ಕೆ ಆ್ಯಂಟಿ ಓಕ್ಸಿಡೆಂಟ್ ಎನ್ನುತ್ತಾರೆ)
ಅಭ್ಯಂಗಕ್ಕೆ ಬಳಸುವ ಎಳ್ಳೆಣ್ಣೆ, ಸಾವಿರ ಪಟ್ಟು ಹೆಚ್ಚು ಬಲವುಳ್ಳ ಸರ್ವಶ್ರೇಷ್ಠ ಆ್ಯಂಟಿ ಓಕ್ಸಿಡೆಂಟ್‌ಎಂದು ಸಾರಿತು. ಅಂದರೆ, ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದು, ಜೀವಕೋಶಗಳ ವಯಸ್ಸನ್ನು ತಡೆಯುವ ಅತ್ಯುತ್ಕೃಷ್ಟ ವಿಧಾನ ಎಂದಾಯಿತು. “ಜೀರಿಯಾಟ್ರಿಕ್ಸ್ ‘ ಎಂಬುದು ಜೀವಕೋಶಗಳನ್ನು ಅವಲಂಬಿತವಾಗಿರುವ ವೈದ್ಯಕೀಯ ವಿಭಾಗ. ಈ ಜೀವಕೋಶಗಳನ್ನು ಕಂಡು ಹಿಡಿಯುವುದಕ್ಕೂ ಸಾವಿರಾರು ವರ್ಷಗಳ ಮೊದಲೇ ಆಯುರ್ವೇದ ತಿಳಿಹೇಳಿದ್ದು ಇದನ್ನೇ!
ಇನ್ನೂ ಒಂದು ವಿಶೇಷವಿದೆ. ಆಯುರ್ವೇದದಲ್ಲಿ ನೂರಾರು ಔಷಧೀಯ ತೈಲಗಳನ್ನು ಹೇಳಲಾಗಿದ್ದು, ಅವುಗಳಲ್ಲಿ ಶೇ. 90ರಷ್ಟರಲ್ಲಿ ಎಳ್ಳೆಣ್ಣೆಯೇ ಆಧಾರ ದ್ರವ್ಯ. ಉಳಿದೆಲ್ಲಾ ಎಣ್ಣೆಗಳಿಗೆ ಹೋಲಿಸಿದರೆ ಎಳ್ಳೆಣ್ಣೆಯಲ್ಲೇ ಅತಿ ಹೆಚ್ಚಿನ ಆ್ಯಂಟಿ ಓಕ್ಸಿಡೆಂಟ್‌ಗುಣವಿದೆ. ಆದ್ದರಿಂದಲೇ ಅದು ಕೇವಲ ಎಳ್ಳೆಣ್ಣೆಯಲ್ಲ, ಒಳ್ಳೆಣ್ಣೆ! ಕೇರಳ, ತಮಿಳುನಾಡುಗಳಲ್ಲೂ ಇದಕ್ಕೆ ನಲ್ಲೆಣ್ಣೆಯೆಂಬ ಹೆಸರಿರುವುದು ಕಾಕತಾಳಿಯವೇನಲ್ಲ.
ಪ್ರಶಸ್ತ ಕಾಲ: ಮಳೆಗಾಲದಲ್ಲಿ ಎಲ್ಲರ ದೇಹದಲ್ಲೂ ವಾತ ಹೆಚ್ಚಾಗಿರುತ್ತದೆ.ಅದನ್ನು ಹತೋಟಿಗೆ ತರಲು ದೀಪಾವಳಿ ಹಬ್ಬಕ್ಕೂ, ಅಭ್ಯಂಜನ ಸ್ನಾನಕ್ಕೂ ನಂಟು ಕಲ್ಪಿಸಿರುವುದರಲ್ಲಿ ಹಿರಿಯರ ಜಾಣತನವಿದೆ. ಶರೀರದ ಒಳಹೊರಗಿನ ಸ್ವಾಸ್ಥ್ಯ ಹಾಗೂ ಸೌಂದರ್ಯದ ವಿಷಯದಲ್ಲಿ ಮಹತ್ವಪೂರ್ಣ ಭೂಮಿಕೆಯಿರುವ ಅಭ್ಯಂಜನ ಸ್ನಾನವು ದೀಪಾವಳಿ ಹಬ್ಬದಿಂದ ಮೊದಲ್ಗೊಂಡು ನಿತ್ಯ ನಿರಂತರ ಸಾಗಲಿ.ಹಬ್ಬವು ಎಲ್ಲರಿಗೂ ಹರುಷ ತರಲಿ.
