Advertisement

ಜನಪ್ರತಿನಿಧಿಗಳಿಗೆ ಕಾದು ಸುಸ್ತಾದ ಅಧಿಕಾರಿಗಳು

10:39 AM Jun 20, 2019 | Suhan S |

ಮುಂಡರಗಿ: ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಗೆ ಜನಪ್ರತಿನಿಧಿಗಳು ನಿಗದಿತ ಸಮಯಕ್ಕೆ ಆಗಮಿಸದೇ ಇದ್ದುದ್ದರಿಂದ ಅಧಿಕಾರಿಗಳು ಸುಮಾರು 2 ಗಂಟೆ ಕಾಲ ಕಾಯ್ದು ಕಾಯ್ದು ಸುಸ್ತಾದ ಘಟನೆ ನಡೆಯಿತು.

Advertisement

ಪಟ್ಟಣದ ತಾಪಂ ಕಾರ್ಯಾಲಯದ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಸಾಮಾನ್ಯ ಸಭೆ ಬೆಳಗ್ಗೆ 10:30ಕ್ಕೆ ನಿಗದಿಯಾಗಿತ್ತು. ಆದರೆ, ಅಧಿಕಾರಿಗಳು ಸಭೆಗೆ ಬಂದರೂ ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ, ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ತಾಪಂ ಇಒ ಎಸ್‌.ಎಸ್‌. ಕಲ್ಮನಿ ಸೇರಿದಂತೆ ಉಳಿದ ಸದಸ್ಯರು ಸಭೆ ನಡೆಯುವ ಸಾಮರ್ಥ್ಯ ಸೌಧಕ್ಕೆ ಬರದೇ ಅಧ್ಯಕ್ಷರ ಕೊಠಡಿಯಲ್ಲಿಯೇ ಬಿಸಿಬಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಪಂ ಇಒ ಸೇರಿ ಇತರರು 12:30ಕ್ಕೆ ಆಗಮಿಸಿ ಸಭೆ ಆರಂಭಿಸಿದರು. ಅಧಿಕಾರಿಗಳ ಬದಲಾಗಿ ಇಲಾಖೆಯಿಂದ ಯಾರಾದರೂ ಬಂದಿದ್ದರೆ ಸಭೆಯಿಂದ ಹೊರಹೋಗಲು ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ ಸೂಚಿಸಿದರು.

ಕೃಷಿ ಇಲಾಖೆ, ಚಿಕ್ಕ ನೀರಾವರಿ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಬಂದಿಲ್ಲ. ಬಿಸಿಎಂ ಅಧಿಕಾರಿ, ಲೋಕೋಪಯೋಗಿ ಇಲಾಖೆಯವರು ಮಾಹಿತಿ ಕೊಟ್ಟು ಹೋಗಿದ್ದಾರೆ. ಕೈಗಾರಿಕೆ, ಅಬಕಾರಿ, ತಹಶೀಲ್ದಾರರನ್ನು ಸಭೆಗೆ ಕರೆಯಿರಿ ಎಂದರು.

ತಾಪಂ ಇಒ ಎಸ್‌.ಎಸ್‌. ಕಲ್ಮನಿಯವರು ಮಾತನಾಡಿ, ತಹಶೀಲ್ದಾರರು ಪಿಡಿಒಗಳ ಜೊತೆ ಫೇ-ಕಿಸಾನ್‌ ಯೋಜನೆ ಬಗ್ಗೆ ಸಭೆ ನಡೆಸಿದ್ದು, ಉಳಿದವರಿಗೆ ದೂರವಾಣಿ ಮಾಡಲಾಗುವುದು ಎಂದರು. ಬರಗಾಲದ ಹಿನ್ನೆಲೆಯಲ್ಲಿ ಕೃಷಿಯ ಬಗ್ಗೆ ಚರ್ಚೆಯಾಗಬೇಕಿದ್ದ ವಿಷಯಗಳು ಇದ್ದರೂ, ಕೃಷಿ ಇಲಾಖೆಯ ಅಧಿಕಾರಿ ಎಸ್‌.ಬಿ. ನೆಗಳೂರು, ಕಾರ್ಮಿಕ, ಅಬಕಾರಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

Advertisement

ಸಭೆ ಪ್ರಾರಂಭವಾದ ನಂತರ ಬಂದ ಸದಸ್ಯ ವೆಂಕಪ್ಪ ಬಳ್ಳಾರಿಯವರಿಗೆ ಕುಳಿತುಕೊಳ್ಳಲು ಆಸನವೇ ಇಲ್ಲದ ಕಾರಣಕ್ಕೆ ವೆಂಕಪ್ಪ ಬಳ್ಳಾರಿ ಸಿಟ್ಟಿಗೆದ್ದ ಮೇಲೆಯೇ ಆಸನದ ವ್ಯವಸ್ಥೆ ಮಾಡಿದ ಘಟನೆ ನಡೆಯಿತು.

