Advertisement
“ಎಂಜಿನಿಯರಿಂಗ್ ಬಿಟ್ಟು ಬಂದವರಿಗೆಲ್ಲ ಅಡ್ಮಿಶನ್ ಮಾಡ್ಕೊಳಕ್ಕೆ ಆಗಲ್ಲಮ್ಮ. ಸುಮ್ನೆ ಹೋಗು ತಲೆ ತಿನ್ಬೇಡ’ ಅಂತ ಸಿಟ್ಟು ಮಾಡಿಕೊಂಡ್ರು ಪ್ರಿನ್ಸಿಪಾಲರು. ಅವರು ಆ ಥರ ಮಾತಾಡಿದ್ದು ಅದೇ ಮೊದಲೇನಲ್ಲ. ಬೆಳಗ್ಗೆ ಎದ್ದು ಕಾಲೇಜಿಗೆ ಹೋಗೋದು, ಪ್ರಿನ್ಸಿಪಾಲ್ ಚೇಂಬರ್ ಎದುರು ನಿಲ್ಲೋದು, ಅವರಿಂದ “ಆಗಲ್ಲಮ್ಮ’ ಅನ್ನಿಸಿಕೊಂಡು ಬರೋದು – ಇದು ಒಂದು ವಾರದಿಂದ ದಿನಚರಿ ಆಗಿತ್ತು. ಆದರೂ ಛಲಬಿಡದ ತ್ರಿವಿಕ್ರಮನ ಥರ ಓಡಾಡುತ್ತಲೇ ಇದ್ದೆ. ಸ್ವಾಭಿಮಾನದ ಪ್ರಶ್ನೆ ಬೇರೆ.
Related Articles
Advertisement
ಮೂರನೇ ವರ್ಷಕ್ಕೆ ಎಂಜಿನಿಯರಿಂಗ್ ಬೇಡೆಂದು ದೃಢ ಮನಸ್ಸು ಮಾಡಿ ಅದನ್ನು ತೊರೆದೇ ಬಿಟ್ಟೆ. ಮನೆಯಲ್ಲಿ ಎರಡು ವರ್ಷ ಕುಳಿತೆ. ಕಥೆ-ಕಾದಂಬರಿಗಳನ್ನು ಓದಲಾರಂಭಿಸಿದೆ. ಅದೇ ನನಗೆ ಹೆಚ್ಚು ಇಷ್ಟವಾಯಿತು. ಕಂಪ್ಯೂಟರ್ ಎದುರು ಕುಳಿತು ಪೋ›ಗ್ರಾಂ ಬರೆಯುವುದರಲ್ಲಿ ಈ ಸುಖ ಇಲ್ಲವೆಂದು ಮನಸ್ಸು ಸಾರಿಸಾರಿ ಹೇಳುತ್ತಿತ್ತು.
ಹೌದು, ನಾನು ಆರ್ಟ್ಸ್ ತೆಗೆದು ಕೊಳ್ಳಬೇಕು, ಪತ್ರಿಕೋದ್ಯಮದಂಥ ವಿಷಯ ಓದಬೇಕೆಂದು ನಿರ್ಧಾರ ಮಾಡಿದೆ. ಅದಕ್ಕೇ ಈ ಹೊಸ ಕಾಲೇಜಿಗೆ ಎಡತಾಕಿದ್ದೆ. ಅಲ್ಲಿ ನೋಡಿದರೆ ಮತ್ತದೇ ತಿರಸ್ಕಾರ. ಎಂಜಿನಿಯರಿಂಗ್ ಬಿಟ್ಟು ಬಂದವರು ಇಲ್ಲಿ ಏನನ್ನು ಓದಬಲ್ಲರು? ಎಂಬುದು ಅವರ ಮನಸ್ಸಿನ ಯೋಚನೆ ಇರಬೇಕು. ಆದರೆ, ನಾನು ಬಿಡಬೇಕಲ್ಲ. ಕಾಲೇಜಿನಲ್ಲಿ ಸೀಟಿದೆ ಎಂದು ಗೊತ್ತಿತ್ತು. ಹೇಗಾದರೂ ಮಾಡಿ ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಿಯಾಗಿತ್ತು.
ಗೊತ್ತಿದ್ದ ಮೇಷ್ಟ್ರೊಬ್ಬರಿಗೆ ಫೋನ್ ಮಾಡಿದೆ. ಚಿಕ್ಕಮ್ಮ-ಚಿಕ್ಕಪ್ಪನಿಗೂ ಬರಹೇಳಿದೆ.
ಅರ್ಧ ಗಂಟೆಯೊಳಗೆ ಎಲ್ಲರೂ ಬಂದು ಪ್ರಿನ್ಸಿಪಾಲರ ಬಳಿ ಜಮಾಯಿಸಿದರು. ಸುಮಾರು ಹೊತ್ತು ಮಾತುಕತೆ ಬಳಿಕ ಪ್ರಿನ್ಸಿಪಾಲರು ಮನಸ್ಸು ಬದಲಾಯಿಸಿದರು.
