Advertisement

ಅಧಿಕಾರಿಗಳೆಂದರೆ ತಮಗೆ ಇಷ್ಟ ಬಂದಂತೆ ಹಾಜರಾಗುವುದಲ್ಲ!

03:30 PM May 06, 2017 | |

ಧಾರವಾಡ: ಇಲ್ಲಿಯ ತಾಪಂ ಕಚೇರಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾಪಂ ಮಾಸಿಕ ಕೆಡಿಪಿ ಸಭೆ ಶುಕ್ರವಾರ ಜರುಗಿತು. ವಿವಿಧ ಇಲಾಖೆಗಳಿಂದ ಮಾಸಿಕ ಪ್ರಗತಿಯ ವರದಿ ನೀಡದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷರು, ಈರೀತಿ ಮಾಹಿತಿಯೇ ನೀಡದೇ ಹೋದರೆ ಮಾಸಿಕ ಸಭೆ ಮಾಡೋದು ಹೇಗೆ? ಇಲಾಖೆ ಪ್ರಗತಿಯ ಮಾಹಿತಿ ನೀಡದಿದ್ದರೆ ಈ ಸಭೆಗೆ ಬೆಲೆ ಏನಿದೆ?

Advertisement

ಹೀಗಾಗಿ ಕಡ್ಡಾಯವಾಗಿ ಪ್ರತಿ ತಿಂಗಳ 2 ನೇ ದಿನಾಂಕದೊಳಗೆ ಎಲ್ಲ ಇಲಾಖೆಗಳು ತಮ್ಮ ಮಾಸಿಕ ಪ್ರಗತಿಯ ವರದಿ ಸಲ್ಲಿಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದಕ್ಕೆ ಸಾಥ್‌ ನೀಡಿದ ಜಿಪಂ ಯೋಜನಾ ನಿರ್ದೇಶಕ ಎಸ್‌.ಎಂ. ಕೆಂಚಣ್ಣವರ, ತಾಪಂ ಪ್ರಗತಿ ಪರಿಶೀಲನಾ ಸಭೆ ಎಂದರೆ ಅಧಿಕಾರಿಗಳು ತಮಗೆ ಇಷ್ಟ ಬಂದ ವೇಳೆಗೆ ಸಭೆಗೆ ಹಾಜರಾಗುವುದಲ್ಲ.

ಸಭೆಯನ್ನು 11 ಗಂಟೆಗೆ ನಿಗದಿ ಮಾಡಲಾಗಿತ್ತು. 1ಗಂಟೆಯಾದರೂ ಇನ್ನೂ ಅಧಿಕಾರಿಗಳು  ಬಂದಿಲ್ಲ. ಮಾಹಿತಿ ಪುಸ್ತಕದಲ್ಲಿ ಪರಿವಿಡಿಇಲ್ಲ. ಕ್ರಮಸಂಖ್ಯೆ, ಪುಟ ಸಂಖ್ಯೆಗಳನ್ನು ನಮೂದಿಸಿಲ್ಲ. ಇದನ್ನು ಏನೆಂದು ತಿಳಿದಿದ್ದೀರಿ? ಪ್ರಗತಿ ಪರಿಶೀಲನಾ ಸಭೆಗೆ ಬೆಲೆ ಇಲ್ಲವೇ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಲ್ಲದೇ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು, ಅದರಲ್ಲಿ  ತಾಲೂಕು ಆರೋಗ್ಯಾಧಿಕಾರಿ ಕೂಡ ಇರಲಿಲ್ಲ.

ಅವರು ತಮ್ಮ ಬದಲಿಗೆ ಇಲಾಖೆಯ ಬೇರೆ ಸಿಬ್ಬಂದಿಯನ್ನು ಸಭೆಗೆ ಕಳಿಸಿದ್ದರು. ಇದರಿಂದ ಕೋಪಗೊಂಡ  ಜಿಪಂ ಯೋಜನಾ ನಿರ್ದೇಶಕ ಎಸ್‌.ಎಂ. ಕೆಂಚಣ್ಣವರ, ಫೋನ್ ಮಾಡಿ ಕರೆಸಿರಿ ಎಂದು ಸಿಬ್ಬಂದಿಗೆ ತಿಳಿಸಿದರು. ಅದರಂತೆ ಸಿಬ್ಬಂದಿ ಫೋನ್ ಮಾಡಿ ಕರೆದರೂ ಆ ಅಧಿಕಾರಿ ಮಾತ್ರ ಸಭೆಗೆ ಹಾಜರಾಗಲಿಲ್ಲ. 

