ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬ ಸ್ಥಳದಲ್ಲಿ ಕಳೆದ 100 ವರ್ಷಕ್ಕಿಂತಲೂ ಅಧಿಕ ಸಮಯದಿಂದ ವಾಸವಾಗಿದ್ದ ಕುಟುಂಬವೊಂದು ಮನೆ ನಿರ್ಮಾಣಕ್ಕೆ ತಳಪಾಯ ಹಾಕಿರುವುದನ್ನು ಏಕಾಏಕಿ ಅರಣ್ಯಧಿಕಾರಿಗಳು ಕೆಡವಿ ದರ್ಪ ತೋರಿದ ಘಟನೆ ಬೆನ್ನಿಗೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಮನೆ ಮಂದಿ ಮೇಲೆಯೇ ದೂರು ನೀಡಿ ಅಮಾನವೀಯತೆ ಮೆರದಿದ್ದಾರೆ.
ಅ.6 ರಂದು ನಿರ್ಮಾಣ ಹಂತದ ಮನೆ ಕೆಡವಿದ್ದನ್ನು ಪ್ರಶ್ನಿಸಿ ಅ.7ರಂದು ಶಾಸಕ ಹರೀಶ್ ಪೂಂಜ ಅವರು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳುನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ತಾತ್ಕಾಲಿಕ ಮನೆ ನಿರ್ಮಾಣ ಮಾಡಿದ್ದರಲ್ಲದೆ ಅರಣ್ಯ ಸಚಿವರ ಈಶ್ವರ್ ಖಂಡ್ರೆ ಅವರಿಗೆ ಸ್ಥಳದಿಂದಲೇ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಕುರಿತು ಮಾಹಿತಿ ಪಡೆದ ಸಚಿವರು ಸಧ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ. ಅವರು ಕುಟುಂಬದ ಯಜಮಾನ ಲೋಲಾಕ್ಷ ಸಹಿತ ಹರೀಶ ಕೋಯಿಲಾ, ಪ್ರಸನ್ನ ಮಾಣಿಗೇರಿ, ಯಶವಂತ ಗೌಡ, ನೋಣಯ್ಯ ಗೌಡ, ಜನಾರ್ದನ ಗೌಡ ಕುದ್ದ, ಪದ್ಮನಾಭ ಗೌಡ ಕುದ್ದ, ಧನಂಜಯ ಗೌಡ ಬಂಡೇರಿ, ರಾಮಚಂದ್ರ ಮೇಸ್ತ್ರಿ, ಶ್ರೀನಿವಾಸ ಗೌಡ ಕುದ್ದ, ಉದಯ ಗೌಡ ಕುದ್ದ ಮತ್ತು ಇತರರ ಮೇಲೆ ದೂರು ದಾಖಲಿಸಿ ಅಮಾನವೀಯತೆ ಮೆರೆದಿದ್ದಾರೆ.
ಪ್ರಕರಣದಲ್ಲಿ ನೀಡಿದ ವಿವರ: ಉಪವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬಂದಿಗಳು ಅ.7 ರಂದು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಹಮ್ಮಿನಡ್ಕ ಎಂಬಲ್ಲಿಯ ನಿಡ್ಲೆ ವಿಸ್ತೃತ ಬ್ಲಾಕ್ 2 ಮೀಸಲು ಅರಣ್ಯ ಪ್ರದೇಶದಲ್ಲಿ ಮೋಜಣಿ ಕಾರ್ಯನಿರ್ವಹಿಸುತ್ತಿರುವ ಸಮಯ 10 ಜನ ಆರೋಪಿಗಳು ಮತ್ತು ಇತರರೆಲ್ಲರೂ ಸೇರಿಕೊಂಡು ಏಕಾಏಕಿಯಾಗಿ ಬಂದು ಲೋಲಾಕ್ಷ ಯಾನೆ ಅನಂತು ಅವರು ಮೀಸಲು ಅರಣ್ಯ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಲು ಒತ್ತುವರಿದಾರರ ಪರವಾಗಿ ನಿಂತು ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬಂದಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಮನೆ ಯಜಮಾನ ವೃದ್ಧ ಲೋಲಾಕ್ಷ ಅವರು ಕಣ್ಣು ಕಾಣದೇ ಇದ್ದು ಅವರ ಮೇಲೂ ದೂರು ನೀಡುವ ಮೂಲಕ ಶಾಸಕರು ಹಾಗೂ ಸಚಿವರ ಆದೇಶವನ್ನೂ ಲೆಕ್ಕಿಸದೆ ದರ್ಪ ತೋರಿರುವ ಘಟನೆ ನಡೆದಿದೆ.