Advertisement
“ನನಗೂ ಸಾಕಾಗಿ ಹೋಗಿದೆ. ಬಾಯ್ಬಿಟ್ಟು ಹೇಳಿದರೂ ಈ ಗಂಡು ಜನ್ಮಕ್ಕೆ ಅರ್ಥನೇ ಆಗಲ್ಲಾ. ಇವರೇನು ಮನುಷ್ಯನೋ ಅಲ್ಲವೋ ಗೊತ್ತೇ ಆಗೊಲ್ಲಾ…’ ಗೆಳತಿ ರೇಖಾಳ ಮನೆ ಮುಂದೆ ನಿಂತು ಕರೆಗಂಟೆ ಒತ್ತುವಾಗ ಜೋರು ಜೋರಾಗೇ ಅವಳ ಮಾತುಗಳು ಕೇಳಿಸುತ್ತಿದ್ದವು. ಆಫೀಸಿಗೆ ಹೊರಟಿದ್ದ ಅವಳ ಗಂಡ ರವಿ ಕಾರ್ ಪಾರ್ಕಿಂಗ್ ಬಳಿ ಸಿಕ್ಕಿದ್ದರು. ಮಕ್ಕಳನ್ನೂ ಈ ಹೊತ್ತಿಗಾಗಲೆ ಸ್ಕೂಲಿಗೆ ಕಳುಹಿಸಿರುತ್ತಾಳೆ. ಹೀಗೇಕೆ ಒಬ್ಬೊಬ್ಬಳೇ ಜೋರಾಗಿ ಕೂಗುತ್ತಿದ್ದಾಳೆ ಎಂದುಕೊಳ್ಳುತಾ “ಯಾಕೆ ? ಏನಾಯ್ತು?’ ಎಂದು ಕೇಳುತ್ತಲೇ ಒಳಗೆ ಹೋದೆ.
Related Articles
Advertisement
ಮಹಿಳೆಯರಿಗೆ ಹಲವು ಕಾರಣಗಳಿಗೆ ಸಿಟ್ಟು ಬರುತ್ತದೆ ಎನ್ನುವುದೇನೋ ನಿಜ. ಅದಕ್ಕೆ ಬಹುಮುಖ್ಯ ಕಾರಣ, ಗಂಡನಿಗೆ ತನ್ನ ಕರ್ತವ್ಯದ ಬಗ್ಗೆ ಅರಿವಿಲ್ಲ ಎನ್ನುವುದು. ಮನೆಯ ಎಲ್ಲಾ ಜವಾಬ್ದಾರಿಗಳನ್ನೂ, ಕೆಲಸಗಳನ್ನೂ ಅವಳೇ ಮಾಡಲಿ ಎಂದು ಬಿಟ್ಟರೆ, ಎಷ್ಟು ದಿನ ತಾನೆ ಅವಳು ವಿರೋಧಿಸದೆ ಅದು ತನ್ನದೇ ಕರ್ತವ್ಯ ಎಂದು ಮಾಡಿಯಾಳು? ಅವಳಿಗೆ ಎಲ್ಲವನ್ನೂ ಮಾಡುವುದು ಕಷ್ಟವಂತಲ್ಲ. ಮನೆಯಲ್ಲಿಯೇ ಇರುತ್ತಾಳಲ್ಲಾ; ಮಾಡುತ್ತಾಳೆ ಎನ್ನುವ ಅಭಿಪ್ರಾಯ ಅವನದು. ಮನೆಗೆಲಸ, ಮಕ್ಕಳ ನೋಡಿಕೊಳ್ಳುವ ಕೆಲಸವನ್ನು ಅನಾದಿ ಕಾಲದಿಂದಲೂ ಹೆಂಡತಿಯರೇ ಮಾಡುತ್ತಿದ್ದಾರೆ. ಈಗ ನಿನ್ನದೇನು ವಟವಟ? ಎನ್ನುವ ವಾದ ಅವನದು. ಮಕ್ಕಳೂ ಇದನ್ನೇ ಕಲಿತು ಮೂರೊತ್ತೂ ಟಿವಿಯಲ್ಲಿನ ಕಾರ್ಟೂನ್ ಹಿಂದೆ ಬಿದ್ದಿರುತ್ತವೆ. ಇನ್ನಷ್ಟು ಬೆಳೆದಾಗ ತಮ್ಮ ಸ್ನೇಹಿತರ ಲೋಕದಲ್ಲಿ ಹಾಯಾಗಿರುತ್ತವೆ. ಆದರೆ ಅವಳು ?