ಬಿಇಒ ಗರಂ: ಆರ್‌ಟಿಇಯಡಿ ಶಾಲಾ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಕೆಲವೊಂದಿಷ್ಟು ಸಮಸ್ಯೆ ಬಗ್ಗೆ ಸಭೆಯಲ್ಲಿ ಹೇಳಿಕೊಳ್ಳಲು ಬಂದ ಪೋಷಕರು ಹಾಗೂ ಗ್ರಾಮೀಣ ಬಿಇಒ ಶ್ರೀಶೈಲ ಕರೀಕಟ್ಟಿ ಅವರೊಂದಿಗೆ ಕೆಲ ಹೊತ್ತು ಮಾತಿನ ಚಕಮಕಿಗೆ ಸಂಭವಿಸಿತು. ಬಿಇಒ ವಿರುದ್ಧ ಅಸಮಾಧಾನ ಹೊರ ಹಾಕಿದ ಪೋಷಕರು, ಏಕವಚನದಲ್ಲಿ ಮಾತನಾಡಿದ್ದು ಕರೀಕಟ್ಟಿ ಅವರನ್ನು ಕೆರಳಿಸಿತು.

Advertisement

ಇದಕ್ಕೆ ಪ್ರತ್ಯುತ್ತರ ನೀಡಿದ ಅವರು, ಇದು ಸರಕಾರ ಮಟ್ಟದ ಸಮಸ್ಯೆ ಆಗಿದ್ದು, ಅಲ್ಲಿಂದಲೇ ಪರಿಹಾರ ಆಗಿ ರಬೇಕು. ಹೀಗಾಗಿ ಸ್ವಲ ದಿನ ಕಾಯಿರಿ. ಅದನ್ನು ಬೇಕಾಬಿಟ್ಟಿಯಾಗಿ ಮಾತನಾಡಿದರೆ ಹೇಗೆ? ನಮಗೂ ಮಾನ, ಸ್ವಾಭಿಮಾನ ಇದೆ ಎಂದು ಕಿಡಿಹಾಕಿದರು. ಇದರಿಂದ ಪೋಷಕರು ಹಾಗೂ ಬಿಇಒ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕೊನೆಗೆ ತಾಪಂ ಅಧ್ಯಕ್ಷರು ಮಧ್ಯ ಪ್ರವೇಶಿಸಿ, ತಿಳಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ಈ ವೇಳೆ ಮಾತನಾಡಿದ ಗ್ರಾಮೀಣ ಬಿಇಒ ಶ್ರೀಶೈಲ ಕರೀಕಟ್ಟಿ, ರಾಜ್ಯಾದ್ಯಂತ ಆರ್‌ಟಿಇಯಡಿ ಶಾಲಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಓಟಿಪಿ ಸಂಖ್ಯೆ ಬರದೇ ಇರುವುದರಿಂದ ಪ್ರವೇಶ ಪ್ರಕ್ರಿಯೆ ನಿಧಾನವಾಗಿ ಸಾಗುತ್ತಿದೆ.

ಪಾಲಕರು ಇದನ್ನರಿತು ಸಹಕರಿಸಬೇಕು. ಈಗಾಗಲೇ ಅನೇಕ ಪಾಲಕರಿಗೆ ಆರ್‌ಟಿಇಯಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ಪಾಲಕರ ಮೊಬೈಲ್‌ಗೆ ಓಟಿಪಿ ಸಂಖ್ಯೆ ಎಸ್‌ಎಂಎಸ್‌ ಮೂಲಕ ಬಂದಿದೆ. ಆದರೆ, ಓಟಿಪಿ ಸಂಖ್ಯೆಯನ್ನು ಶಿಕ್ಷಣ ಇಲಾಖೆಯವರು ಶಾಲೆಗಳಿಗೆ ತಲುಪಿಸಿಲ್ಲ.

ಹೀಗಾಗಿ ತೊಂದರೆ ಉಂಟಾಗಿದೆ ಎಂದು ವಿವರಿಸಿದರು. ಬೇಸಿಗೆ ಶಿಬಿರದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಶಿಬಿರದತ್ತ ಆಕರ್ಷಿಸಲು ಮಧ್ಯಾಹ್ನದ ಬಿಸಿಯೂಟ ಯೋಜನೆ ತರಲಾಗಿದೆ. ಆದರೂ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಎಷ್ಟು ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೋ ಅಷ್ಟು ಮಕ್ಕಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಏಪ್ರಿಲ್‌ ತಿಂಗಳಿನಲ್ಲಿ 40 ಲಕ್ಷ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾದ ಹಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ತಾಲೂಕಿನ ಕಲ್ಲಾಪೂರ, ಕಲಕೇರಿಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ನಾಗಲಾವಿ ಗ್ರಾಮದಲ್ಲಿ ಫಶಿಂಗ್‌ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಈಗಾಗಲೇ ನೀರು ಪೂರೈಸಲಾಗುತ್ತಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next