Advertisement

ಅಧಿಕಾರಿಗಳಿಗೆ ಗ್ರಾಮ ಭೇಟಿ ಕಡ್ಡಾಯ

09:24 PM Oct 19, 2019 | Team Udayavani |

ದೇವನಹಳ್ಳಿ: ಅಧಿಕಾರಿಗಳು ಇನ್ನೂ ಮುಂದೆ 15 ದಿನಕ್ಕೊಮ್ಮೆ ಗ್ರಾಮ ಮಟ್ಟಕ್ಕೆ ಕಡ್ಡಾಯವಾಗಿ ತರಳಿ ಜನರ ಸಮಸ್ಯೆ ಆಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಅಧಿಕಾರಿಗಳಿ ಸೂಚನೆ ನೀಡಿದರು. ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕಡ್ಡಾಯ ಭೇಟಿ: ಜಿಲ್ಲಾಧಿಕಾರಿ ಪ್ರತಿ 15 ದಿನಕ್ಕೂಮ್ಮೆ ಜಿಲ್ಲೆಯ 1 ಗ್ರಾಮ, ಉಪವಿಭಾಗಾಧಿಕಾರಿ ತಾಲೂಕಿನ 1ಗ್ರಾಮ, ತಹಶೀಲ್ದಾರ್‌ ಹೋಬಳಿಯ 1 ಗ್ರಾಮ, ಜಿಪಂ ಸಿಇಒ 1 ಹಳ್ಳಿ ಹಾಗೂ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆ ಆಲಿಸಿ ಪರಿಹರಿಸಬೇಕೆಂದರು. ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು, ಸರ್ಕಾರದ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಆಗಬೇಕು. ಇಲಾಖೆಯಲ್ಲಿ ಕುಳಿತರೆ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ. ಭೇಟಿ ನೀಡಿದ ಸಂದರ್ಭದಲ್ಲಿ ಛಾಯಾ ಚಿತ್ರ ತೆಗೆದು ಆನ್‌ಲೈನ್‌ ಮೂಲಕ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ತಿಳಿಸಿದರು.

75 ಸಾವಿರ ಕೋಟಿ ರೂ. ಖರ್ಚು: ಈಗಾಗಲೇ ಎಲ್ಲಡೆ ಆವರಿಸಿರುವ ಡೆಂಗ್ಯೂ ಜ್ವರ ನಿಯಂತ್ರಿಸುವ ಬಗ್ಗೆ ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಬಡವರು 30-40ಸಾವಿರ ಖರ್ಚು ಮಾಡಲು ಆಗುವುದಿಲ್ಲ. ಜನರಿಗೆ ಇದರಿಂದ ಹೆಚ್ಚಿನ ತೊಂದರೆಯಾಗುತ್ತಿದೆ ಎಂದು ಹೇಳಿದರು. ಸರ್ಕಾರದ ವಿವಿಧ ವೇತ ಹಾಗೂ ಪಡಿತರ ಚೀಟಿಗೆ 75 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಇದರಲ್ಲಿ ಒಂದುವರೆ ಸಾವಿರ ಕೋಟಿ ರೂ. ದುರುಪಯೋಗವಾಗುತ್ತಿದೆ. ಇವುಗಳಿಗೆ ಆಧಾರ್‌ ಲಿಂಕ್‌ ಮಾಡಿದರೆ ಸಾವಿರಾರು ಕೋಟಿ ರೂ. ಉಳಿತಾಯ ಮಾಡಬಹುದು.

