Advertisement

ಗುಳೆ ಹೋದವರನ್ನು ಶೀಘ್ರ ಕರೆತನ್ನಿ

05:23 PM Apr 26, 2020 | Suhan S |

ಗದಗ: ಹೊರ ರಾಜ್ಯಗಳಲ್ಲಿರುವ ಜಿಲ್ಲೆಯ ವಲಸೆ ಕಾರ್ಮಿಕರನ್ನು ಆದಷ್ಟು ಬೇಗನೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊರ ರಾಜ್ಯದಲ್ಲಿ ಸಿಲುಕಿರುವ ಜವಾಹರ ಶಾಲೆ ವಿದ್ಯಾರ್ಥಿಗಳನ್ನು ಜಿಲ್ಲೆಗೆ ಕರೆತರಲು ಅಗತ್ಯದ ಕ್ರಮ ಜರುಗಿಸಬೇಕು. ಹೊರ ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸಿದ ಪ್ರತಿಯೊಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದ ಅವರು, ಜಿಲ್ಲೆಗೆ ಶೀಘ್ರವೇ ಲೈಫ್‌ ಸೇವಿಂಗ್‌ ಸಾಧನೆಗಳನ್ನು ಒಳಗೊಂಡಂತಹ ಆಂಬ್ಯುಲೆನ್ಸ್‌ಗಳನ್ನು ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು. ಸಂಸದ ಸಿ.ಎಂ. ಉದಾಸಿ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ರೈತರಿಗೆ ಅಗತ್ಯದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಆಗದಂತೆ ನಿಗಾವಹಿಸಲು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯ ವಾರ್ಡ್‌ ನಂ. 31ರ ರಂಗನವಾಡ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದ ಎಲ್ಲರನ್ನು ವಿವಿಧ ವಸತಿ ಶಾಲೆಗಳಿಗೆ ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಅಗತ್ಯ ಊಟ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ ಎಂದರು.

ಸಂಸದರಾದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಜಿಪಂ ಸಿಇಒ ಡಾ| ಆನಂದ ಕೆ., ಎಸ್‌ಪಿ ಯತೀಶ ಎನ್‌., ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆ ಅಧಿ  ಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next