ಉಪ್ಪಿನಬೆಟಗೇರಿ: ಪ್ರಮುಖ ಇಲಾಖೆಗಳ ಬಹುತೇಕ ಅಧಿ ಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಗ್ರಾಮಸಭೆಗೆ ಗೈರಾಗಿದ್ದರಿಂದ ಹಾಗೂ ಗ್ರಾಪಂ ಸದಸ್ಯರ ನಿರಾಸಕ್ತಿಯಿಂದ ಕೋರಂ ಅಭಾವದಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಸಭೆ ನಡೆಸದೆ ಮುಂದೂಡಿದ ಘಟನೆ ಜರುಗಿದೆ.
ಗ್ರಾಮದ ಶ್ರೀ 1008 ಪಾರ್ಶ್ವನಾಥ ಸಮುದಾಯ ಭವನದಲ್ಲಿ ಶುಕ್ರವಾರ ಜರುಗಬೇಕಾಗಿದ್ದ 2018-19ನೇ ಸಾಲಿನ 1ನೇ ಸುತ್ತಿನ ಗ್ರಾಮಸಭೆಗೆ ಕೇವಲ ಬೆರಳೆಣಿಕೆ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಮಾತ್ರ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಸಭೆ ಮಧ್ಯಾಹ್ನ 12:30 ಗಂಟೆಗೆ ಪ್ರಾರಂಭವಾಯಿತು. ಗ್ರಾಪಂ ಅಧ್ಯಕ್ಷರ ಅನಾರೋಗ್ಯದ ನಿಮಿತ್ತಗೈರಾಗಿದ್ದರೂ ಉಪಾಧ್ಯಕ್ಷರು ಅವರ ಪರವಾಗಿ ಅಧ್ಯಕ್ಷತೆ ವಹಿಸಬೇಕಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಅವರೂ ಸಭೆಗೆ ಗೈರಾಗಿದ್ದರಿಂದ ತಾಪಂ ಸದಸ್ಯೆ ಶಾಂತವ್ವ ಸಂಕಣ್ಣವರ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಪಂಚಾಯತರಾಜ್ ಇಲಾಖೆ ಅಧಿಕಾರಿ ಬಿ.ಕೆ. ಓಲೇಕಾರ ಅವರ ಸೂಚನೆಯ ಮೇರೆಗೆ 2 ತಾಸು ತಡವಾಗಿ ಗ್ರಾಮಸಭೆ ಪ್ರಾರಂಭವಾಯಿತು.
ಆದರೆ ಸಭೆ ಪ್ರಾರಂಭವಾಗುವ ಮುಂಚೆಯೇ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರಾದ ಬಸವರಾಜ ಮಸೂತಿ, ಮಹೇಶ ಬೆಳವಂಕಿ ಹಾಗೂ ಕೃಷ್ಣಾ ಬುದ್ನಿ ಈ ಗ್ರಾಮಸಭೆಯನ್ನು ಯಾರ ಉಪಯೋಗಕ್ಕಾಗಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಪ್ರತಿ ಗ್ರಾಮಸಭೆಗೆ ಕೆಲವು ಅಧಿಕಾರಿಗಳು ಮತ್ತು ಜನಪರ ಕೆಲಸ ಮಾಡುವ ಜನಪ್ರತಿನಿಧಿಗಳು ಗೈರಾಗುತ್ತಲೇ ಬಂದಿದ್ದಾರೆ. ಕಾಟಾಚಾರಕ್ಕೆ ಸಭೆ ನಡೆದರೆ ಮುಂದೆ ಗ್ರಾಮದ ಸ್ಥಿತಿ ಗತಿ ಏನು? ಗ್ರಾಪಂ ಸದಸ್ಯರಿಗೆ ಗ್ರಾಮಸ್ಥರ ಬಗ್ಗೆ ಕಾಳಜಿಯೇ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಒಟ್ಟು 28 ವಿವಿಧ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆಹಾರ ಇಲಾಖೆ ಅ ಧಿಕಾರಿ ಸೇರಿದಂತೆ ಒಟ್ಟು 16 ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಸಭೆಗೆ ಗೈರಾಗಿದ್ದಾರೆ. 27 ಗ್ರಾಪಂ ಸದಸ್ಯರ ಪೈಕಿ ಕೇವಲ 11 ಜನ ಗ್ರಾಪಂ ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದು ಸಭೆ ನಡೆಸಲು ಕೋರಂ ಕೊರತೆ ಇದೆ. ಹೀಗಿದ್ದರೂ ನೀವು ಸಭೆ ಹೇಗೆ ಪ್ರಾರಂಭಿಸುತ್ತೀರಿ? ಸಭೆ ನಡೆಸಲು ನಮ್ಮ ಆಕ್ಷೇಪವಿದೆ. ಸಭೆ ಮುಂದೂಡಿ ಎಂದು ಪಿಡಿಒ ಬಿ.ಎ. ಬಾವಾಖಾನವರ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮುಂದೂಡಿದ ಮುಂದಿನ ಗ್ರಾಮಸಭೆಗೆ ಕಡ್ಡಾಯವಾಗಿ ಎಲ್ಲ ಇಲಾಖೆ ಅ ಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಪಿಡಿಒಗೆ ತಾಕೀತು ಮಾಡಿ ಮನೆಯತ್ತ ಹೆಜ್ಜೆ ಹಾಕಿದರು.