ಜವಾಬ್ದಾರಿ ಹೊರೆಯಲ್ಲಕೆಲವು ಗಂಡಸರಂತೂ ಮನೆಯಲ್ಲಿ ಕೆಲಸ ಮಾಡುವುದು ತಮ್ಮ ಜವಾಬ್ದಾರಿಯೇ ಅಲ್ಲ ಎಂದು ಭಾವಿಸಿದ್ದಾರೆ. ಅವಳು ಕೂಡ ಕೆಲಸಗಳಾಗಬೇಕಲ್ಲಾ ಎಂದು ಅವರನ್ನು ಪ್ರಶ್ನಿಸದೆ, ಗೊಣಗಿಕೊಂಡೇ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಅಪ್ಪ ಅಮ್ಮನ ಮುದ್ದಿನಲ್ಲಿ ಬೆಳೆದ ಅವನು, ಓದು ಮುಗಿದ ನಂತರ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲಸ, ತಿನ್ನುವುದು, ತಿರುಗುವುದು ಬಿಟ್ಟರೆ ಮಿಕ್ಕಿದ್ದೆಲ್ಲವೂ ಅವನಿಗೆ ಹೊಸತು ಮತ್ತು ನಗಣ್ಯ. ಮನೆಯ ಕೆಲಸಗಳನ್ನು ಮಾಡುವುದು ಅವಮಾನ ಎನ್ನುವ ಭಾವನೆ. ಅದನ್ನು ತಿದ್ದಿ ಹೇಳಿಕೊಡುವ ಪ್ರಯತ್ನಕ್ಕೆ ಹೆತ್ತವರು ಕೈ ಹಾಕಲೇ ಇಲ್ಲ. ಇದೆಲ್ಲದರ ಪರಿಣಾಮ ಈಗ ಸಂಸಾರದ ಮೇಲೆ. ಗಂಡ ಹೆಂಡಿರ ಸಂಬಂಧ ಕೇವಲ ನಾಲ್ಕು ಗೋಡೆಗೆ ಸೀಮಿತವಾದುದಲ್ಲ. ಸಂಸಾರದ ಕಷ್ಟ-ಸುಖದ, ಖರ್ಚು-ವೆಚ್ಚದ ಜವಾಬ್ದಾರಿಗಳಲ್ಲಿ, ಕೆಲಸ-ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಅದರಲ್ಲಿ ಗಂಡು-ಹೆಣ್ಣು ಎನ್ನುವ ಯಾವುದೇ ಭೇದ ಇಣುಕಬಾರದು. ಜೋಡೆತ್ತುಗಳಾಗಬೇಕು
ಗಂಡ ಹೆಂಡತಿಯ ಮೈತ್ರಿ ಒಂದು ಮಧುರ ಭಾವನೆ. ಇಲ್ಲಿ ಪ್ರತಿದಿನ ತಮ್ಮನ್ನು, ಭಾವನೆಗಳನ್ನು, ಕೆಲಸಗಳನ್ನು ಹಂಚಿ ಅನುಭವಿಸಿದರೇನೇ ರುಚಿ. ಸಂಸಾರ ನಿರ್ವಹಣೆ ಕೇವಲ ಹೆಣ್ಣಿಗೆ ಮಾತ್ರ ಸೇರಿದ್ದಲ್ಲ. ಅದು ಇಬ್ಬರೂ ಜೋಡಿ ಎತ್ತುಗಳಾಗಿ ಎಳೆದೊಯ್ಯುವ ಸುಖ, ಸಂಭ್ರಮ, ಸಂತೋಷ ತುಂಬಿದ ಗಾಡಿ. ಅದಕ್ಕೆ ಪ್ರತಿ ಹೆಜ್ಜೆಯಲೂ ಇಬ್ಬರ ಭಾಗವಹಿಸುವಿಕೆ ಮುಖ್ಯ. ಸಂಸಾರದಲ್ಲಿ ಸರಿಸಮ
ಮಕ್ಕಳು, ಗಂಡಹೆಂಡಿರ ಕನಸುಗಳು. ಅವುಗಳನ್ನು ಮುನ್ನೆಡೆಸೋಕೆ ಇಬ್ಬರ ಸಮನಾದ ಪ್ರೀತಿ, ವಾತ್ಸಲ್ಯ, ಕೋಪ, ಮುದ್ದಿಸುವಿಕೆ… ಬೇಕೇ ಬೇಕು. ಮಕ್ಕಳು ತಪ್ಪು ಮಾಡಿದಾಗ ಒಬ್ಬರು ಕೋಪಗೊಂಡರೆ, ಮತ್ತೂಬ್ಬರು ಸಮಾಧಾನದಿಂದ ತಿಳಿ ಹೇಳಿ ಸರಿದಾರಿಗೆ ತರಬೇಕು. ಹಿಂದಿನ ಕಾಲದಲ್ಲಾದರೆ ಮಕ್ಕಳು ಪಕ್ಕದ ಮನೆಯಲ್ಲೊ ಎದುರು ಮನೆಯಲ್ಲೊ ಬೆಳೆದಿದ್ದೇ ಹೆಚ್ಚು. ಆಗೆಲ್ಲಾ ಅಪ್ಪನೆಂದರೆ ಭಯ, ಅಮ್ಮನೆಂದರೆ ಉಣಬಡಿಸುವವಳು ಎಂದಿತ್ತು. ಓದಿನದೆಲ್ಲಾ ಅವರು ಓದಿದಷ್ಟು ತಿಳಿದಷ್ಟು ಅಷ್ಟೆ. ಈಗ ಕಾಲ ಬದಲಾಗಿದೆ. ಹೆತ್ತವರಿಂದ ಮಕ್ಕಳು ಪ್ರೀತಿಯನ್ನು, ಒಟ್ಟಿಗೆ ಸುತ್ತಾಡುವುದನ್ನು, ತಮ್ಮ ಸಮಕ್ಕೆ ನಿಂತು ವಿಷಯಗಳ ಚರ್ಚಿಸುವುದನ್ನು ಬಯಸುತ್ತಾರೆ. ಮಕ್ಕಳ ಜೀವನ ರೂಪಿಸುವುದು ಅಮ್ಮ ಒಬ್ಬಳ ಕರ್ತವ್ಯವಲ್ಲ. ಅಲ್ಲಿ ಅಪ್ಪನ ಪಾಲ್ಗೊಳ್ಳುವಿಕೆಯ ಅವಶ್ಯಕತೆಯೂ ಇದೆ. ಆಗ ಮಾತ್ರ ಮನೆಯೊಂದು ಆನಂದ ಸಾಗರವಾದೀತು. ನಮ್ಮ ಬದುಕು ಸಂತಸಮಯವಾಗೋಕೆ, ಇಲ್ಲಾ ಗೊಂದಲಗಳ ಗೂಡಾಗೋಕೆ ಕಾರಣ, ನಾವಲ್ಲದೆ ಮತ್ಯಾರೂ ಅಲ್ಲ! ಇದನ್ನು ಅರಿತು, ಮುನ್ನಡೆದರೆ, ಬದುಕು ಪರಿಪೂರ್ಣವಾಗುತ್ತದೆ. ಹೋಟೆಲ್ ಜೀವನ ಆಗದಿರಲಿ ಬದುಕು
ಗಂಡ ಮನೆಯ ಸಣ್ಣ- ಪುಟ್ಟ ಕೆಲಸಗಳಲ್ಲಿ, ಮಕ್ಕಳ ಲಾಲನೆ- ಪಾಲನೆಯಲ್ಲಿ ಸಹಾಯ ಮಾಡಿದರೆ ಪರಸ್ಪರ ಗೌರವಿಸುವ ವಾತಾವರಣ ನಿರ್ಮಾಣವಾಗುತ್ತದೆ. ಅದು ಬಿಟ್ಟು ಅವನ ಜೀವನ ಅವನು, ಅವಳ ಜೀವನ ಅವಳು ಎಂಬಂತೆ ಬಾಳುತ್ತಾ ಹೋದರೆ ಅದನ್ನು ಸಂಸಾರ ಎನ್ನುವುದಿಲ್ಲ. ಹೋಟೆಲ… ಜೀವನ ಎನ್ನುತ್ತಾರೆ. ಹಾಗಾಗದಿರಲು ಅವನು ಮತ್ತು ಅವಳು ಸಂಸಾರದಲ್ಲಿ ಹಂಚಿಕೊಳ್ಳಬೇಕಾದ್ದು ಖುಷಿಯನ್ನಷ್ಟೇ ಅಲ್ಲ, ಶ್ರಮವನ್ನೂ ಕೂಡ…
– ಜಮುನಾ ರಾಣಿ ಎಚ್.ಎಸ್.