“ಸರಿ ಕಣಮ್ಮ. ಜರ್ನಲಿಸಂ ಜೊತೆಗೆ ಇತಿಹಾಸ, ಇಂಗ್ಲಿಷ್ ಸಾಹಿತ್ಯ ಇರುವ ಕಾಂಬಿನೇಶನ್ ಒಳಗೆ ಸೀಟು ಕೊಡ್ತೀನಿ. ಆದ್ರೆ ಇನ್ನೊಂದು ಚಾಲೆಂಜ್ ಇದೆ ನಿಂಗೆ’ ಅಂದ್ರು. ಅಯ್ಯೋ, ಏನಪ್ಪಾ ಇದು, ಇನ್ನೂ ಅಡ್ಮಿಶನ್ನೇ ಆಗಿಲ್ಲ, ಈಗಲೇ ಸವಾಲು ಅಂತಿದ್ದಾರಲ್ಲ ಅಂತ ಕೊಂಚ ಗಾಬರಿ ಆಯ್ತು.
ಆದರೆ, ನಾನು ಭಯಪಡುವಂಥದ್ದೇನೂ ಆಗಿರಲಿಲ್ಲ. ನಾನು ಓದುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನಿಂದ ನಡತೆ ಪ್ರಮಾಣಪತ್ರ ಮತ್ತು ನಿರಾಕ್ಷೇಪಣಾ ಪತ್ರ ತರಬೇಕಿತ್ತು. ನಾಳೆ ಒಳಗೆ ತಂದರೆ ಅಡ್ಮಿಶನ್, ಇಲಾಂದ್ರೆ ಕ್ಯಾನ್ಸಲ್ ಎಂತ ಪ್ರಿನ್ಸಿಪಾಲ್ ಎಚ್ಚರಿಸಿದರು. ಸಂಜೆ ಒಳಗೆ ಬೇಕಾಗಿದ್ದ ಎಲ್ಲ ದಾಖಲೆಗಳನ್ನೂ ಹೊತ್ತು ತಂದೆ ಎಂಬಲ್ಲಿಗೆ, ದೊಡ್ಡದೊಂದು ಅಧ್ಯಾಯ ಮುಗಿದು, ನಿಜವಾದ ಹೊಸ ಅಧ್ಯಾಯ ಆರಂಭವಾಗಿತ್ತು.
ಮರುದಿನ ಬೆಳಗ್ಗೆಯೇ ಪ್ರಿನ್ಸಿಪಾಲರನ್ನು ಭೇಟಿ ಮಾಡಿ ದಾಖಲೆಗಳನ್ನೆಲ್ಲ ಇರಿಸಿ “ಸಾರ್’ ಅಂದೆ. ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಅವರು ಸಹಿ ಮಾಡೇ ಬಿಟ್ಟರು. ಅಲ್ಲೇ ಚೀರಿ ಕುಣಿದಾಡುವಷ್ಟು ಖುಷಿ. “ಯಾಕಮ್ಮ ಇನ್ನೂ ಸಪ್ಪಗೆ ಇದೀಯಾ? ಸ್ವಲ್ಪ ನಗು’ ಅಂತ ಹೇಳಿ ಅಲ್ಲಿಂದ ಹೊರಹೋದರು ಪ್ರಿನ್ಸಿ. ಆಮೇಲೆ ಶುಲ್ಕ ಪಾವತಿಸಿ, ಉಹ್ ಅಂತ ನಿಟ್ಟುಸಿರು ಬಿಟ್ಟು ಒಂದು ಬಾಟಲಿ ನೀರು ಕುಡಿದು ಅಲ್ಲೇ ಎಲ್ಲೋ ಮರದಡಿ ಕೂತೆ.
