ಬೆಂಗಳೂರು: ಮಂಗಳೂರು ಗಲಭೆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳು ಮತ್ತು ಸಿಬಂದಿಯನ್ನು ಎತ್ತಂಗಡಿ ಮಾಡಲು ಸೂಚಿಸಿದ್ದಾರೆ.
ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮ ವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು. ದ.ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತಂದ ಘಟನೆಗಳಿಗೆ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಪೊಲೀಸರು ಕೆಲ ಸಂಘಟನೆಗಳ ಜತೆ ಕೈಜೋಡಿಸಿರುವುದೇ ಕಾರಣ ಎಂಬ ದೂರುಗಳು ಬಂದಿವೆ. ಹೀಗಾಗಿ, ಇಂಥ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿಯನ್ನು ವರ್ಗಾವಣೆ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ದ.ಕ. ಜಿಲ್ಲೆಯ ಯಾವ್ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಷ್ಟೆಷ್ಟು ಸಿಬಂದಿ 2-3 ವರ್ಷಗಳಿಗಿಂತ ಹೆಚ್ಚಾಗಿ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ? ಹತ್ತು ವರ್ಷಗಳವರೆಗೂ ಬಹುಕಾಲ ಕೆಲಸ ಮಾಡುತ್ತಿರುವವರ ಸಂಖ್ಯೆ ಎಷ್ಟು ಎಂಬುದರ ಮಾಹಿತಿ ಸಂಗ್ರಹಿಸಿ ವರ್ಗಾವಣೆ ಮಾಡಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಅವರಿಗೆ ಸೂಚಿಸಿದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಐಪಿಎಸ್ ಸಹಿತ ಎಲ್ಲ ವರ್ಗಗಳ ಪೊಲೀಸ್ ಆಧಿಕಾರಿಗಳು ಒಂದು ಸ್ಥಳದಲ್ಲಿ 2 ವರ್ಷ ಮಾತ್ರ ಕೆಲಸ ಮಾಡಬೇಕು ಎಂಬ ನಿಯಮ ರೂಪಿಸಲಾಗಿದೆ. ಪೊಲೀಸ್ ಪೇದೆಗಳನ್ನು ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ವರ್ಗಾವಣೆ ಮಾಡಲಾಗುವುದು. ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಹೊಸ ವರ್ಗಾವಣೆ ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದರು ಎಂದು ತಿಳಿದು ಬಂದಿದೆ.
ಅಧಿಕಾರಿಗಳಿಗೆ ತರಾಟೆ: ಗಲಭೆ ವಿಚಾರದಲ್ಲಿ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಅವರಿಗೆ ಸರಣಿ ಪ್ರಶ್ನೆಗಳನ್ನೇ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೆ ಇರುವ ಕಾರಣಗಳೇನು? ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಲು ಅವಕಾಶ ಕೊಡಲು ಕಾರಣವೇನು? ಶರತ್ ಮಡಿವಾಳ ಮೃತಪಟ್ಟಾಗ ಆಸ್ಪತ್ರೆ ಮುಂದೆ ಪ್ರತಿಭಟನೆ ಹೇಗೆ ನಡೆಯಿತು ಎಂದು ಆ ಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.
ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಬೇರೆ ಜಿಲ್ಲೆಗಳಂತೆ ಇಲ್ಲ. ಇಲ್ಲಿಗೆ ಕೇರಳ ಸೇರಿದಂತೆ ಇತರೆಡೆಗಳಿಂದ ಜನ ಬರುತ್ತಾರೆ. ಕೆಲವು ಕಾಣದ ಕೈಗಳು ಪ್ರಚೋದನೆ ನೀಡುತ್ತಿವೆ. ಜತೆಗೆ ಮಂಗಳೂರಿನಲ್ಲಿ ಆಗುತ್ತಿರುವುದೇ ಬೇರೆ, ಮಾಧ್ಯಮಗಳಲ್ಲಿ ಬರುತ್ತಿರುವುದೇ ಬೇರೆ. ಯಾರನ್ನೇ ಬಂಧಿಸಿದರೂ ಜನಪ್ರತಿನಿಧಿಗಳು ಬಂದು ಒತ್ತಡ ಹಾಕುತ್ತಾರೆ ಎಂದು ಅಲವತ್ತುಕೊಂಡರು ಎನ್ನಲಾಗಿದೆ.
ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಸ್‌ಚಂದ್ರ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಹಿರಿಯ ಅಧಿಕಾರಿಗಳಾದ ಅಲೋಕ್ ಮೋಹನ್, ಕಮಲ್ ಪಂತ್, ಎಂ. ಎನ್.ರೆಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಉಪಸ್ಥಿತರಿದ್ದರು.
ಗೂಂಡಾ ಕಾಯ್ದೆ ಪ್ರಯೋಗಿಸಿ
ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಮತೀಯ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಂಡು ಗೂಂಡಾ ಕಾಯ್ದೆಯ ಅನ್ವಯ ಬಂಧಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳಿಂದ ಸರಕಾರಕ್ಕೆ ನೋವುಂಟಾಗಿದೆ ಎಂದರು. ಈ ಕೃತ್ಯಗಳಲ್ಲಿ ಕೆಲ ಮತೀಯ ಸಂಘಟನೆಗಳ ಕೈವಾಡವಿದೆ ಎಂದು ತಿಳಿಸಿದರು. ಸಾಮರಸ್ಯ ಕದಡುವ ಪಿಎಫ್ಐ, ಎಸ್‌ಡಿಪಿಐ, ಶ್ರೀರಾಮ ಸೇನೆ, ಬಜರಂಗ ದಳ, ಆರ್‌ಎಸ್‌ಎಸ್ ಸಹಿತ ಯಾವುದೇ ಸಂಘಟನೆಯ ಕಾರ್ಯಕರ್ತರಾಗಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದರೆ ಕಠಿನ ಕ್ರಮ ಜರಗಿಸಲಾಗುವುದು ಎಂದರು.