ಅಫಜಲಪುರ: ಸರ್ಕಾರಗಳು ಎಷ್ಟೇ ರೈತ ಪರ ನಿಯಮಗಳನ್ನು ರೂಪಿಸಿದರೂ ರೈತರಿಗೆ ಅನ್ಯಾಯವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ರೈತರು ಆರೋಪಿಸಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಹಶೀಲ್ದಾರ ಶಶಿಕಲಾ ಪಾದಗಟ್ಟಿ ನೇತೃತ್ವದಲ್ಲಿ ನಡೆದ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರ ಮತ್ತು ರೈತರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ ಹೂಗಾರ, ಪ್ರಾಂತ ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, 2013-14ನೇ ಸಾಲಿನಲ್ಲಿ ರೆಣುಕಾ ಸಕ್ಕರೆ ಕಾರ್ಖಾನೆಯವರು ರೈತರ ಖಾತೆಗೆ 100 ರೂ. ಹಾಕಬೇಕಿತ್ತು. ಆದರೆ ಇದುವರೆಗೂ ಹಾಕಿಲ್ಲ. ಕೇಳಿದರೆ ಸಕ್ಕರೆ ಬಿಡುಗಡೆಯಾದ ಬಳಿಕ ಹಾಕುತ್ತೇವೆ, ಕೋರ್ಟ್ ನಲ್ಲಿ ಇತ್ಯರ್ಥ ಆಗಬೇಕೆಂದು ವಿನಾ ಕಾರಣ ಕಾಲ ಹರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯವೇ ಹಣ ಹಾಕುವಂತೆ ಸೂಚಿಸಿದರೂ ರೇಣುಕಾ ಸಕ್ಕರೆ ಕಾರ್ಖಾನೆಯವರು ಆದೇಶ ಪಾಲಿಸುತ್ತಿಲ್ಲ. ತಾಲೂಕಿನ ರೈತರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಈಗ ಸಭೆಗೆ ಸಂಬಂಧ ಪಟ್ಟವರು ಬರುವುದು ಬಿಟ್ಟು ಸಹಾಯಕರನ್ನು ಕಳುಹಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ಮಾತನಾಡಿ, ಬೆಳೆ ಹಾನಿ, ಫಸಲ್ ಭೀಮಾ ಯೋಜನೆಯಲ್ಲಿ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರಿಗೆ ಹೇಳಿದರು. ಇದಕ್ಕೆ ಉತ್ತರಿಸಿದ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಫಸಲ್ ಭೀಮಾ ಇನ್ಸೂರೆನ್ಸ್ 2016-17ರಲ್ಲಿ ಜಿಲ್ಲೆಯ ಸೇಡಂ, ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕುಗಳಿಗೆ ಬಂದಿದೆ ಎಂಬ ಮಾಹಿತಿ ಇದೆ. ಆದರೆ ಸರಿಯಾದ ಸ್ಪಷ್ಟತೆ ಇಲ್ಲ. ಈ ಕುರಿತಾಗಿ ಜಿಲ್ಲಾಧಿಕಾರಿಗಳು ಉಳಿದ ತಾಲೂಕುಗಳಿಗೆ ಯಾಕೆ ಬಂದಿಲ್ಲ ಎಂದು ಮಾಹಿತಿ ಕೇಳಿದ್ದಾರೆ ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಲೆ ನಿಗದಿ ಫಲಕ ಅಳವಡಿಸುತ್ತಿಲ್ಲ, ಸರ್ಕಾರದ ಸಬ್ಸಿಡಿ ಏನೆಂದು ರೈತರಿಗೆ ತಿಳಿಯುತ್ತಿಲ್ಲ. ಇದರಿಂದ ಮಧ್ಯವರ್ತಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಭಾರಿ ಮೋಸ ನಡೆದಿದೆ ಎಂದು ರೈತರುಆರೋಪಿಸಿದರು. ಪಶು ಸಂಗೋಪನಾ ಇಲಾಖೆ ಅಧಿಕಾರಿ ಕೆ. ಎಂ ಕೋಟೆ ಮಾತನಾಡಿ, ಸದ್ಯ ಪಶು ಭಾಗ್ಯ ಯೋಜನೆ ಅಡಿಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ. ಅಗಸ್ಟ್ 4 ಕೊನೆ ದಿನವಾಗಿದೆ. ಯೋಜನೆಯಲ್ಲಿ ಎಮ್ಮೆ, ಆಡು, ಕೋಳಿ ಸಾಕಾಣಿಕೆ ಮಾಡಬಹುದು. ಆಸಕ್ತರು ಅರ್ಜಿಗಳನ್ನು ಕಚೇರಿಗೆ ಸಲ್ಲಿಸಬೇಕು. ಪರಿಶಿಷ್ಟ ಜಾತಿ/ಪಂಗಡದವರಿಗೆ 50, ಸಾಮಾನ್ಯ ವರ್ಗದವರಿಗೆ 25 ಪ್ರತಿಶತ ಸಬ್ಸಿಡಿ ಇರುತ್ತದೆ ಎಂದು ಹೇಳಿದರು.
ಪಶು ಇಲಾಖೆಯಲ್ಲಿ ಅರ್ಜಿ ಫಾರಂಗಳಿಗೆ 5ರಿಂದ 10 ರೂ. ಪಡೆಯಲಾಗುತ್ತಿದೆ. ಜಾನುವಾರುಗಳ ಮೇವಿಗಾಗಿ ಸರ್ಕಾರ
ಉಚಿತವಾಗಿ ನೀಡುವ ಮೆಕ್ಕೆಜೋಳ, ಜೋಳದ ಬೀಜಕ್ಕೆ ಒಂದೊಂದು ಬ್ಯಾಗಿಗೆ 50 ರೂ. ಪಡೆಯಲಾಗುತ್ತಿದೆ ಎಂದು ರೈತರಾದ ಭಾಗಪ್ಪ ಮಾಂಗ್, ನಿಂಗಪ್ಪ ಕೊನಳ್ಳಿ ಆರೋಪಿಸಿದರು.
ತಾಲೂಕಿನ ವಿವಿಧ ರೈತ ಸಂಘಗಳ ಮುಖಂಡರು, ರೈತರು ಮತ್ತು ರೇಣುಕಾ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಇದ್ದರು.