ಹೊನ್ನಾಳಿ: ತಾಲೂಕಿನ ಅಧಿಕಾರಿಗಳು ಕೋವಿಡ್ ಸೋಂಕಿನ ಬಗ್ಗೆ ತಾತ್ಸಾರ ಮಾಡುತ್ತಿದ್ದಾರೆ ಇದು ಸಲ್ಲದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಮಂಗಳವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಕೋವಿಡ್-19 ಬಗ್ಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಕೇಂದ್ರ ಸ್ಥಳದಲ್ಲಿಯೇ ಇರಬೇಕು. ಕೇಂದ್ರ ಸ್ಥಳ ಬಿಟ್ಟು ಬೇರೆ ಕಡೆಯಿಂದ ಬಂದು ಹೋಗುವ ವ್ಯವಸ್ಥೆ ಇಟ್ಟುಕೊಂಡಿದ್ದರೆ ಅಂತಹವರ ಬಗ್ಗೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರ ಬಗ್ಗೆ ಎಲ್ಲಾ ಅಧಿಕಾರಿಗಳು ಎಲ್ಲಾ ಮಾಹಿತಿಯನ್ನು ಹೊಂದಿ ಗಮನವಿಟ್ಟು ಜಾಗೃತಿ ಮೂಡಿಸಬೇಕು. ತಾತ್ಸಾರ ಮಾಡದೆ ಕೆಲಸ ಮಾಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೆಲ ಅಧಿಕಾರಿಗಳು ಕೋವಿಡ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಅದರಲ್ಲೂ ತಾಲೂಕು ವೈದ್ಯಾಧಿಕಾರಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಬೈರನಹಳ್ಳಿ ಗ್ರಾಮದಲ್ಲಿ 3 ವೃದ್ಧೆಯರನ್ನು ಕೊರೊನಾ ಚಿಕಿತ್ಸೆಗೆ ದಾವಣಗೆರೆ ಸಿಜಿ ಆಸ್ಪತ್ರೆಗೆ ದಾಖಲಿಸಿ ಗುಣಮುಖರಾದ ನಂತರ ಅವರನ್ನು ಗ್ರಾಮದ ಹೊರ ಭಾಗದಲ್ಲಿ ಬಿಟ್ಟು ಹೋಗಿರುವ ಘಟನೆ ಬಗ್ಗೆ ಗ್ರಾಮದವರು ನನಗೆ ನೂರಾರು ಕರೆ ಮಾಡಿ ವಿಷಯ ತಿಳಿಸಿದಾಗ ನಾನು ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಅವರಿಗೆ ದೂರವಾಣಿ ಕರೆ ಮಾಡಿದರೆ ದೂರವಾಣಿಯನ್ನೇ ಸ್ವೀಕರಿಸಲಿಲ್ಲ. ಹೊನ್ನಾಳಿ ಪಟ್ಟಣದ ವ್ಯಾಪಾರಸ್ಥರೊಬ್ಬರು ಮಂಗಳವಾರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ತೀರಿಕೊಂಡಿರುವ ವಿಚಾರ ವಿಚಾರಿಸಿದರೆ ಅಸ್ಪಷ್ಟ ಉತ್ತರ ಹೇಳುತ್ತಾರೆ. ಶಾಸಕರ ದೂರವಾಣಿಯನ್ನೇ ಸ್ವೀಕರಿಸದ ತಾಲೂಕು ವೈದ್ಯಾಧಿಕಾರಿ ಸಾಮಾನ್ಯ ಜನರಿಗೆ ಹೇಗೆ ಸ್ಪಂದಿಸಿತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಎಸ್‌ಪಿ ಹನುಮಂತರಾಯ, ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಅಧಿಕಾರಿಗಳು ಇದ್ದರು.