ಈ ಹಿಂದೆ “ಲವ್ 360′ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ಪ್ರವೀಣ್ ಕುಮಾರ್ ಅಭಿನಯದ ಎರಡನೇ ಸಿನಿಮಾ “ದೇಸಾಯಿ’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ತನ್ನ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ “ದೇಸಾಯಿ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.
“ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್’ ಲಾಂಛನದಲ್ಲಿ ಮಹಾಂತೇಶ ವಿ. ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ “ದೇಸಾಯಿ’ ಸಿನಿಮಾದಲ್ಲಿ ನಾಯಕ ಪ್ರವೀಣ್ ಕುಮಾರ್‌ಗೆ ರಾಧ್ಯಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ “ದೇಸಾಯಿ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, “ಸಿನಿಮಾ ನಿರ್ಮಾಣ ನನ್ನ ಕನಸು. ಆ ಕನಸು ನನಸ್ಸಾಗಲು ಚಿತ್ರತಂಡದ ಸಹಕಾರವೇ ಕಾರಣ. ದೇಸಾಯಿ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಹೆಚ್ಚಿನ ಚಿತ್ರೀಕರಣ ಬಾಗಲಕೋಟೆ ಯಲ್ಲಿ ನಡೆದಿದೆ. ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇವೆ’ ಎಂದರು.
“ನನ್ನ ಹಿಂದಿನ “ಲವ್ 360′ ಚಿತ್ರದ ಪಾತ್ರವೇ ಬೇರೆ. ಈ ಚಿತ್ರದ ಪಾತ್ರವೇ ಬೇರೆ. ನಾನು ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ಪ್ರವೀಣ್ ದೇಸಾಯಿ ನನ್ನ ಪಾತ್ರದ ಹೆಸರು. ತುಂಬ ಖಡಕ್ ಲುಕ್ ಇರುವಂಥ ಪಾತ್ರ ಇದಾಗಿದೆ’ ಎಂದು ತಮ್ಮ ಪರಿಚಯ ಮಾಡಿಕೊಟ್ಟರು
ನಾಯಕ ಪ್ರವೀಣ್ ಕುಮಾರ್. ನಾಯಕಿ ರಾಧ್ಯ, ನಟ ಚೆಲುವರಾಜು ಮೊದಲಾದವರು “ದೇಸಾಯಿ’ ಚಿತ್ರದ ಕುರಿತು ಮಾತನಾಡಿದರು. ಉಳಿದಂತೆ ಒರಟ ಪ್ರಶಾಂತ್, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು “ದೇಸಾಯಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.