ನೀಲಗಿರಿ ಮರ ತೆರವುಗೊಳಿಸಿ: ಅರಣ್ಯ ಇಲಾಖೆಯವರು ಜಿಲ್ಲೆಯ ವ್ಯಾಪ್ತಿಯಲ್ಲಿ ನೀಲಗಿರಿ ಮರಗಳನ್ನು ಏಕೆ ಹಾಕಿದ್ದಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದ್ದು, ಅದಕ್ಕೆ ಅವರೇ ಉತ್ತರ ನೀಡಬೇಕಾಗಿದೆ. ಈ ಕೂಡಲೇ ಸರ್ಕಾರಿ ಜಾಗಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು. ನಂತರ ಖಾಸಗಿ ಜಮೀನಿನಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಪರ್ಯಾಯವಾಗಿ ಹೆಬ್ಬೇವು ಹಾಗೂ ಇತರೆ ಸಸಿಗಳನ್ನು ನೆಡಬೇಕು. ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಸಂಸದ ಬಿ.ಎನ್‌.ಬಚ್ಚೇಗೌಡ ಮಾತನಾಡಿ, 1200 ರಿಂದ 1500 ಅಡಿಗಳಿಗೆ ಬೋರ್‌ವೆಲ್‌ ಕೊರೆಸಿದರೂ ಸಹ ನೀರು ಸಿಗದ ಸ್ಥಿತಿ ಇದೆ. ನೀರಿನ ಬಗ್ಗೆ ಜನರಲ್ಲಿ ಹಾಗೂ ರೈತರಲ್ಲಿ ಜಾಗೃತಿ ಮೂಡಬೇಕು. ರೇಷ್ಮೆ ಬೆಳೆಗಾರರ ಕಷ್ಟಗಳನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು. ನೀಲಗಿರಿ ಮರ ಕಟಾವಿನ ಕಾನೂನು ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

Advertisement

ಶಾಸಕ ವೆಂಕಟರಮಣಯ್ಯ ಮಾತನಾಡಿ, ಕೂಡಲೇ ಸರ್ಕಾರಿ ಜಾಗಗಳಲ್ಲಿರುವ ನೀಲಗಿರಿ ಮರಗಳ ಕಟಾವು ಮಾಡಬೇಕು. ಸರ್ಕಾರಿ ಜಾಗದ ನೀಲಗಿರಿ ಮರಗಳನ್ನು ತೆರವುಗೊಳಿಸಿದರೆ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನೀಲಗಿರಿ ಮರ ತೆಗೆಯಲು ಮುಂದಾಗುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಇದೆ ಎಂದು ಹೇಳಿದರು.

ಈ ವೇಳೆ ಶಾಸಕ ಶ್ರೀನಿವಾಸ್‌ ಮೂರ್ತಿ, ವಿಧಾನ ಪರಿಷತ್‌ ಸದಸ್ಯ ಅ.ದೇವೆಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಮಲತಾ, ಜಿಪಂ ಸಿಇಒ ನಾಗರಾಜ್‌, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಸಮಾಜಿಕ ನ್ಯಾಯಸಮಿತಿ ಅಧ್ಯಕ್ಷೆ ರಾಧಮ್ಮ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಣ್ಣಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚುಂಚನಗೌಡ, ಅಪರ ಜಿಲ್ಲಾಧಿಕಾರಿ ಜಗದೀಶ್‌ ಕೆ.ನಾಯಕ್‌, ಎಸ್ಪಿ ರವಿ.ಡಿ.ಚನ್ನಣ್ಣನವರ್‌, ಉಪಕಾರ್ಯದರ್ಶಿ ಕರಿಯಪ್ಪ, ಮುಖ್ಯ ಲೆಕ್ಕಾಧಿಕಾರಿ ಶೋಭಾ, ಯೋಜನಾಧಿಕಾರಿ ವಿನುತಾರಾಣಿ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಳೆದ ವರ್ಷ ಜಿಲ್ಲೆಯನ್ನು ಬರ ಪೀಡಿತ ಎಂದು ಗೋಸಲಾಗಿತ್ತು. ಪ್ರಸ್ತುತ 680 ಮಿ.ಮಿ ಬೀಳಬೇಕಿದ್ದ ಮಳೆ 741ಮಿ.ಮೀ. ಬಿದ್ದಿದೆ. ಕುಡಿಯುವ ನೀರಿನ ಸಮಸ್ಯೆ ಇರುವ 84 ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
-ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next