ಹೆಸ್ಕಾಂನ ಎಂ.ಬಿ. ಗೌರೋಜಿ ಮಾತನಾಡಿ, ಗಂಗಾ ಕಲ್ಯಾಣ ಯೊಜನೆಯ ಹದಿನಾರು ಸಂಪರ್ಕ ಕೊಡಬೇಕಿದೆ. ನಿರಂತರ ಜ್ಯೋತಿಯ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ ಡಂಬಳದ ಹೇಸ್ಕಾಂನ ಕಾರ್ಯಾಲಯದಲ್ಲಿ ಯಾರು ಇರುವುದಿಲ್ಲ. ಅಲ್ಲಿರುವ ಸಿಬ್ಬಂದಿಗೆ ಕಚೇರಿಯಲ್ಲಿ ಸೂಚಿಸಬೇಕು ಎಂದು ತಿಳಿಸಿದರು.

ಬಿಇಒ ಎಸ್‌.ಎನ್‌. ಹಳ್ಳಿಗುಡಿ ಮಾತನಾಡಿ, ಗುರುಭವನಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ನಿರ್ಮಿತಿ ಕೇಂದ್ರದವರು ಕಾಮಗಾರಿ ಪ್ರಾರಂಭಿಸುತ್ತಿಲ್ಲ. ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮದ ಅಧಿಕಾರಿಗಳು ಕಾಮಗಾರಿಗಳನ್ನು ಅಪೂರ್ಣಗೊಳಿಸುತ್ತಾರೆ. ಬೇರೆಯವರಿಂದ ಒತ್ತಡ ಹೇರಿ ಕಟ್ಟಡ ಪೂರ್ಣವಾಗಿರುವ ಬಗ್ಗೆ ಸಹಿ ಮಾಡಿಸಿಕೊಳ್ಳುತ್ತಾರೆ ಎಂದಾಗ ಸಭೆಯಲ್ಲಿದ್ದ ನಿರ್ಮಿತಿ ಕೇಂದ್ರದ ನೀಲಗುಂದ, ಸಂತೋಷ ಮಾಳ್ಳೋದೆಕರ ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೆವೆ. ಗುರುಭವನದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವೈ.ಬಿ. ಕುದರಿ ಮಾತನಾಡಿ, ಬಂದ್‌ ಆಗಿರುವ ಶುದ್ಧ ನೀರಿನ ಘಟಕಗಳನ್ನು ಮತ್ತೆ ಆರಂಭಿಸಲು ಟೆಂಡರ್‌ ಕರೆಯಲಾಗುವುದು. ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಲ್ಲಿ 45.50 ಲಕ್ಷ ಕಾಮಗಾರಿ ಮಾಡಲಾಗಿದೆ ಎಂದರು.

ಸದಸ್ಯ ರುದ್ರಗೌಡ ಪಾಟೀಲ ಮಾತನಾಡಿ, ಟೆಂಡರ್‌ ಕರೆಯದೆ ಕಾಮಗಾರಿ ಮಾಡಿರುವುದು ಸರಿಯಲ್ಲ. ನಿಯಮ ಉಲ್ಲಂಘಿಸಲಾಗಿದೆ ಎಂದರು. ಆಗ ವೈ.ಬಿ. ಕುದರಿ ಅವರು ಶಾಸಕರ ಶಿಫಾರಸಿನ ಮೇರೆಗೆ ಕಾಮಗಾರಿ ಮಾಡಲಾಗಿದೆ ಎಂದರು. ಆಗ ರುದ್ರಗೌಡ ಪಾಟೀಲ ಶಿಫಾರಸು ಮಾಡಿದವರನ್ನೇ ಕರೆದು ಸಭೆ ನಡೆಸಿ ನಾವು ಸಭೆಗೆ ಬರುವದಿಲ್ಲವೆಂದು ಸಭೆಯಿಂದ ಹೊರ ನಡೆದಾಗ ಅವರ ಜೊತೆಗೆ ಬಸಪ್ಪ ಮಲ್ಲನಾಯ್ಕರ ಸಭೆಯಿಂದ ಹೊರ ನಡೆದರು.

ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರ, ಆರೋಗ್ಯ ಇಲಾಖೆಯ ಡಾ| ಕೆ. ಬಸವರಾಜ, ಅಭಿಯಂತರ ರಮೇಶ, ಪಶು ಸಂಗೋಪನೆಯ ಡಾ| ಎಸ್‌.ವಿ. ತಿಗರಿಮಠ, ಕಪ್ಪತ್ತಹಿಲ್ಸ್ನ ಎಸ್‌.ಎಂ. ಶಿವರಾತ್ರೇಶರಯ್ಯ ಸಭೆಗೆ ಮಾಹಿತಿ ನೀಡಿದರು.

ತಾಪಂ ಸದಸ್ಯರಾದ ಕುಸುಮಾ ಮೇಟಿ, ತಿಪ್ಪಮ್ಮ ಕಾರಭಾರಿ, ಪುಷ್ಪಾ ಪಾಟೀಲ, ವೆಂಕಪ್ಪ ಬಳ್ಳಾರಿ, ರುದ್ರಪ್ಪ ಬಡಿಗೇರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ,ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಇಒ ಎಸ್‌.ಎಸ್‌. ಕಲ್ಮನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next