Advertisement
ಹಾಲು, ಹಣ್ಣು, ದಿನಸಿ ಸಾಮಗ್ರಿಯನ್ನು ಒಳಗೊಂಡಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ಬೆಳಗ್ಗಿನ ಕೆಲವು ಗಂಟೆಗಳ ಕಾಲ ಅಂಗಡಿ ಮಳಿಗೆಗಳಲ್ಲಿ ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದರು. ಸೋಂಕಿನ ಭೀಕರತೆಯ ಅರಿವಿದ್ದರೂ ವಾಹನಗಳ ಸಂಚಾರ ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಕಂಡು ಬಂತು. ನಗರ ವ್ಯಾಪ್ತಿಯಲ್ಲಿ ಜನರು ಒಂದೆಡೆ ಸೇರದಂತೆ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರಲ್ಲದೆ, ಆಗಾಗ್ಗೆ ಎಚ್ಚರಿಕೆಯನ್ನು ನೀಡುತ್ತಿದ್ದರು. ಹಣ್ಣು ಮತ್ತು ತರಕಾರಿ ಮಳಿಗೆಗಳಲ್ಲಿ ಜನರು ಒಂದಷ್ಟು ಹೆಚ್ಚಿನ ಪ್ರಮಾಣದಲ್ಲೆ ಸೇರಿದ್ದು ಕಂಡು ಬಂತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ಕಾರದ ಲಾಕ್ ಡೌನ್ ಆದೇಶವಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳ ಸಂಚಾರ, ಅಂಗಡಿ ಮಳಿಗೆಗಳಲ್ಲಿ ನಿತ್ಯೋಪಯೋಗಿ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದರು. ನಗರದಲ್ಲಿ ಜನ ಗುಂಪು ಸೇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೋಲಿಸರು, ತಕ್ಷಣ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದರು.
Related Articles
Advertisement
ತಾಲೂಕು ಕೇಂದ್ರ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಘಟನೆ ನಡೆಯಿತು. ಈ ಸಂದರ್ಭ ಜನರು ಗುಂಪು ಗೂಡುವುದನ್ನು ತಡೆಯಲು ತಹಶೀಲ್ದಾರ್ ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.
ಗಡಿ ಪ್ರವೇಶ ನಿಷೇಧಕೊಡಗಿನ ಗಡಿ ಭಾಗ ಶಿರಂಗಾಲ ಹಾಗೂ ಕೊಪ್ಪ ಬಳಿ ಇರುವ ಅರಣ್ಯ ಇಲಾಖೆಯ ತಪಾಸಣ ಗೇಟ್‌ಗಳನ್ನು ಬಂದ್ ಮಾಡುವ ಮೂಲಕ ಹಾಸನ-ಕೊಡಗು ಹಾಗೂ ಕೊಡಗು ಮೈಸೂರು ನಡುವೆ ಸಂಚರಿಸುವ ವಾಹನಗಳನ್ನು ತಡೆ ಹಿಡಿಯಲಾಯಿತು. ಶಿರಂಗಾಲ ಗೇಟ್ ಬಳಿ ಹಾಸನ ಕಡೆಯಿಂದ ಕೊಡಗಿಗೆ ಬರುವ ಹಾಗೂ ಕೊಡಗು ಜಿಲ್ಲೆಯಿಂದ ಹೋಗುವ ವಾಹನಗಳನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ತಪಾಸಣೆ ಮಾಡುವುದರೊಂದಿಗೆ ಹೊರಗಿನ ವಾಹನಗಳು ಜಿಲ್ಲೆಗೆ ಬರುವುದನ್ನು ತಡೆದರು. ಅಲ್ಲದೆ ಹೊರ ಜಿಲ್ಲೆಗೆ ಅಗತ್ಯವಾಗಿ ಹೋಗಬೇಕಿದ್ದವರಿಗೆ ಮಾತ್ರ ಅವಕಾಶ ಮಾಡಿಕೊಟ್ಟರು. ಇತ್ತ ಕೊಪ್ಪ ಗೇಟ್‌ನಲ್ಲೂ ಮೈಸೂರು ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಆಗಮಿಸುವ ಅಗತ್ಯ ವಾಹನಗಳನ್ನು ಹೊರತುಪಡಿಸಿ ಉಳಿದ ಸಾರ್ವಜನಿಕರ ವಾಹನಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಕೊಡಗು ಜಿಲ್ಲೆಯಿಂದ ಮೈಸೂರು ಜಿಲ್ಲೆಯತ್ತ ಪ್ರಯಾಣ ಬೆಳೆಸಿದವರಿಗೆ ಮತ್ತೆ ಜಿಲ್ಲೆಗೆ ಹಿಂದಿರುಗದಂತೆ ಷರತ್ತು ವಿಧಿಸಿ ಅವಕಾಶ ಕಲ್ಪಿಸಲಾಯಿತು. ಕೆಲವರಿಗೆ ಸಮಯ ನಿಗದಿಪಡಿಸಿ ಪಾಸ್ ವಿತರಿಸಿ ಬಿಡುತ್ತಿದ್ದುದು ಕಂಡು ಬಂತು. ಆಟೋಗಳು, ಟ್ಯಾಕ್ಸಿಗಳ ಸಂಚಾರ, ದಿನಸಿ ಅಂಗಡಿಗಳ ವ್ಯಾಪಾರ ಕಂಡುಬಂತು. ಶಿರಂಗಾಲ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಸರ್ವ ಸದಸ್ಯರು ಗ್ರಾಮದ ಎಲ್ಲ ವಾರ್ಡ್ ಗಳಿಗೆ ಭೇಟಿ ನೀಡಿ ಶುಚಿತ್ವ ಹಾಗೂ ಕೋವಿಡ್-19 ವೈರಸ್ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಕೂಡಿಗೆಯ ಕೆಲವು ಅಂಗಡಿಗಳು ಮುಚ್ಚಲ್ಪಟ್ಟಿದವು. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡೂರು ಕೈಗಾರಿಕಾ ಪ್ರದೇಶದಲ್ಲಿರುವ 50 ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದವು. ಈ ವ್ಯಾಪ್ತಿಯ ಸಣ್ಣ ಮತ್ತು ದೊಡ್ಡ ಕೈಗಾರಿಕಾ ಘಟಕಗಳಲ್ಲಿ ಬೆಳಗ್ಗೆ ಬೆಳಗ್ಗೆ ಕೆಲಸ ಪ್ರಾರಂಭವಾದರೂ ನಂತರದಲ್ಲಿ ಆಯಾ ಘಟಕಗಳವರು ಕೈಗಾರಿಕಾ ಕೇಂದ್ರಗಳನ್ನು ಮುಚ್ಚಿದರು.