Advertisement

ಇಂಟರ್ನೆಟ್ ಸ್ಥಗಿತ ; ಈ ಎರಡು ಆ್ಯಪ್ ಗಳಿಗೆ ಬಂತು ಸಿಕ್ಕಾಪಟ್ಟೆ ಬೇಡಿಕೆ!

10:16 AM Dec 23, 2019 | Hari Prasad |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಪ್ರತಿಭಟನೆಗಳು ಹಿಂಸಾರೂಪವನ್ನು ತಾಳುತ್ತಿರುವ ಕಡೆಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅವುಗಳಲ್ಲಿ ಒಂದು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸುವುದು.

Advertisement

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಸುದ್ದಿ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹರಡಿ ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಪ್ಪಿಸಲು ಪೊಲೀಸರು ಮತ್ತು ಸ್ಥಳೀಯಾಡಳಿತ ಈ ಕ್ರಮದ ಮೊರೆ ಹೋಗುತ್ತದೆ.

ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಪ್ರತಿಭಟನಕಾರರು ರಂಗೋಲಿ ಕೆಳಗೆ ತೂರಿದರು ಎಂಬಂತೆ, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಸಿದರೂ ಆಪ್ ಲೈನ್ ಮೆಸೇಜಿಂಗ್ ಆ್ಯಪ್ ಗಳ ಮೂಲಕ ಇಂಟರ್ನೆಟ್ ಸೇವೆಗಳು ಲಭ್ಯವಿರದ ಭಾಗಗಳ ಜನರು ಪರಸ್ಪರ ಸಂವಹನ ಸಾಧಿಸುತ್ತಿದ್ದಾರೆ.

ಬ್ರಿಡ್ಜ್ ಫೈ ಹಾಗೂ ಫೈರ್ ಚಾಟ್ ಎಂಬೆರಡು ಇನ್ ಸ್ಟಂಟ್ ಮೆಸೇಜಿಂಗ್ ಆ್ಯಪ್ ಗಳ ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ ಸಹ ಪರಸ್ಪರ ಸಂವಹನ ಸಾಧಿಸಲು ಸಾಧ್ಯ. ಹೀಗಾಗಿ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಈ ಎರಡು ಆ್ಯಪ್ ಗಳು ಭಾರೀ ಪ್ರಮಾಣದಲ್ಲಿ ಡೌನ್ ಲೋಡ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಯು.ಎಸ್. ಆ್ಯಪ್ ಇಂಟೆಲಿಜೆನ್ಸ್ ಸಂಸ್ಥೆಯಾಗಿರುವ ಆ್ಯಪ್ಟೋಪಿಯಾ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಡಿಸೆಂಬರ್ 12ರ ಬಳಿಕ ಭಾರತದಲ್ಲಿ ಬ್ರಿಡ್ಜ್ ಫೈ ಡೌನ್ ಲೋಡ್ ಸಂಖ್ಯೆ 80ರಷ್ಟು ಹೆಚ್ಚಾಗಿದೆ. ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ ಡಿಸೆಂಬರ್ 12ರಂದು ಈ ಆ್ಯಪ್ ನ ಡೌನ್ ಲೋಡ್ ಪ್ರಮಾಣ 2609ಕ್ಕೆ ಏರಿಕೆಯಾಗಿದ್ದು ಇದು ಪ್ರತೀದಿನದ ಡೌನ್ ಲೋಡ್ ಪ್ರಮಾಣಕ್ಕಿಂತ ಅಧಿಕವಾಗಿದೆ. ಹಾಗೆಯೇ ದೆಹಲಿ ಮತ್ತು ದೇಶದ ಇತರೇ ಭಾಗಗಳಲ್ಲಿಯೂ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿದ್ದ ಸಂದರ್ಭದಲ್ಲೂ ಈ ಆ್ಯಪ್ ಗಳ ಡೌನ್ಲೋಡ್ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿತ್ತು.

Advertisement

ಹಾಗೆಯೇ ಫೈರ್ ಚಾಟ್ ಗಳ ಡೌನ್ಲೋಡ್ ಪ್ರಮಾಣದಲ್ಲೂ ಏರಿಕೆ ಕಂಡಿದೆ. ಇನ್ನು ಇವೆರಡು ಆ್ಯಪ್ ಗಳನ್ನು ಹೊರತುಪಡಿಸಿ ಸಿಗ್ನಲ್ ಆಫ್ ಲೈನ್ ನಂತಹ ಆ್ಯಪ್ ಗಳೂ ಸಹ ಇಂಟರ್ನೆಟ್ ಇಲ್ಲದ ಸಂದರ್ಭಗಳಲ್ಲಿ ಬಳಕೆಯಾಗುತ್ತವೆ.

ಗೂಗಲ್ ಹಾಗೂ ಆ್ಯಪಲ್ ಪ್ಲೇಸ್ಟೋರ್ ಗಳಲ್ಲಿ ಲಭ್ಯವಿರುವ ಬ್ರಿಡ್ಜ್ ಫೈ ಆ್ಯಪ್ ಮೂರು ವಿಧಗಳಲ್ಲಿ ಕಾರ್ಯನಿರ್ವಹಿಸುತ್ತದೆ. 330 ಅಡಿಗಳಷ್ಟು ದೂರದಲ್ಲಿರುವ ಮೊಬೈಲ್ ಬಳಕೆದಾರರು ಬ್ಲೂಟೂತ್ ಮೂಲಕ ಪರಸ್ಪರ ಸಂದೇಶಗಳನ್ನು ಕಳುಹಿಸಲು ಇದರಲ್ಲಿ ಸಾಧ್ಯವಾಗುತ್ತದೆ.

ಇನ್ನು ದೂರದಲ್ಲಿರುವ ಬಳಕೆದಾರರಿಗೆ ಸಂದೇಶಗಳನ್ನು ಈ ಆ್ಯಪ್ ಮೂಲಕ ಕಳುಹಿಸಬೇಕಾದಲ್ಲಿ ಮೆಶ್ ನೆಟ್ ವರ್ಕನ್ನು ಇದು ಬಳಸಿಕೊಳ್ಳುತ್ತದೆ. ಇದಕ್ಕೆ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಹಲವಾರು ಮೊಬೈಲ್ ಗಳು ಏಕಕಾಲದಲ್ಲಿ ಈ ಆ್ಯಪ್ ಅನ್ನು ಬಳಸುತ್ತಿರುವುದು ಅಗತ್ಯವಾಗಿರುತ್ತದೆ. ಈ ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸಲು ಇರುವ ಇನ್ನೊಂದು ವಿಧಾನವೆಂದರೆ ‘ಬ್ರಾಡ್ ಕಾಸ್ಟ್’. ಇದರಲ್ಲಿ ಬ್ರಿಡ್ಜ್ ಫೈ ಆ್ಯಪ್ ಬಳಸುತ್ತಿರುವವರಿಗೆಲ್ಲ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next