ರಾಣಿಬೆನ್ನೂರ: ನಿಗದಿತ ಸಮಯಕ್ಕೆ ಅಧಿಕಾರಿಗಳು ಸಭೆ ಬಾರದಿದ್ದರಿಂದ ಆಕ್ರೋಶಗೊಂಡ ತಾಲೂಕು ಪಂಚಾಯತ್ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ಶುಕ್ರವಾರ ನಡೆಯಿತು.
ಇಲ್ಲಿನ ತಾಪಂ ಸಭಾಭವನದಲ್ಲಿ ಶುಕ್ರವಾರ 10.30ಕ್ಕೆ ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ಕೆಲ ಅಧಿಕಾರಿಗಳ ಗೈರಾಗಿದ್ದರು. ಸಮಯ 12.30 ಆದರೂ ಅಧಿಕಾರಿಗಳು ಆಗಮಿಸಿರಲಿಲ್ಲ. ಆ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಕಾಂಬಳೆ ಅವರು ಸಭೆಗೆ ಎಲ್ಲರನ್ನು ಸ್ವಾಗತಿಸಲು ಮುಂದಾದರು. ಆಡಳಿತ ಪಕ್ಷದವರೇ ಆದ ಕಾಂಗ್ರೆಸ್ ಸದಸ್ಯ ನೀಲಕಂಠಪ್ಪ ಕುಸಗೂರ ಆಕ್ಷೇಪ ವ್ಯಕ್ತಪಡಿಸಿ, ‘ಸದಸ್ಯರಾದ ನಾವು ಪ್ರಾಥಮಿಕ ಶಾಲೆ ಮಕ್ಕಳಲ್ಲ. ಎರಡು ಗಂಟೆಗಳ ಕಾದಿದ್ದೇವೆ. ಈಗಾಗಲೆ ಸಮಯ ಬಹಳ ಆಗಿದೆ. ಸಭೆ ರದ್ದು ಮಾಡಿ, ನಾಳೆಗೆ ಮುಂದೂಡಿ’ ಎಂದಾಗ ಸರ್ವ ಸದಸ್ಯರು ಕುಸುಗೂರ ಅವರಿಗೆ ಬೆಂಬಲಿಸಿ ಸಭೆ ಬಹಿಸ್ಕರಿಸಿ ನಿರ್ಗಮಿಸಿದರು.
‘ಮಹಾ ಮಳೆಯಿಂದ ತಾಲೂಕು ಪ್ರವಾಹ ಪೀಡಿತವಾಗಿದೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳೇ ಸಭೆಗೆ ಗೈರಾದರೆ ನಾವು ಯಾರ ಜೊತೆ ಚರ್ಚೆ ಮಾಡಬೇಕು. ಪರಿಹಾರ ಕಾರ್ಯ ಯಾರಿಂದ ಮಾಡಬೇಕು’ ಎಂದು ಕೂಸಗೂರ ಆಕ್ರೋಶ ವ್ಯಕ್ತಪಡಿಸಿದರು. ಆಗ ಬಿಜೆಪಿ ಸದಸ್ಯ ರಾಮಪ್ಪ ಬೆನ್ನೂರ, ಕರಿಯಪ್ಪ ತೋಟಗೇರ, ಭರಮಪ್ಪ ಊರ್ಮಿ ಮತ್ತು ಕಾಂಗ್ರೆಸ್ ಸದಸ್ಯೆ ಮಂಗಳಾ ಹುಚ್ಚಣ್ಣನವರ ಸೇರಿದಂತೆ ಬಹುತೇಕ ಸದಸ್ಯರು ದನಿಗೂಡಿಸಿ ಹೊರನಡೆದರು. ಅಧ್ಯಕ್ಷೆ ಗೀತಾ ಲಮಾಣಿ, ಸದಸ್ಯರ ಮನ ಒಲಿಸಲು ಮುಂದಾದರಾದರೂ ಫಲ ನೀಡಲಿಲ್ಲ.
ತಾಪಂ ಇಒ ಎಸ್.ಎಂ.ಕಾಂಬಳೆ ಮಾತನಾಡಿ, ‘ತಹಶೀಲ್ದಾರ್ ಕಾರ್ಯಾಲಯದಲ್ಲಿ ಡಿಪಿಎಆರ್ ಕಾರ್ಯದರ್ಶಿಗಳ ವಿಡಿಯೋ ಕಾನ್ಪ್ರೇನ್ಸ್ ಇರುವುದರಿಂದ ಎಂಟು ಇಲಾಖೆ ಅಧಿಕಾರಿಗಳು ಅಲ್ಲಿ ಭಾಗಿಯಾಗಿದ್ದಾರೆ. ಇನ್ನೇನು ಬರುವ ಸಮಯವಾಗಿದೆ ಸಭೆ ನಡೆಸೋಣ’ ಎಂದು ಮನವಿ ಮಾಡಿದರು. ಸದಸ್ಯರು ಇದಕ್ಕೆ ಒಪ್ಪದೇ ಸಭೆಯಿಂದ ನಿರ್ಗಮಿಸಿದರು. ಆನಂತರ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಯಿತು.
ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ತಾಪಂ ಇಒ ಎಸ್.ಎಂ. ಕಾಂಬಳೆ, ವ್ಯವಸ್ಥಾಪಕ ಬಸವರಾಜ ಶಿಡೆನೂರ ಇದ್ದರು.