Advertisement

Marathi Teacher Issue; ಜತ್, ಸೊಲ್ಲಾಪುರ ಕನ್ನಡ ಶಾಲೆಗಳಿಗೆ ಅಧಿಕಾರಿಗಳ ಭೇಟಿ

09:49 PM Jun 25, 2024 | Team Udayavani |

ಬೆಳಗಾವಿ: ಮಹಾರಾಷ್ಟ್ರದ ಜತ್ ಮತ್ತು ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟದ ಕನ್ನಡ ಮಾಧ್ಯಮ ಶಾಲೆಗಳಿಗೆ ಗಡಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಜತ್ತ ತಾಲ್ಲೂಕಿನ ಬೋರಗಿ, ಕರಜಗಿ, ಭೇವರ್ಗಿ, ಬಾಲಗಾಂವ, ಅಂಕಲಗಿ, ಸಂಖ, ರಾವಳಗುಂಡವಾಡಿ, ಮೇಂಡಿಗೇರಿ ಗ್ರಾಮಗಳಲ್ಲಿನ ವಿವಿಧ ಕನ್ನಡ ಮಾಧ್ಯಮ ಶಾಲೆಗಳಿಗೆ ಕರ್ನಾಟಕದ ಮುಖ್ಯಮಂತ್ರಿಗಳ ಸೂಚನೆಯಂತೆ ಭೇಟಿ ನೀಡಿದರು.

ಈ ಪ್ರದೇಶಗಳಲ್ಲಿನ ಕೆಲವು ಕನ್ನಡ ಶಾಲೆಗಳಲ್ಲಿ ಕನ್ನಡ ಬಾರದ ಮರಾಠಿ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಕಾತಿ ಮಾಡಿ, ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿತ್ತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಜತ್ ಶಾಸಕರಾದ ವಿಕ್ರಮಸಿಂಹ ಸಾವಂತ ಹಾಗೂ ಜತ್ತ ತಾಲ್ಲೂಕಿನ ಕನ್ನಡ ಪರ ಹೋರಾಟಗಾರರಾದ ಆರ್ ಜಿ ಬಿರಾದಾರ್, ಮಲಿಕ್ ಜಾನ್ ಶೇಖ್ ಶಿಕ್ಷಕರ ಪ್ರತಿನಿಧಿಗಳು ಕನ್ನಡ ಶಾಲೆಗೆ ನೇಮಕವಾದ ಮರಾಠಿ ಶಿಕ್ಷಕರರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಒಬ್ಬ ಶಿಕ್ಷಕರು ಈಗಾಗಲೇ ತಮಗೆ ಕನ್ನಡ ಬರುವುದಿಲ್ಲವೆಂದು ಲಿಖಿತವಾಗಿ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಪತ್ರವನ್ನು ತೋರಿಸಿದರು.

Advertisement

ಶಾಲೆಗಳ ಭೇಟಿಯ ನಂತರ ಸಾಂಗ್ಲಿ ಜಿಲ್ಲಾ ಶಿಕ್ಷಣಾಧಿಕಾರಿ (ಪ್ರಾಥಮಿಕ) ಮೋಹನ ಗಾಯಕವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮ ಫರಕಾಂಡೆ ಹಾಗೂ ಜತ್ತ ತಾಲ್ಲೂಕಿನ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಲಾಯಿತು.

ಸಭೆಯಲ್ಲಿ ಕನ್ನಡ ಶಾಲೆಗೆ ಮರಾಠಿ ಶಿಕ್ಷಕರನ್ನು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿ ಭಾರತ ಸಂವಿಧಾನ ಅನುಚ್ಚೇದ 350ಎ ಉಲ್ಲಂಘನೆ ಮಾಡಿರುವುದರ ಬಗ್ಗೆ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇದಲ್ಲದೆ ನಾಗಪುರ ಮತ್ತು ಕೇರಳ ಹೈಕೋರ್ಟ್ ನೀಡಿದ ಆದೇಶಗಳ ಮತ್ತು ಕೇಂದ್ರ ಅಲ್ಪ ಸಂಖ್ಯಾತರ ಇಲಾಖೆ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ ಪತ್ರಗಳನ್ನು ಸಭೆಗೆ ಒದಗಿಸಲಾಯಿತು.

ಜತ್ ಶಾಸಕ ವಿಕ್ರಮ ಸಾವಂತ ಮಾತನಾಡಿ, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಎಲ್ಲಾ ಅಧಿಕಾರಿಗಳಿಗೆ ತಾಕಿತು ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾಂಗ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳು, ಈ ವಿಷಯದ ಬಗ್ಗೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಶಿಕ್ಷಕರ ಬದಲಾಗಿ ನಿವೃತ್ತ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next