ಚಿತ್ರದುರ್ಗ: ನೀರು, ಮೇವು, ಗೋಶಾಲೆ ಮಾಹಿತಿ ಕೇಳಿದರೆ ಅಧಿಕಾರಿಗಳು ಯಾವುದೇ ಉತ್ತರ ನೀಡಲ್ಲ. ಬರ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡದವರು ಕೂಡಲೇ ಜಾಗ ಖಾಲಿ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಗುಡುಗಿದರು.
ಜಿಲ್ಲೆಯಲ್ಲಿ ಭೀಕರ ಬರವಿದೆ. ಜಾನುವಾರುಗಳಿಗೆ ಮೇವಿಲ್ಲ. ಹಿರಿಯೂರು ತಾಲೂಕಿನಲ್ಲಿ ಯಾಕೆ ಗೋಶಾಲೆ ಆರಂಭಿಸಿಲ್ಲ, ಗೋಶಾಲೆ ಆರಂಭಿಸದಂತೆ ಯಾರಾದರೂ ಅಡ್ಡಿಪಡಿಸಿದ್ದಾರೆಯೇ, ನಿಮಗೆ ಮನುಷ್ಯತ್ವವೇ ಇಲ್ಲವೆ, ನೀವು ಉಂಡು, ನೀರು ಕುಡಿದರೆ ಸಾಕೇ, ಮೂಕ ಪ್ರಾಣಿಗಳು ಮೇವು, ನೀರಿಲ್ಲದೆ ಸಾಯಬೇಕೆ, ಟೆಂಡರ್ ಕರೆದಿದ್ದರೂ ಯಾಕೆ ಗೋಶಾಲೆ ಆರಂಭಿಸಿಲ್ಲ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕರಿಗೆ ಪ್ರಶ್ನೆಗಳ ಸುರಿಮಳೆಗೈದರು.
ಚಿತ್ರದುರ್ಗ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಸೇರಿದಂತೆ ಜಿಲ್ಲೆಯ ಬಹುತೇಕ ಎಇಇಗಳ ವಿರುದ್ಧ ಕಿಡಿ ಕಾರಿದ ಸಚಿವರು, ನಿಮಗೆ ಎಷ್ಟು ಸರ್ವೀಸ್ ಆಗಿದೆ, ನೀರಿನ ಸಮಸ್ಯೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ, ಜನ ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ನೀವೇನು ಎಇಇಗಳೇ ಅಥವಾ ಗುಮಾಸ್ತರೇ, ಗುಮಾಸ್ತರೇ ಎಷ್ಟೋ ಮೇಲು. ಕೇಳಿದ್ದಕ್ಕೆ ಉತ್ತರವನ್ನಾದರೂ ಕೊಡುತ್ತಾರೆ, ಆದರೆ ನೀವು ಮಾತ್ರ ಬಾಯಿ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 1666 ಕೊಳವೆಬಾವಿ ಕೊರೆಯಲಾಗಿದೆ, ಇದರಲ್ಲಿ 895 ಕೊಳವೆಬಾವಿಗಳಲ್ಲಿ ನೀರು ಬಂದಿದೆ, 771 ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬಂದಿದೆ ಎಂದು ಮಾಹಿತಿ ನೀಡಿದ್ದೀರಿ, ಹಾಗಾದರೆ ಜಿಲ್ಲೆಯಲ್ಲಿ ಒಂದೇ ಒಂದು ಕೊಳವೆಬಾವಿ ವಿಫಲವಾಗಿಲ್ಲವೇ, ಕೊಳವೆಬಾವಿ ವಿಫಲವಾಗಿದ್ದರೆ ಯಾಕೆ ಮಾಹಿತಿ ನೀಡಿಲ್ಲ, ಇದರ ಉದ್ದೇಶ ಏನು, ಕಾರ್ಯಪಾಲಕ ಅಭಿಯಂತರರ ವಿರುದ್ಧ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು, ಮಾಹಿತಿ ಇಲ್ಲದೆ ಸಭೆಗೆ ಯಾಕೆ ಬಂದಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
Advertisement
ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ಅಂಗವಾಗಿ ನೀತಿಸಂಹಿತೆ ಇದೆ, ನಮ್ಮನ್ನು ಯಾರೂ ಕೇಳುವುದಿಲ್ಲ ಎನ್ನುವ ಉದಾಸೀನ ಮನೋಭಾವ ಬೇಡ. ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡುತ್ತಿರುವುದು ಎಷ್ಟು ಸರಿ, ಆಟವಾಡಲು ಬಂದಿದ್ದೀರಾ, ಯಾವುದೇ ಮಾಹಿತಿ ಕೇಳಿದರೂ ನಿಮ್ಮಿಂದ ಉತ್ತರ ಬರುತ್ತಿಲ್ಲ. ಅಮಾನತುಗೊಳಿಸಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
Related Articles
ಉಚಿತ ಕೊಳವೆಬಾವಿ ನೀಡಿದ್ದಕ್ಕೆ ಮೆಚ್ಚುಗೆ:
ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ನೀಡಲು ನನ್ನಿವಾಳ ಗ್ರಾಮದ ರುದ್ರಮುನಿಯಪ್ಪ ಎಂಬುವವರು ಉಚಿತವಾಗಿ ತಮ್ಮ ಕೊಳವೆಬಾವಿ ನೀಡಿದ್ದಾರೆ. ಜನಹಿತಕ್ಕಾಗಿ ಈ ನಿರ್ಧಾರ ಕೈಗೊಂಡ ಅವರನ್ನು ಅಭಿನಂದಿಸುವುದಾಗಿ ಸಚಿವ ವೆಂಕಟರಮಣಪ್ಪ ಹೇಳಿದರು. ಹಿರಿಯೂರು ತಾಲೂಕಿನಲ್ಲಿ ವಿವಿ ಡ್ಯಾಂ ಇದ್ದರೂ 42 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ, ಅಷ್ಟೊಂದು ಭೀಕರ ಪರಿಸ್ಥಿತಿ ಇದೆಯಾ ಎಂದು ಸಿಇಒ ಅವರಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ವಿವಿ ಡ್ಯಾಂನ ಎರಡು ಜಾಕ್‌ವೆಲ್ ಗಳಿಗೆ ನೀರು ಬರುತ್ತಿಲ್ಲ. ಡ್ಯಾಂನಲ್ಲಿ ನೀರು ಖಾಲಿಯಾಗಿದೆ. ನಾನೇ ಖುದ್ದಾಗಿ ಪರಿಶೀಲನೆ ಮಾಡಿ ಬಂದಿದ್ದೇನೆ. ಡ್ಯಾಂ ನೀರು ಹರಿಯುತ್ತಿದ್ದ ಜನವಸತಿಗಳಲ್ಲೇ ಹೆಚ್ಚು ಸಮಸ್ಯೆ ಇದೆ. ಹಾಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
Advertisement