Advertisement

ತೆಗ್ಗಿನಮಠದಲ್ಲಿ ನಿತ್ಯ ದಾಸೋಹಕ್ಕೆ ಅಧಿಕೃತ ಚಾಲನೆ

03:16 PM Jul 05, 2017 | |

ಹರಪನಹಳ್ಳಿ: ಪಟ್ಟಣದ ತೆಗ್ಗಿನಮಠ ಸಂಸ್ಥಾನದಲ್ಲಿ ಅನೇಕ ವರ್ಷಗಳಿಂದ ನಿಂತು ಹೋಗಿದ್ದ ನಿತ್ಯ ಅನ್ನ ದಾಸೋಹಕ್ಕೆ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರು ಮರುಜೀವ ನೀಡಿದ್ದು, ಭಕ್ತರ ಬಹುದಿನದ ಆಸೆಯದಂತೆ ಆಷಾಢ ಮಾಸದ ಮಂಗಳವಾರ ನಿತ್ಯ ಅನ್ನ ದಾಸೋಹಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

Advertisement

ಸಂಸ್ಥಾನದ ಪೀಠಾಧಿಪತಿ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆಳದಿ ನಾಯಕರು,
ಪಾಳೆಗಾರರ ಪಾಳೆ ಪಟ್ಟಾಗಿದ್ದ ಹರಪನಹಳ್ಳಿ ಪಟ್ಟಣದಲ್ಲಿ ಹಿಂದೆ ನಾಲ್ಕು ಮಠಗಳು ಸ್ಥಾಪನೆಯಾಗಿ ಧಾರ್ಮಿಕ ಚಟುವಟಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದು, ಅವುಗಳಲ್ಲಿ ಶ್ರೀಹಿರೇಮಠ (ತೆಗ್ಗಿನ ಮಠ) ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಕೆಳದಿಯ ಸೋಮಶೇಖರನ ಕಾಲದಲ್ಲಿ ಕೋಟೆಯ ಒಳಗಡೆ ಹಿರೇಮಠ ಸ್ಥಾಪನೆಯಾಗಿತ್ತು. ಕೋಟೆಯು ನಶಿಸಿ ಹೋದ ನಂತರ ಹಿರೇಮಠ ಊರ ಸಮೀಪದ ತೆಗ್ಗಿನ ಜಾಗಕ್ಕೆ ಸ್ಥಳಾಂತರಗೊಂಡಿದೆ. ತಗ್ಗಿನ ಪ್ರದೇಶದಲ್ಲಿ ಮಠ ಸ್ಥಾಪನೆಗೊಂಡಿದ್ದರಿಂದ ಹಿರೇಮಠಕ್ಕೆ ತಗ್ಗಿನಮಠ ಅಥವಾ ತೆಗ್ಗಿನಮಠ ಎಂಬ ಹೆಸರು ಬಂದಿದ್ದು, ಹಿರಿಯ ಶ್ರೀಗಳಾದ ಚಂದ್ರಶೇಖರ ಸ್ವಾಮೀಜಿಗಳ ಕಾಲದಲ್ಲಿ ನಿತ್ಯ ನೂರಾರು ಜನರಿಗೆ ಪ್ರಸಾದದ ವ್ಯವಸ್ಥೆ ನಡೆಯುತ್ತಿದ್ದರಿಂದ ತೆಗ್ಗಿನಮಠಕ್ಕೆ ದಾಸೋಹ ಮಠವೆಂದು ಕರೆಯುತ್ತಿದ್ದರು. ಆದರೆ ಕಾಲಾಂತರ ಆರ್ಥಿಕ ತೊಂದರೆ ಆಗಿ ದಾಸೋಹ ಸ್ಥಗಿತಗೊಂಡಿತ್ತು ಎಂದು ತಿಳಿಸಿದರು.

ನಿತ್ಯ ಅನ್ನ ದಾಸೋಹ ನಡೆಸಲು ನಾಲ್ಕು ಎಕರೆ ಭತ್ತದ ಗದ್ದೆ ಖರೀದಿಸಲಾಗಿದೆ. ಇದಲ್ಲದೇ 19 ಲಕ್ಷ ರೂ. ದೇಣಿಗೆ
ಸಂಗ್ರಹಿಸಿ ಅದರ ಬಡ್ಡಿ ಹಣ ಮತ್ತು ದಾಸೋಹಕ್ಕಾಗಿ ಕಟ್ಟಿಸಿದ ಮಳಿಗೆಗಳಿಂದ ಬರುವ ಹಣದಿಂದ ನಿತ್ಯ ದಾಸೋಹಕ್ಕೆ
ಬಳಕೆ ಮಾಡಿಕೊಳ್ಳಲಾಗುತ್ತದೆ. ಆರಂಭದಲ್ಲಿ ಪಿಯುಸಿ ಮತ್ತು ತಾಂತ್ರಿಕ ಶಿಕ್ಷಣ ಕೋರ್ಸ್‌ ಓದುವ 25 ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಕಾಲೇಜುಗಳಲ್ಲಿ ವ್ಯಾಸಂಗದ ಜೊತೆಗೆ ಆಸಕ್ತಿಯನುಸಾರ ವೇದಗಳ ಅಧ್ಯಯನ ಕಲಿಸಲಾಗುವುದು. ಇವರ ಜೊತೆಗೆ ಮಠದ ನೌಕರರು, ಭಕ್ತಾ ಗಳು ಸಹ ಭೋಜನ
ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ನುಡಿದರು. ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಲಿಂಗೈಕ್ಯ ಚಂದ್ರಮೌಳೀಶ್ವರರ 75ನೇ ಹುಟ್ಟು ಆಚರಣೆ ಸಂದರ್ಭದಲ್ಲಿ 75 ಸಾಮಾಜಿಕ ಸೇವೆ ಕಾರ್ಯಕ್ರಮಗಳನ್ನು ರೂಪಿಸಲು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಲಿಂಗೈಕ್ಯ ಶ್ರೀಗಳ ಆಸೆಯಂತೆ ಇಂದಿನ ವರಸದ್ಯೋಜಾತ ಸ್ವಾಮೀಜಿ ಅವರು ನಿತ್ಯ ದಾಸೋಹ ಆರಂಭಿಸುವ ಮೂಲಕ ಅವರ ಆಸೆಯನ್ನು 
ಈಡೇರಿಸಿದ್ದಾರೆ. ಮಠ ಪುರಾತನ ಕಾಲದಲ್ಲಿ ದಾಸೋಹ ಮಠವೆಂದೆ ಪ್ರಸಿದ್ಧಿ ಪಡೆದಿತ್ತು. ಸ್ಥಗಿತಗೊಂಡಿದ್ದ ನಿತ್ಯ ಅನ್ನ ದಾಸೋಹದ ಕನಸ್ಸಿಗೆ ವರಸದ್ಯೋಜಾತ ಶಿವಾಚಾರ್ಯರು ಜೀವ ತುಂಬಿದ್ದಾರೆ ಎಂದು ಸ್ಮರಿಸಿದರು.
ಮಠದ ನಾಗಯ್ಯ, ಸಿ.ವೀರಣ್ಣ, ಜಯದೇವ ಸೇರಿದಂತೆ ಮಠದ ಸಿಬ್ಬಂದಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next