ಸ್ನೇಹ, ಪ್ರೀತಿ, ತ್ಯಾಗ … ಇದು ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವ ಕಥೆ. ಈ ಕಥೆಗಳನ್ನು ಯಾವುದೇ ಆಯಾಮ, ಪರಿಸರದಲ್ಲಿ ಹೇಳಬಹುದು. ಅದೇ ಕಾರಣದಿಂದ ಪ್ರೇಮಕಥೆಗಳಿಗೆ ಕೊನೆ ಎಂಬುದೇ ಇಲ್ಲ. ಈ ವಾರ ತೆರೆಕಂಡಿರುವ “ಓ ಮೈ ಲವ್’ ಚಿತ್ರ ಕೂಡಾ ಒಂದು ಲವ್‌ಸ್ಟೋರಿ.
ಹಾಗಂತ ಇದನ್ನು ಕೇವಲ ಲವ್‌ಸ್ಟೋರಿ ಎಂದು ಹೇಳುವಂತಿಲ್ಲ. ಇಲ್ಲಿ ಸ್ನೇಹಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ. ಆ ಮಟ್ಟಿಗೆ ನಿರ್ದೇಶಕ ಸ್ಟೈಲ್ ಶ್ರೀನು ಯೂತ್‌ಫುಲ್ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ.
ಒಬ್ಬ ನವನಟನ ಸಿನಿಮಾದಲ್ಲಿ ಯಾವ್ಯಾವ ಅಂಶಗಳು ಹೈಲೈಟ್ ಆಗ ಬೇಕೋ, ಅವೆಲ್ಲವನ್ನು ಈ ಚಿತ್ರದಲ್ಲಿ ಸುಂದರವಾಗಿ ಜೋಡಿಸಲಾಗಿದೆ. ಕಥೆಯ ಬಗ್ಗೆ ಹೇಳುವುದಾದರೆ “ಓ ಮೈ ಲವ್’ ಕಾಲೇಜು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ. ಕಾಲೇಜು ಎಂದ ಮೇಲೆ ಅಲ್ಲಿ ನಡೆ ಯುವ ಫನ್‌ರೈಡ್‌ಗಳಿಗೆ, ಲವ್‌ಸ್ಟೋರಿಗಳಿಗೆ, ಸಣ್ಣ ಜಿದ್ದು, ಸ್ಕೆಚ್‌ಗಳಿಗೇನೂ ಕೊರತೆಯಿಲ್ಲ. ಅವೆಲ್ಲವನ್ನು ಸೇರಿಸಿಕೊಂಡು “ಓ ಮೈ ಲವ್’ ಚಿತ್ರವನ್ನು ಕಟ್ಟಿಕೊಡಲಾಗಿದೆ. ಒಂದು ಕಮರ್ಷಿಯಲ್ ಸಿನಿಮಾದಲ್ಲಿರಬೇಕಾದ ಜಬರ್ದಸ್ತ್ ಫೈಟ್, ಕಲರ್‌ಫುಲ್ ಡ್ಯಾನ್ಸ್. ಖಡಕ್ ಡೈಲಾಗ್… ಹೀಗೆ ಎಲ್ಲದರ ಮಿಳಿತ “ಓ ಮೈ ಲವ್’.
ಈ ಸಿನಿಮಾದಲ್ಲಿ ತಾನು ಏನು ಹೇಳಲು ಹೊರಟಿದ್ದೇನೆ ಎಂಬ ಕ್ಲಾéರಿಟಿ ಇರುವುದರಿಂದ ಪ್ರೇಕ್ಷಕ ಗೊಂದಲ ಮುಕ್ತ. ಆ ಮಟ್ಟಿಗೆ ನಿರ್ಮಾಪಕರೇ ಬರೆದ ಕಥೆಯನ್ನು ನಿರ್ದೇಶಕ ಶ್ರೀನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
ಇದು ಹೊಸ ನಾಯಕನ ಸಿನಿಮಾವಾದರೂ ಚಿತ್ರದ ಅದ್ಧೂರಿತನಕ್ಕೇನು ನಿರ್ಮಾಪಕರು ಕಡಿಮೆ ಮಾಡಿಲ್ಲ. ಒಂದೊಂದು ದೃಶ್ಯವನ್ನು ಕಲರ್‌ಫುಲ್ ಆಗಿಯೇ ಕಟ್ಟಿಕೊಟ್ಟಿದ್ದಾರೆ. ಫೈಟ್, ಹಾಡು, ದೃಶ್ಯ… ಎಲ್ಲವೂ ಅದ್ಧೂರಿಯಾಗಿವೆ. ನಾಯಕ ಅಕ್ಷಿತ್ ನಟನೆ, ಹಾಡು, ಫೈಟ್… ಎಲ್ಲದರಲ್ಲೂ ಶ್ರಮ ಹಾಕಿರುವುದು ಎದ್ದು ಕಾಣುತ್ತದೆ. ಈ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ನಾಯಕಿ ಕೀರ್ತಿ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಎಸ್.ನಾರಾಯಣ್, ಸಂಗೀತ, ದೇವ್‌ಗಿಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಒಂದು ಯಂಗ್ ಲವ್ ಸ್ಟೋರಿಯನ್ನು ಕಣ್ತುಂಬಿ ಕೊಳ್ಳಬೇಕೆಂದು ಕೊಂಡವರು “ಓ ಮೈ ಲವ್’ ಚಿತ್ರ ನೋಡಲು ಅಡ್ಡಿಯಿಲ್ಲ.
ಆರ್.ಪಿ