Advertisement
ಮಂಗಳವಾರ ತಡರಾತ್ರಿಯಲ್ಲಿ ಆಗಮಿಸಿದ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಬೆಳಗಿನ ಜಾವ ಕೋಳಿ ಕೂಗುವ ಮುನ್ನವೇ ತಾಲೂಕಿನ ಕೋಡಿ ನರಸೀಪುರ-ಚಾಮರಾಜನಗರ ಮುಖ್ಯ ರಸ್ತೆಯ ರೈಲ್ವೆ ಗೆೇಟ್ ಬಳಿ ರಸ್ತೆಯ ಕಲ್ಲುಗಳನ್ನು ಕಿತ್ತು ಹಾಕಲಾರಂಭಿಸಿದರು
Related Articles
Advertisement
ರೈಲ್ವೆ ವ್ಯತ್ಯಯ: ರಸ್ತೆಯನ್ನು ಅರ್ಧಂಬರ್ಧ ಕಿತ್ತಿದ್ದರಿಂದ ತಕ್ಷಣ ರೈಲ್ವೆ ಹಳಿಯನ್ನು ಸಮತಟ್ಟು ಮಾಡಲಾಗಲಿಲ್ಲ. ಹೀಗಾಗಿ ಬುಧವಾರ ಬೆಳಗಿನ ಮೈಸೂರು-ಚಾಮರಾಜನಗರ ಮಾರ್ಗದ ರೈಲ್ವೆ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು.
ಬಂಡತನ: ಕೋಡಿನರಸೀಪುರ ಮುಖ್ಯರಸ್ತೆಯ ಎಲ್.ಸಿ.24 ಗೇಟ್‌ಗೆ ಬದಲಿಯಾಗಿ ಎಲ್.ಸಿ. 25 ರಲ್ಲಿ ನಿರ್ಮಿಸಿದ ಮೇಲ್ಸೇತುವೆ ಸಂಚಾರ ಅತ್ಯಂತ ಅಪಾಯಕಾರಿ ಎಂಬುದನ್ನು ಮನಗಂಡ ನಂಜನಗೂಡು ತಹಸೀಲ್ದಾರ್, ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ರಸ್ತೆ ಮುಚ್ಚದಂತೆ ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಅಲ್ಲದೇ ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕ ಬಿ.ಹರ್ಷವರ್ಧನ್ ಕೂಡ ರಸ್ತೆ ಬಂದ್ ಮಾಡದಂತೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರಿಗೆ ಸೂಚಿಸಿದ್ದರು. ಆದರೂ ಇವುಗಳನ್ನು ಲೆಕ್ಕಿಸಿದ ರೈಲ್ವೆ ಅಧಿಕಾರಿಗಳು ಮಂಗಳವಾರ ತಡರಾತ್ರಿ ಗೇಟ್ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದು, ಬಂಡತನ ಪ್ರದರ್ಶಿಸುವಂತಿತ್ತು.
ಪೊಲೀಸರ ಪ್ರವೇಶ: ರಾತ್ರಿ ರಸ್ತೆ ಮುಚ್ಚುವ ಬಂದಿದ್ದ ಸುದ್ದಿ ತಿಳಿದ ಮಹಿಳೆಯರು, ವೃದ್ಧರು, ಮಕ್ಕಳ ಆದಿಯಾಗಿ ಗ್ರಾಮಸ್ಥರೆಲ್ಲ ಒಗ್ಗೂಡಿ ಸ್ಥಳಕ್ಕೆ ಬಂದು ರಸ್ತೆ ಮುಚ್ಚದಂತೆ ಪ್ರತಿಭಟಿಸಲು ಆರಂಭಿಸಿದರೂ ಇದಕ್ಕೆ ಜಗ್ಗದ ಸಿಬ್ಬಂದಿ ತಮ್ಮ ಕಾರ್ಯಾಚರಣೆ ಮುಂದುವರಿಸಿದಾಗ ನಂಜನಗೂಡು ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು.
ಸ್ಥಳಕ್ಕೆ ಆಗಮಿಸಿದ ಪೋಲೀಸರು ರಸ್ತೆ ಮುಚ್ಚುವ ಕಾರ್ಯವನ್ನು ಸ್ಥಗಿತಗೊಳಿಸಿ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವರೆಗೂ ಕಾರ್ಯಾಚರಣೆ ನಡೆಸದಂತೆ ತಡೆ ಹಿಡಿದರು. ಇದರಿಂದಾಗಿ ಬುಧವಾರ ಬೆಳಗ್ಗೆ 5:45ಕ್ಕೆ ಚಾಮರಾಜನಗಕ್ಕೆ ತೆರಳಬೇಕಾಗಿದ್ದ ರೈಲು ನಂಜನಗೂಡು ರೈಲ್ವೆ ನಿಲ್ದಾಣದಲ್ಲೇ ಉಳಿಯುವಂತಾಯಿತು.