ಮರುದಿನ ಅತಿ ಉತ್ಸಾಹದಿಂದ ತಯಾರಾಗಿ, ಕಾಲೇಜಿಗೆ ಬಂದು ವೇಳಾಪಟ್ಟಿಯನ್ನು ಕಾತುರದಿಂದ ಗಮನಿಸಿದೆ. ಮೊದಲನೆಯ ತರಗತಿಯೇ ಪತ್ರಿಕೋದ್ಯಮ ಅಂತ ಇದ್ದದ್ದನ್ನು ನೋಡಿ ಹೊಟ್ಟೆಯಲ್ಲಿ ಚಿಟ್ಟೆ ಹಾರಿತು. ಇದಕ್ಕೇ ತಾನೇ ನಾನು ಇಷ್ಟೆಲ್ಲ ಹಾತೊರೆದಿದ್ದು? ತರಗತಿ ಆರಂಭವಾಗಲು ಇನ್ನೂ ತುಂಬಾ ಹೊತ್ತು ಇತ್ತು. ಅಲ್ಲೇ ತರಗತಿಯ ಮುಂದೆ ಹೋಗಿ ನಿಂತೆ. ಹತ್ತು ನಿಮಿಷ ಆಯಿತು. ಒಬ್ಬ ಹುಡುಗ, “ಮಿಸ್, ನೀವೇನಾ ಇತಿಹಾಸ ಟೀಚರ್’ ಅಂದ. ಒಮ್ಮೆಲೇ ಗಾಬರಿಯಾದೆ. ನಾ ಇವನ ಕಣ್ಣಿಗೆ ಹೇಗಪ್ಪ ಕಾಣುತ್ತಿದ್ದೀನಿ ಅಂತ ಪ್ರಶ್ನಿಸಿಕೊಂಡು, ಇಲ್ಲ ನಾನಲ್ಲ ಅಂದು ಸ್ವಲ್ಪ ದೂರ ಹೋಗಿ ನಿಂತು ಮೊಬೈಲ್ ನೋಡುತ್ತಾ ಇದ್ದೆ. ಮನಸ್ಸಿನಲ್ಲಿ ಈಗ ಕುತೂಹಲಕ್ಕಿಂತ ಅಂಜಿಕೆಯೇ ಏರುತ್ತಾ ಹೋಯಿತು.
ಇಲ್ಲಿನ ಶಿಕ್ಷಕರು ಹೇಗೆ ಪಾಠ ಮಾಡುವರೋ? ವಯಸ್ಕರೋ, ಮುದುಕರೋ, ಹೆಂಗಸರೋ, ಗಂಡಸರೋ? ಹೇಳಿ ಕೇಳಿ ನಾನು ಎರಡು ವರ್ಷ ಎಂಜಿನಿಯರಿಂಗ್ ಓದಿದವಳು. ಇಲ್ಲಿನ ಸಬ್ಜೆಕ್ಟ್ ಗಳೆಲ್ಲ ಹೇಗೋ ಏನೋ? ನನ್ನ ನಿರ್ಧಾರ ಸರಿಯಾಗಿದೆಯಾ ಇಲ್ಲವಾ? ಮನಸ್ಸು ನೂರೆಂಟು ಭಾವಿಸುತ್ತಿತ್ತು.
ಅಷ್ಟರಲ್ಲಿ ಒಬ್ಬರು ಮಧ್ಯವಯಸ್ಕರು ಬಂದು, ನೀವೇನಾ ಗೆಸ್ಟ್ ಲೆಕ್ಚರರ್ ಅಂದುಬಿಟ್ಟರು. ಇಲ್ಲ ಸಾರಿ, ನಾನು ಇಲ್ಲಿ ಓದಲು ಬಂದಿರುವ ವಿದ್ಯಾರ್ಥಿನಿ ಎಂದೆ, ನೋಡೋಕೆ ಹಾಗ್ ಕಾಣಿಸ್ತಿಲ್ಲವಲ್ಲ ಎಂದು ಗೊಣಗಾಡಿಕೊಂಡು ಅವರು ಮುಂದಕ್ಕೆ ಹೋದರು.
“ನನಗೆ ವಯಸ್ಸಾಗಿದೆಯಾ?’ ಅಂತ ಪ್ರಶ್ನಿಸಿಕೊಂಡು ತರಗತಿಯ ಬಾಗಿಲನ್ನೇ ನೋಡುತ್ತಾ ನಿಂತೆ. ಯಾರೋ ಹುಡುಗಿ ಬಂದು,ನೀವು ಇದೆ ಕ್ಲಾಸಾ? ಅಂತ ಕೇಳಿದಳು. ಹೌದು ಅಂದೆ. ಅಬ್ಬ, ಇವಳಿಗಾದರೂ ನಾನು ಸಹಪಾಠಿಯಂತೆ ಕಂಡೆನಲ್ಲ ಅಂತ ಸಮಾಧಾನ ಆಯ್ತು.
ಈಗ ತರಗತಿಗಳೆಲ್ಲ ಆರಂಭವಾಗಿ ಹೊಸ ಗಾಳಿ ಬೀಸತೊಡಗಿದೆ. ಹಳೆಯ ನಿರಾಸೆ, ಬೇಸರಗಳೆಲ್ಲ ತಣ್ಣಗೆ ಕರಗಿವೆ. ಹೌದು, ನನ್ನ ಕನಸುಗಳೆಲ್ಲ ಮತ್ತೆ ಗರಿಗೆದರಿಕೊಳ್ಳಬೇಕು. ನಾನೀಗ ಉತ್ಸಾಹದ ಬುಗ್ಗೆಯಾಗಬೇಕು…
ಸಹನಾ ವಿ.