ಕೊಪ್ಪಳ: ಕನಕಗಿರಿ ತಾಲೂಕಿನ ನವಲಿ ಬಳಿ ಮರಳು ದಿನ್ನೆ ಕುಸಿದು ಮೂವರು ಮಕ್ಕಳು ಮೃತಪಟ್ಟ ಘಟನೆ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿದೆ. ಆದರೆ ಜಿಲ್ಲಾಡಳಿತ ಪ್ರಕರಣ ಸಂಬಂಧ ನಾಲ್ವರ ಮೇಲೆ ಕೇಸ್ ಮಾಡಿದೆ. ಜಿಲ್ಲಾ, ತಾಲೂಕು ಹಂತದ ಅಧಿಕಾರಿಗಳು ಇದರಲ್ಲಿ ಸೇಫ್ ಆಗಿದಂತೆ ಕಾಣುತ್ತಿದೆ. ಅವರ ಮೇಲೆ ಶಿಸ್ತು ಕ್ರಮದ ವಿಷಯ ಪ್ರಸ್ತಾಪವಾಗಿದೆ.
ಹೌದು. ತುತ್ತಿನಚೀಲ ತುಂಬಿಸಿಕೊಳ್ಳಲು ಮಹಾರಾಷ್ಟ್ರದಿಂದ ಜಿಲ್ಲೆಯ ನವಲಿಗೆ ಆಗಮಿಸಿ ಇದ್ದಲು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದ ಕುಟುಂಬಗಳ ಮೂರು ಮಕ್ಕಳು ಅಕ್ರಮ ಮರಳು ದಂಧೆಯಿಂದಾಗಿ ಮೃತಪಟ್ಟಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ ಮಾಲೀಕ ಗುರು ಶಾಂತಯ್ಯ, ಭೂಮಿ ಒಪ್ಪಿಗೆ ಪಡೆದು ಗಣಿಗಾರಿಕೆ ಮಾಡಿದ ಅಮರೇಶ ಕರಡಿ, ಶಿವರಾಜ, ತಾಯವ್ವ ನಾರಿನಾಳ ಅವರ ಮೇಲೆ ಕೇಸ್ ದಾಖಲಿಸಲಾಗಿದೆ. ಇನ್ನೂ ಇದ್ದಲು ತೆಗೆಯಲು ಕುಟುಂಬವನ್ನು ಕರೆ ತಂದ ಮೇಸ್ತ್ರಿ ಅವಿನಾಶ ರಾಠೊಡ್ ಮೇಲೆ ಕಾರ್ಮಿಕ ಇಲಾಖೆ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದೆ.
ನವಲಿ ಭಾಗದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ತಾಲೂಕು ಹಂತದಿಂದ ಜಿಲ್ಲಾ ಹಂತದವರೆಗೂ ನೂರಾರು ದೂರು ಸಲ್ಲಿಕೆಯಾಗಿವೆ. ಆದರೆ ಈ ಬಗ್ಗೆ ಯಾರ ಮೇಲೂ ಕ್ರಮವಾಗಿಲ್ಲ. ಘಟನೆ ಬಳಿಕ ನಾಲ್ವರ ಮೇಲೆ ಪ್ರಕರಣ ದಾಖಲಾಗಿವೆ. ಅಕ್ರಮ ಮರಳುಗಾರಿಕೆಯಿಂದ ದೊಡ್ಡ ದೊಡ್ಡ ಕಂದಕಗಳೇ ಸೃಷ್ಟಿಯಾಗಿವೆ. ಈ ಕುರಿತು ತಹಶೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗೆ ಮಾಹಿತಿ ಇರಲಿಲ್ಲವೇ? ಕನಕಗಿರಿ ಪೊಲೀಸ್ ಠಾಣೆಗೆ ಈ ವಿಷಯ ಗೊತ್ತಿರಲಿಲ್ಲವೇ? ಇವರ ಮೇಲೆ ಪ್ರಾಥಮಿಕ ವರದಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಮಾತ್ರ ಪ್ರಸ್ತಾಪ ಮಾಡಲಾಗಿದೆ. ಇವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಕಾಣುತ್ತಿಲ್ಲವೇ ಎನ್ನುವ ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿವೆ.
ಸರ್ಕಾರವು ಜಿಲ್ಲಾ ಟಾಸ್ಕ್ಫೋರ್ಸ್ (ಮರಳು) ಕಮಿಟಿ ರಚನೆ ಮಾಡಿ, ತಹಶೀಲ್ದಾರ್, ತಾಪಂ ಇಒ, ಗ್ರಾಪಂ ಪಿಡಿಒ ಸೇರಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಯೂ ಮರಳು ದಂಧೆ ಮೇಲೆ ದಾಳಿ ಮಾಡಲು ಸಂಪೂರ್ಣ ಅಧಿಕಾರ ನೀಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜೊತೆಗೆ ಇವರೂ ದಾಳಿ ಮಾಡಿ ಪ್ರಕರಣ ದಾಖಲಿಸಲು ಅಧಿಕಾರವಿದೆ. ಆದರೆ ಇವರಿಗೆ ಇಲ್ಲಿನ ದಂಧೆಯ ಪರಿಜ್ಞಾನ ಇಲ್ಲವೇ? ಕಂದಕದಂತೆ ಗುಂಡಿ ತೋಡಿದ್ದರೂ ಇದು ಅವರ ಗಮನಕ್ಕೆ ಬಂದಿಲ್ಲವೇ? ಗೊತ್ತಿದ್ದೂ ಜಾಣ ಕುರುಡುತನ ಪ್ರದರ್ಶಿಸಿದ್ದಾರೋ? ಎಂದು ಜನತೆ ಪ್ರಶ್ನೆ ಜನರಲ್ಲಿ ಮೂಡುತ್ತಿವೆ.
ಅಧಿಕಾರಿಗಳು ಜಾಗೃತಿ ವಹಿಸಿದ್ದರೆ ಈ ದುರ್ಘಟನೆ ತಡೆಯಬಹುದಿತ್ತು. ಅವರ ನಿರ್ಲಕ್ಷ್ಯತನ ಎದ್ದು ಕಾಣುತ್ತಿದ್ದರೂ ಜಿಲ್ಲಾ ಹಂತದಿಂದ ಗ್ರಾಮ ಹಂತದ ಯಾವುದೇ ಅಧಿಕಾರಿಗೆ ಶಿಕ್ಷೆಯ ಮಾತಿಲ್ಲ, ಪ್ರಕರಣ ದಾಖಲಾಗಿಲ್ಲ. ಅವರ ಮೇಲೆ ದೂರುಗಳ ವಿಚಾರಣೆಯ ಹಂತದಲ್ಲಿವೆ ಎನ್ನುವ ಸಮಜಾಯಿಷಿ ಉತ್ತರ ಜಿಲ್ಲಾಧಿಕಾರಿ ಅವರ ಪ್ರಾಥಮಿಕ ವರದಿಯಲ್ಲಿ ಉಲ್ಲೇಖ ಮಾಡಿದ್ದು ನಿಜಕ್ಕೂ ಇದು ವಿಪರ್ಯಾಸದ ಸಂಗತಿ.
•ದತ್ತು ಕಮ್ಮಾರ