ಬಾಗಲಕೋಟೆ: ಮಹಾಮಾರಿ ಕೊರೊನಾ ವೈರಸ್ ಜನರನ್ನು ತೀವ್ರ ಭೀತಿಗೆ ಒಳಪಡಿಸಿದ್ದರೆ, ಅಧಿಕಾರಿಗಳು ಈ ವರ್ಷದ ಅನುದಾನ ಬಳಕೆಯ ಚಿಂತೆಯಲ್ಲಿದ್ದಾರೆ.
ಹೌದು, ಕೇಂದ್ರ ಮತ್ತು ರಾಜ್ಯ ಪುರಸ್ಕೃತ ವಿವಿಧ ಯೋಜನೆಗಳಡಿ ಜಿಲ್ಲೆಗೆ ಹಂಚಿಕೆಯಾದ ಅನುದಾನ, ಮಾ. 31ರೊಳಗಾಗಿ ಸಂಪೂರ್ಣ ಬಳಸಬೇಕು. ಇಲ್ಲದಿದ್ದರೆ ಅನುದಾನ ಲ್ಯಾಪ್ಸ್ ಆಗಲಿದ್ದು, ಆ ಸಂಬಂಧ ಅಧಿಕಾರಿಗಳು, ಕ್ರಮಕ್ಕೆ ಗುರಿಯಾಗುತ್ತಾರೆ. ಹೀಗಾಗಿ, ಹೇಗಾದರೂ ಮಾಡಿ, ಪೂರ್ಣ ಅನುದಾನ ಬಳಸಲು ಅಧಿಕಾರಿಗಳು ತಲೆಕೆಡಿಸಿಕೊಂಡು ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದಾರೆ ಎಂಬ ಮಾತು ಜಿಲ್ಲಾಡಳಿತ ಭವನದ ಪಡಸಾಲೆಯಿಂದ ಕೇಳಿ ಬರುತ್ತಿದೆ.
ಟೆಂಡರ್ ಕರೆಯುವ ತಿಂಗಳು: ಪ್ರತಿ ವರ್ಷವೂ ಬಹುತೇಕ ಇಲಾಖೆಗಳ ಅಧಿಕಾರಿಗಳು, ಫೆಬ್ರವರಿವರೆಗೂ ಅನುದಾನ ಬಳಕೆ ಕುರಿತು ಗಂಭೀರತೆತೋರಿಸಲ್ಲ. ಫೆಬ್ರವರಿ ಬಂದ ಕೂಡಲೇ ಟೆಂಡರ್ ಕರೆದು, ಅನುದಾನ ಬಳಕೆಗೆ ಮುಂದಾಗುತ್ತಾರೆ. ಕಳೆದ ಫೆಬ್ರವರಿ ಮೊದಲ ವಾರದಿಂದ ಮಾರ್ಚ್ 2ನೇ ವಾರದವರೆಗೂ ಹಲವು ಇಲಾಖೆಗಳ, ಹಲವು ಟೆಂಡರ್ ಕರೆಯಲಾಗಿತ್ತು. ಈಗ ಟೆಂಡರ್ ಕರೆದು, ಕಾಮಗಾರಿ ಪೂರ್ಣಗೊಳ್ಳುವುದು ಸಾಧ್ಯವೇ ಇಲ್ಲ.ಹೀಗಾಗಿ ಟೆಂಡರ್ ಓಪನ್ ಮಾಡಿ, ಗುತ್ತಿಗೆದಾರರಿಗೆ ಕಾಮಗಾರಿಯ ಆದೇಶ ಪ್ರತಿ ಕೊಡುವ ಜತೆಗೆ ಅನುದಾನದ ಚೆಕ್ ಕೂಡ ಕೊಡಲಾಗುತ್ತದೆ. ಇದು ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಒಂದು ಪರಂಪರೆಯಾಗಿ ರೂಢಿಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಪಂ ಅನುದಾನದ್ದೆ ಚಿಂತೆ: ಜಿಪಂ ವ್ಯಾಪ್ತಿಯ ಸುಮಾರು 28 ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿದ್ದು, ಅದಕ್ಕೆ ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಕೊಡುವುದು ವಿಳಂಬವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಅನುದಾನಕ್ಕೆ ಅನುಮೋದನೆ ಸಿಕ್ಕಿದ್ದು, ಅಧಿಕಾರಿಗಳು ಅನುದಾನ ಬಳಕೆಗೆ ಪ್ರಯಾಸಪಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ರಸ್ತೆಗಳಿಗಾಗಿ ಪ್ರತಿವರ್ಷ ಅನುದಾನ ಬರುತ್ತಿದ್ದು, ರಸ್ತೆಗಳ ಡಾಂಬರೀಕರಣ ಬದಲು, ಪ್ಯಾಚ್‌ವರ್ಕ್ ಮಾತ್ರ ನಡೆಯುತ್ತವೆ ಎಂಬ ಆರೋಪವಿದೆ. ಅಲ್ಲದೇ ಜಿಪಂನ ಎಲ್ಲ ಇಲಾಖೆಗಳ ಅನುದಾನ ಸಂಪೂರ್ಣ ಬಳಕೆಗೆ ಜಿಪಂ ಸಿಇಒ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ಸೂಚನೆ ನೀಡಿದ್ದು, ಈ ತಿಂಗಳ ಅಂತ್ಯಕ್ಕೆ ಅನುದಾನ ಲ್ಯಾಪ್ಸ್ ಆಗದಂತೆ ಓಡಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಲೋಕೋಪಯೋಗಿ ಇಲಾಖೆಯ ಅನುದಾನ ಬಳಕೆಗೆ ನಿರ್ದಿಷ್ಟ ಕ್ರಿಯಾ ಯೋಜನೆ ಬದಲು,ಅಂದಾದುಂದಿಯಾಗಿ ಅನುದಾನ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಲಾಖೆಯ ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಅವುಗಳ ದುರಸ್ತಿ, ಡಾಂಬರೀಕರಣ ಬದಲು, ಅಧಿಕಾರಿಗಳ ಸರ್ಕಾರಿ ನಿವಾಸ, ಹೆಲಿಪ್ಯಾಡ್ ನಿರ್ಮಾಣ, ಪ್ರವಾಸಿ ಮಂದಿರಗಳ ರಸ್ತೆ ಹೀಗೆ ವಿವಿಧ ಕಾರ್ಯಕ್ಕೆ ಬಳಸಲಾಗುತ್ತಿದೆ ಎನ್ನಲಾಗಿದೆ. ಹೆದ್ದಾರಿ, ಜಿಲ್ಲಾ ಮತ್ತು ಗ್ರಾಮೀಣ ರಸ್ತೆಗಳಿಗೆ ಅನುದಾನ ಖರ್ಚು ಮಾಡದೇ, ಅಧಿಕಾರಿಗಳ ನಿವಾಸಗಳಿಗೆ ಅನುದಾನ ಹೆಚ್ಚು ಖರ್ಚು ಮಾಡುತ್ತಿರುವುದು ಚರ್ಚೆಗೂ ಗ್ರಾಸವಾಗಿದೆ. ಅದರಲ್ಲೂ ಜಿಲ್ಲಾಡಳಿತ ಭವನದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ನಿವಾಸಕ್ಕೆ ತೆರಳುವ ರಸ್ತೆಗಳನ್ನು ಸುಂದರಗೊಳಿಸಿದ್ದು, ಜನರಿಗೆ ವಾರ್ಡ್‌ವಾರು ರಸ್ತೆ ಅಭಿವೃದ್ಧಿಪಡಿಸಿ ಎಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲಾಡಳಿತ ಭವನದ ಪಕ್ಕ ಇರುವ ಹೆಲಿಪ್ಯಾಡ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೇ ಅಧಿಕಾರಿಗಳ ನಿವಾಸಕ್ಕೆ ತೆರಳುವ ಎಲ್ಲ ರಸ್ತೆಗಳೂ ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಗೊಂಡಿವೆ. ಆದರೆ, ಸಾರ್ವಜನಿಕರ ಓಡಾಡಕ್ಕಿರುವ ರಸ್ತೆ ದುರಸ್ತಿ ಮಾಡಬೇಕು. ಅಧಿಕಾರಿಗಳು ತಮಗೆ ಬೇಕಾದ ಸೌಲಭ್ಯ ಪಡೆಯುವಂತೆ, ಜನರಿಗೂ ಜವಾಬ್ದಾರಿಯಿಂದ ಮೂಲಸೌಲಭ್ಯ ಕಲ್ಪಿಸಬೇಕು.-
ವೆಂಕಟಾಚಲಪತಿ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಹೋರಾಟ ಸಮಿತಿ
–ಶ್ರೀಶೈಲ ಕೆ. ಬಿರಾದಾರ