ಗಂಗಾವತಿ : ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪಂಜಾಬ್ ಎಫ್ಸಿಐ ಗೋಡೌನ್ ಸೇರಿದಂತೆ ಅಕ್ಕಿ ವಿತರಣೆ ಮಾಡುವ ಸ್ಥಳಗಳ ಮೇಲೆ ದಾಳಿ ಮಾಡಿ ಲೆಕ್ಕ ಪರಿಶೋಧನೆ ನಡೆಸಿದ ಪ್ರಕರಣ ಗಂಗಾವತಿ ನಗರದಲ್ಲಿ ಮಂಗಳವಾರ ಜರುಗಿದೆ.
ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುವ ಅನ್ನಭಾಗ್ಯದ ಅಕ್ಕಿ ಚೀಲಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು ಗೋದಾಮುಗಳಿಂದ ನೇರವಾಗಿ ಕೆಲವು ರೈಸ್ ಮಿಲ್ ಗಳಿಗೆ ಪಡಿತರ ಅಕ್ಕಿ ಚೀಲಗಳು ಹೋಗುವ ಕುರಿತು ಖಚಿತ ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ, ತಹಶೀಲ್ಧಾರ್ ಯು ನಾಗರಾಜ, ಪೌರಾಯುಕ್ತ ಅರವಿಂದ ಜಮಖಂಡಿ ಹಾಗೂ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಗೋಡೌನ್ ಗೆ ಭೇಟಿ ನೀಡಿ ರಾಜ್ಯ ವೇರ್ ಹೌಸ್ ನಿಂದ ಸಂಗ್ರಹ ಚೀಲಗಳು ಮತ್ತು ವಿತರಣೆಯಾಗಿದ್ದ ಅಕ್ಕಿ ಚೀಲಗಳು ಪೂರೈಕೆಯಾಗಿದ್ದ ಬಗ್ಗೆ ಸಮಗ್ರ ಲೆಕ್ಕ ಪರಿಶೋಧನೆ ನಡೆಸಿದ್ದಾರೆ. ಗೋಡೋನ್ ನಲ್ಲಿರುವ ಸಂಗ್ರಹ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಆಗಿರುವ ಚೀಲಗಳ ವಿವರ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ :ಈ ಹೆದ್ದಾರಿಯ ಸಂಚಾರವೇ ಒಂದು ಸಾಹಸ : ಇದು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ
ಜಿಲ್ಲಾಮಟ್ಟದಿಂದ ತಾಲೂಕು ಮಟ್ಟದ ಗೋದಾಮಗಳಿಗೆ ಅಕ್ಕಿ ಚೀಲಗಳನ್ನು ಸಾಗಿಸುವ ಕೆಲವು ಲಾರಿಗಳು ನೇರವಾಗಿ ರೈಸ್ ಮಿಲ್ ಗಳಿಗೆ ಮತ್ತು ಅನ್ಯ ರಾಜ್ಯಗಳಿಗೆ ಅಕ್ಕಿ ಚೀಲಗಳನ್ನು ತುಂಬಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ ಎಂಬ ಆರೋಪ ಕೆಲವರು ಮಾಡಿದ್ದರು.
ಸಂಜೆಯ ನಂತರ ಮಾಹಿತಿ : ತಾಲ್ಲೂಕಿಗೆ ವಿತರಣೆಯಾಗಿರುವ ಅಕ್ಕಿಚೀಲಗಳ ಮತ್ತು ಗೋದಾಮುಗಳಿಂದ ಪೂರೈಕೆಯಾಗಿರುವ ಅಕ್ಕಿಚೀಲಗಳ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಮತ್ತು ಖಚಿತ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ ಲೆಕ್ಕಪರಿಶೋಧನೆ ಮಾಡಲಾಗುತ್ತಿದೆ. ಸಂಜೆ ವೇಳೆ ಮಾಹಿತಿ ನೀಡಲಾಗವುದು ಎಂದು ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ಉದಯವಾಣಿಗೆ ತಿಳಿಸಿದ್ದಾರೆ.