ಹುಮನಾಬಾದ: ಮುಂಗಾರು ಆರಂಭಗೊಳ್ಳುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಯಾವುದೇ ವಲಯದಲ್ಲಿ ಸಮಸ್ಯೆ ಆಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ತಾಲೂಕು ಕೃಷಿಕ ಸಮಾಜ ಸಮಿತಿ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡಗೋಳ್ಳ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಮುಂಗಾರು ಹಂಗಾಮು ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ಸಂಕಷ್ಟ ವಲಯ ಮಟ್ಟದ ಕೃಷಿ ಅಧಿಕಾರಿಗಳು ತಿಳಿದುಕೊಂಡು ಸೂಕ್ತವಾಗಿ ಸ್ಪಂದಿಸಬೇಕು. ತಾಳ್ಮೆಯಿಂದ ರೈತರಿಗೆ ಮಾಹಿತಿ ನೀಡಬೇಕು. ಈ ಹಿಂದೆ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಗೆ ಮಹತ್ವ ನೀಡಲಾಗುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ ಸೊಯಾಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಎಪಿಎಂಸಿ ಅಧಿಕಾರಿಗಳು ರೈತರ ಉತ್ಪನ್ನಗಳ ಖರೀದಿಗೆ ಸೂಕ್ತ ವ್ಯವಸ್ಥೆಗಳು ಕಲ್ಪಿಸಬೇಕು ಎಂದರು.
ಅನೇಕ ಸಂಕಷ್ಟಗಳಿಂದ ಬಂದ್ ಆಗಿರುವ ಬಿಎಸ್‌ಎಸ್‌ಕೆ ಪ್ರಾರಂಭಿಸಿ 55 ಸಾವಿರ ಮೆ. ಟನ್ ಕಬ್ಬು ನೂರಿಸಲಾಗಿದೆ. ಅದು 5 ಲಕ್ಷ ಮೆ. ಟನ್ ಕಬ್ಬು ನುರಿಸಿದ ಅನುಭವ ಆಗಿದೆ. ಕಾರ್ಖಾನೆಗೆ ಸರ್ಕಾರದ ಸೂಕ್ತ ನೆರವು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಕೃಷಿ ಅಧಿಕಾರಿ ಗೌತಮ ಮಾತನಾಡಿ, ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಿಗದಿತ ಪ್ರಮಾಣದ ಸೊಯಾ, ತೊಗರಿ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಇನ್ನೂ ಬೇಡಿಕೆಗೆ ಅನುಸಾರ ದಾಸ್ತಾನು ಬರಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ವಲಯಗಳ ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಸಮಿತಿ ಉಪಾಧ್ಯಕ್ಷ ದಸ್ತಗಿರ ಪಟೇಲ್, ನಾರಾಯಣರಾವ್ ಚಿದ್ರಿ, ಶಿವಕುಮಾರ ಸಾದಾ, ಇಸ್ಮಾಯಿಲ್ ಸೇಟ್, ರಾಜೇಶ ಮಂಠಾಳಕರ್, ಜ್ಞಾನೇಶ್ವರ ಭೋಸ್ಲೆ, ಧರ್ಮರೆಡ್ಡಿ, ರಾಜು ಪಸಾರ, ಝರೆಪ್ಪ ಮಣಗಿರೆ, ನೀಲಾಂಬಿಕಾ, ವಿಶಾಲ, ಚೇತನಕುಮಾರ, ಕೃಷ್ಣರೆಡ್ಡಿ ಇದ್ದರು.