ಬಾಗಲಕೋಟೆ: ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳ ಆರೋಗ್ಯಾಧಿಕಾರಿಗಳು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ ಸೂಚಿಸಿದರು.
ಜಿಪಂ ನೂತನ ಸಭಾಂಗಣದಲ್ಲಿ ಶನಿವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಕುಂದುಕೊರತೆ ಸಭೆ ನಡೆಸಿ ಮಾತನಾಡಿದರು.
ಸರಕಾರಿ ಆಸ್ಪತ್ರೆ ಇದ್ದರೂ ಪ್ರಯೋಜನಕ್ಕೆ ಬರಲಿಲ್ಲ ಎಂಬ ಕೂಗು ಸಾರ್ವಜನಿಕರಿಂದ ಬರದಂತೆ ಕಾರ್ಯನಿರ್ವಹಿಸುವುದು, ಎಲ್ಲ ವೈದ್ಯಾಧಿಕಾರಿ ಹಾಗೂ ಉಪಕರಣಗಳನ್ನೊಳಗೊಂಡಂತೆ ಇತರೇ ಮೂಲಭೂತ ವ್ಯವಸ್ಥೆ ಹೊಂದಿರುವಂತೆ ನೋಡಿಕೊಳ್ಳುವುದು ಜಿಲ್ಲಾ ಆರೋಗ್ಯಾಧಿಕಾರಿಯ ಜವಾಬ್ದಾರಿಯಾಗಿದೆ ಎಂದರು.
ಜನರ ಅಹವಾಲು ಕೇಳಿಯೇ ಲೋಕಾಯುಕ್ತರು ಹುನುಗುಂದ ಮತ್ತು ಇಳಕಲ್ಲ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡುವಂತಾಯಿತು. ಸುಸಜ್ಜಿತ ಆಸ್ಪತ್ರೆ ಕಟ್ಟಡವಿದ್ದರೂ ಒಂದೂ ಹೆರಿಗೆಯಾದ ದಾಖಲೆ ಇಲ್ಲದಿರುವುದು ಕಳೆದ ಭೇಟಿಯಲ್ಲಿ ಕಂಡು ಬಂದಿತ್ತು. ಈ ಬಾರಿ ಮೇಲ್ನೋಟಕ್ಕೆ ಕಡಿಮೆ ಹೆರಿಗೆಯಾಗಿವೆ ಎಂದು ವರದಿ ನೀಡುತ್ತಿದ್ದು, ಲೋಕಾಯುಕ್ತರು ಬಂದ ನಂತರವೇ ಜನರಿಗೆ ಸ್ಪಂದಿಸುವ ಕೆಲಸವಾಗಬಾರದು. ಎಲ್ಲರೂ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಹೆರಿಗೆ ಮತ್ತು ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿರುವುದಿಲ್ಲ. ಜಿಲ್ಲಾಧಿಕಾರಿ ಕೂಡ ನಿಯಮಿತವಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಔಷಧಿ ವಿತರಣೆಯ ಲೆಕ್ಕಾಚಾರ, ನರ್ಸ್, ವೈದ್ಯಾಧಿಕಾರಿಗಳ ನೇಮಕ ಎಲ್ಲವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಲೋಪದೋಷಗಳಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 65 ಕೆರೆ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವರದಿ ಇದೆ. ನಮ್ಮ ಮುಂದಿನ ಪೀಳಿಗೆಗೆ ಕೆರೆ ಬಾವಿ, ಜಲ ಸಂಪನ್ಮೂಲಗಳನ್ನು ಉಳಿಸುವುದು ಅತ್ಯವಶ್ಯವಾಗಿದೆ. ಆದ್ಯತೆಯ ಮೇರೆಗೆ ಈ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಆಯಾ ತಾಲೂಕಿನ ತಹಶೀಲ್ದಾರ್‌ರು ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಸ್ವಚ್ಛ ಭಾರತ ಪರಿಕಲ್ಪನೆಯಡಿಯಲ್ಲಿ ಸರಕಾರ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದರೂ ಕೂಡ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳು ಬಯಲು ಶೌಚ ಮುಕ್ತ ಗ್ರಾಮಗಳಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿ ಕಾರಿಗಳು ಜನರೊಂದಿಗೆ ಬೆರೆತು, ಜನರ ನಾಡಿ ಮಿಡಿತ ತಿಳಿದು ಮನ ಒಲಿಸುವ ಮೂಲಕ ಗ್ರಾಮೀಣ ಜನರು ಶೌಚಾಲಯ ನಿರ್ಮಿಸಿಕೊಂಡು ಅದರ ಬಳಕೆ ಮಾಡುವಂತೆ ಮಾಡಿ ಅವರಲ್ಲಿ ನೈರ್ಮಲ್ಯದ ಮಹತ್ವ ತಿಳಿಸಿ. ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗಿಸುವುದು ಎಲ್ಲ ಅಧಿಕಾರಿಗಳ ಕಾರ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಮಾತನಾಡಿ, ತಾವು ಪ್ರತಿ ತಾಲೂಕು ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ಕೆರೆ ಒತ್ತುವರಿಗೆ ಸಂಬಂ ಧಿಸಿದಂತೆ ಮುಂಬರುವ ಎರಡು ತಿಂಗಳಲ್ಲಿ 15 ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಣ್ಣ ನೀರಾವರಿ ಇಲಾಖೆಗೆ ಕೆರೆಯ ಸುತ್ತ ಸಂರಕ್ಷಣಾ ಟ್ರೆಂಚ್ ನಿರ್ಮಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಭೂಬಾಲನ್ ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆ ಉತ್ತಮ ಸೇವೆ ಲಭ್ಯವಾಗಿದೆ. ಮೂಲಭೂತ ಸೌಕರ್ಯಗಳು ಸುಧಾರಿಸಿವೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದೆಣ್ಣನವರ ಉಪಸ್ಥಿತರಿದ್ದರು.