ಚಿಕ್ಕಮಗಳೂರು: 60 ಕಾರ್ಮಿಕ ಕುಟುಂಬಗಳು ವಾಸವಾಗಿದ್ದ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಲೆಬರ್ ಕಾಲೋನಿಗೆ ಆ.5ರ ಶನಿವಾರ ಅಧಿಕಾರಿಗಳು ಭೇಟಿ ನೀಡಿದರು.
ಕಾರ್ಮಿಕ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದ್ದು, ಕುಡಿಯಲು ನೀರು, ವಿದ್ಯುತ್ ಸೌಲಭ್ಯವಿಲ್ಲದೆ ಬದುಕು ಸಾಗಿಸುತ್ತಿದ್ದರು. ಕುದುರೆಮುಖ ಕಬ್ಬಿಣ ಕಾರ್ಖಾನೆ ಇದ್ದಾಗ ಕೂಲಿ ಮಾಡುತ್ತಿದ್ದ ಕಾರ್ಮಿಕರು ಕಂಪನಿ ಮುಚ್ಚಿದ ಮೇಲೂ ಅಲ್ಲೇ ವಾಸವಿದ್ದರು.
ಭಾರೀ ಮಳೆಯಿಂದ ಮನೆಗಳ ಗೋಡೆಗಳು ಬಿದ್ದಿದ್ದವು. ಕಳಸದಲ್ಲಿ ಸ್ಥಳಾಂತರಕ್ಕೆ ಜಾಗ ನೋಡಿದ್ದರೂ ಸ್ಥಳಾಂತರ ಮಾಡಿರಲಿಲ್ಲ. ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಈ ಕುಟುಂಬಗಳು ಬದುಕುತ್ತಿದ್ದರು.
ತಾಪಂ ಇಓ, ಪಟ್ಟಣ ಪಂಚಾಯತ್ ಚೀಫ್ ಆಫೀಸರ್, ಕಂದಾಯ ಹಾಗೂ ರೆವಿನ್ಯು ಇಲಾಖೆ ಅಧಿಕಾರಿಗಳು, ಸಂಸೆ ಹಾಗೂ ಕಳಸ ಗ್ರಾಪಂ ಪಿ.ಡಿ.ಓಗಳು ಭೇಟಿ ನೀಡಿ 3-4 ದಿನದಲ್ಲಿ ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆದೇಶ ನೀಡಿದ್ದಾರೆ.
ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮಾತ್ರವಲ್ಲದೇ ಶೀಘ್ರದಲ್ಲೇ ಆ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.