ಪರ್ಯಾಯ ಮಾರ್ಗಕ್ಕೆ ಪಟ್ಟು: ನಂಜನಗೂಡು ಪೊಲೀಸರಿಂದ ರಾತ್ರಿ ಕಾರ್ಯಾಚರಣೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ರೈಲ್ವೆ ಹಿರಿಯ ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನಿಸಿದಾಗ, ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಹಾಲಿ ಇರುವ ರಸ್ತೆ ಹೊರತಾಗಿ ಯಾವುದೇ ಮಾರ್ಗವೂ ಕೋಡಿನರಸೀಪುರ ಗ್ರಾಮಕ್ಕೆ ಅನುಕೂಲವಾಗಿಲ್ಲ.
ಈಗಿರುವ ರಸ್ತೆಯನ್ನೇ ಯಥಾಸ್ಥಿತಿ ಉಳಿಸಬೇಕು. ಇಲ್ಲವೇ ಇಲ್ಲೇ ಮೇಲ್ಸೇತುವೆ ನಿರ್ಮಿಸಿ ಅಲ್ಲಿಯವರಿಗೂ ರಸ್ತೆ ಮುಚ್ಚುವ ಪ್ರಯತ್ನ ಕೈಬಿಡಿ ಎಂದು ಪಟ್ಟು ಹಿಡಿದರು. ಅಲ್ಲದೇ ಇದೇ ವೇಳೆ ರಸ್ತೆ ಮುಚ್ಚದಂತೆ ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನೀಡಿರುವ ಆದೇಶ ಪ್ರತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರು. ನೀವು ಬಲಾತ್ಕಾರವಾಗಿ ರಸ್ತೆ ಮುಚ್ಚಿದಲ್ಲಿ ತಾವೆಲ್ಲ ಗ್ರಾಮ ತೊರೆದು ಪ್ರತಿಭಟಿಸಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಆರ್‌ಪಿಎಫ್ ಕಮೀಷನರ್ ಕಬೂರ್, ಈಗ ರೈಲುಗಳ ಸಂಚಾರ ಹಾಗೂ ಗ್ರಾಮಸ್ಥರ ಅನುಕೂಲವಾಗುವ ನಿಟ್ಟಿನಲ್ಲಿ ಯಥಾಸ್ಥಿತಿ ಕಾಪಾಡಲಾಗುವುದು. ರಸ್ತೆ ಸಮಸ್ಯೆ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಸ್ಥರ ಬೇಡಿಕೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಎಲ್ಲರೂ ಒಗ್ಗೂಡಿ ಕಿತ್ತು ಹಾಕಿದ ಕಲ್ಲುಗಳನ್ನು ಪುನಃ ಜೋಡಿಸಿ ರೈಲ್ವೆ ಹಳಿ ಸಮತಟ್ಟು ಮಾಡಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು
ರಸ್ತೆ ಕಿತ್ತಿದ್ದರಿಂದ ರೈಲು ಸಂಚಾರ ವ್ಯತ್ಯಯ: ಕೋಡಿನರಸೀಪುರ ಬಳಿ ರೈಲ್ವೆ ಗೇಟ್ ರಸ್ತೆಯನ್ನು ರೈಲ್ವೆ ಅಧಿಕಾರಿಗಳು ಅರ್ಧಭಾಗ ಕಿತ್ತು ಹಾಕಿದ್ದರಿಂದ ತಕ್ಷಣ ರೈಲ್ವೆ ಹಳಿಯನ್ನು ಸಮತಟ್ಟು ಮಾಡಲಾಗಲಿಲ್ಲ. ಹೀಗಾಗಿ ಬುಧವಾರ ಬೆಳಗ್ಗೆ ಮೈಸೂರು-ಚಾಮರಾಜನಗರ ಮಾರ್ಗದ ರೈಲ್ವೆ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಬುಧವಾರ ಬೆಳಗ್ಗೆ 5:45ಕ್ಕೆ ಚಾಮರಾಜನಗಕ್ಕೆ ತೆರಳಬೇಕಾಗಿದ್ದ ರೈಲು ನಂಜನಗೂಡು ರೈಲ್ವೆ ನಿಲ್ದಾಣದಲ್ಲೇ ಉಳಿಯಬೇಕಾಯಿತು.