ಅಭ್ಯಂಗ ಸ್ನಾನ ಹೇಗೆ?: ಅಭ್ಯಂಜನ ಮಾಡುವ ಕ್ರಮ ಸಮರ್ಪಕವಾಗಿದ್ದರೆ ಫಲಿತಾಂಶವೂ ಉತ್ತಮವಾಗಿರುತ್ತದೆ. ವಾತ ಪ್ರಕೃತಿಯವರಿಗೆ ಅಶ್ವಗಂಧ ಬಲಾ ತೈಲ, ಪಿತ್ತ ಪ್ರಕೃತಿಯವರಿಗೆ ಧನ್ವಂತರಿ ತೈಲ, ಕಫ ಪ್ರಕೃತಿಯವರಿಗೆ ಕ್ಷೀರಬಲಾ ತೈಲದ ಬಳಕೆ ಅಭ್ಯಂಜನಕ್ಕೆ ಅತಿ ಪ್ರಶಸ್ತ. ನೀರನ್ನು ಬಿಸಿ ಮಾಡಿ, ಅದರ ಮೇಲೆ ತೈಲವನ್ನಿಟ್ಟು ಉಗುರು ಬೆಚ್ಚಗೆ ಮಾಡಿಕೊಳ್ಳಬೇಕು. ನೇರವಾಗಿ ಬೆಂಕಿಗೊಡ್ಡಿ ಬಿಸಿ ಮಾಡಬಾರದು. ಎದೆ, ಹೊಟ್ಟೆ, ಬೆನ್ನು ಹಾಗೂ ಕೀಲು ಭಾಗಕ್ಕೆ ವೃತ್ತಾಕಾರವಾಗಿ ನೀವಬೇಕು. ಶರೀರದ ಉಳಿದ ಭಾಗಗಳಲ್ಲಿ ರೋಮವು ಯಾವ ಕಡೆ ಮುಖ ಮಾಡಿದೆಯೋ ಆ ದಿಕ್ಕಿನಲ್ಲೇ, ಅಂದರೆ ಕೈಕಾಲುಗಳಲ್ಲಿ ಮೇಲಿನಿಂದ ಕೆಳಕ್ಕೆ ಅಭ್ಯಂಗ ಮಾಡಬೇಕೆಂದರ್ಥ.
ಹತ್ತು ನಿಮಿಷ ಸಾಕು: ಎಣ್ಣೆ ಹಚ್ಚಿ ಗಂಟೆಗಟ್ಟಲೆ ಬಿಡಬೇಕಾದ ಅಗತ್ಯವಿಲ್ಲ. ಮೈಗೆ ಹಚ್ಚಿದ ತೈಲ ದೇಹದೊಳಕ್ಕೆ ಪ್ರವೇಶಿಸಲು ಬೇಕಾಗುವ ಸಮಯ ಕೇವಲ ಆರು ನಿಮಿಷ ಎನ್ನುತ್ತದೆ ಆಯುರ್ವೇದ. ಹಾಗಾಗಿ, ಎಣ್ಣೆ ಹಚ್ಚಿ ಹತ್ತು ನಿಮಿಷಗಳ ಬಳಿಕ ಉಗುರು ಬಿಸಿಯಿರುವ ನೀರಿನಿಂದ ಸ್ನಾನ ಮಾಡುವುದು ಸೂಕ್ತ. ಇಡೀ ದೇಹಕ್ಕೆ ತೈಲ ಅಭ್ಯಂಜನ ಮಾಡಿದರೆ ಒಳ್ಳೆಯದು. ಅದು ಸಾಧ್ಯವೇ ಇಲ್ಲ ಎಂದಾದರೆ, ಕನಿಷ್ಠ ಪಕ್ಷ ತಲೆ, ಕಿವಿ, ಪಾದಗಳಿಗೆ ಹಚ್ಚಲೇಬೇಕು. ಸಮಯವಿಲ್ಲದವರಿಗೂ ಆಯುರ್ವೇದ ತೋರಿದ ದಾರಿಯಿದು.
* ಡಾ. ಗಿರಿಧರ ಕಜೆ, ಆಯುರ್ವೇದ ತಜ್ಞರು ಪ್ರಶಾಂತಿ ಆಯುರ್ವೇದಿಕ್ ಸೆಂಟರ್