Advertisement

ಬೆಳಗಾವಿ ಅಧಿವೇಶನಕ್ಕೆ ಸಕಲ ಸಿದ್ದತೆ: ಪರಿಶೀಲನೆ ನಡೆಸಿದ ಅಧಿಕಾರಿಗಳು

02:24 PM Dec 01, 2021 | Team Udayavani |

ಬೆಳಗಾವಿ: ಅಧಿವೇಶನ ಆರಂಭಕ್ಕೆ ಸಮಯಾವಕಾಶ ಕಡಿಮೆ ಇರುವುದರಿಂದ ಇಂಟರ್ನೆಟ್ ಪೂರೈಕೆ, ಕಂಪ್ಯೂಟರ್ ಅಳವಡಿಕೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಎರಡು ದಿನ ಮುಂಚಿತವಾಗಿ ಪ್ರತಿಯೊಂದು ವ್ಯವಸ್ಥೆಯನ್ನು ಸಜ್ಜುಗೊಳಿಸಿ ಪ್ರಾಯೋಗಿಕವಾಗಿ ಪರಿಶೀಲಿಸಬೇಕು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ಸೂಚನೆ ನೀಡಿದರು.

Advertisement

ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧದಲ್ಲಿ ಬಿಎಸ್ಎನ್ಎಲ್ ಹಾಗೂ ಕೇಸ್ವಾನ್ ಮೂಲಕವೂ ಡಿ.5 ರೊಳಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕು. ಅಧಿವೇಶನ ಸಂದರ್ಭದಲ್ಲಿ ಸಚಿವಾಲಯ ಸಿಬ್ಬಂದಿಗೆ ಅಗತ್ಯ ಲೇಖನ ಸಾಮಗ್ರಿ, ಪ್ರಿಂಟರ್ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಸಂಬಂಧಿಸಿದ ಅಧಿಕಾರಿಗಳು ಅಥವಾ ಸಿಬ್ಬಂದಿ ಸಂಪರ್ಕಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆ ಒಳಗೊಂಡಿರುವ ಮಾಹಿತಿ ಪುಸ್ತಕವನ್ನು ಮುದ್ರಿಸಬೇಕು ಎಂದು ಹೇಳಿದರು.

ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆಗೆ ಗಮನಹರಿಸಬೇಕು. ಕೋವಿಡ್ ಪರೀಕ್ಷೆ ಮಾಡಲು ಕೂಡ ವಿಶೇಷ ತಂಡಗಳನ್ನು ನಿಯೋಜಿಸಬೇಕು ಎಂದು ಹೇಮಲತಾ ನಿರ್ದೇಶನ ನೀಡಿದರು.

ಕಂಪ್ಯೂಟರ್, ಇಂಟರ್ನೆಟ್, ದೂರವಾಣಿ, ಕೇಂದ್ರೀಕೃತ ಮುದ್ರಣ ವ್ಯವಸ್ಥೆ, ಕುಡಿಯುವ ನೀರು, ಸಾರಿಗೆ, ವಸತಿ, ಲಿಫ್ಟ್ ನಿರ್ವಹಣೆ, ಅಗ್ನಿಶಾಮಕ ವ್ಯವಸ್ಥೆ, ಭದ್ರತೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

Advertisement

ಸುವರ್ಣ ವಿಧಾನಸೌಧ ಸೇರಿದಂತೆ ಗಣ್ಯರು ವಾಸಿಸುವ ಕಡೆಗಳಲ್ಲಿ ಆಹಾರ ಗುಣಮಟ್ಟ ಪರಿಶೀಲನೆಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗುತ್ತದೆ. ಇದರೊಂದಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಆ್ಯಂಬ್ಯುಲೆನ್ಸ್ ಮತ್ತು ವೈದ್ಯಕೀಯ ‌ತಂಡಗಳನ್ನು ಎಲ್ಲ ಕಡೆಗಳಲ್ಲಿ ನಿಯೋಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿ ಕುಡಿಯುವ ನೀರು ಸರಬರಾಜು, ಕಂಪ್ಯೂಟರ್ ನಿರ್ವಹಣೆ, ಊಟೋಪಹಾರ ಪೂರೈಕೆ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ಹೇಳಿದರು.

ಸಾರಿಗೆ ಸೌಲಭ್ಯ ಒದಗಿಸಲು ಬೇರೆ ಬೇರೆ ಜಿಲ್ಲೆಗಳಿಂದ ವಿವಿಧ ಬಗೆಯ 300 ವಾಹನಗಳನ್ನು ತರಿಸಲು ಕ್ರಮ ಕೈಗೊಳ್ಳಲಾಗಿದೆ. ವಸತಿ, ಸಾರಿಗೆ ಮತ್ತು ಊಟೋಪಹಾರಕ್ಕೆ ಸಂಬಂಧಿಸಿದ ತಂಡಗಳು ಎಲ್ಲ ಸಿದ್ಧತೆಗಳನ್ನು ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಧಿವೇಶನದ ವಿಶೇಷಾಧಿಕಾರಿ ಡಾ.ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಕ್ಯಾಳ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಅಪರ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next