Advertisement

ಕಡಲಿಗೆ ಇಳಿದ ಅಧಿಕಾರಿಗಳು, ಪೊಲೀಸರು!

09:58 AM Dec 06, 2019 | Team Udayavani |

ಮಂಗಳೂರು: ಸಮುದ್ರದಲ್ಲಿ ಲೈಟ್‌ಫಿಶಿಂಗ್‌ (ಪ್ರಖರ ಬೆಳಕು ಹಾಯಿಸಿ ಮೀನುಗಾರಿಕೆ), ಬುಲ್‌ಟ್ರಾಲ್‌, ಸಣ್ಣ ಕಣ್ಣಿನ ಬಲೆ ಬಳಕೆ ಮೊದಲಾದ ಅಕ್ರಮ ಮೀನುಗಾರಿಕೆ ತಡೆಯುವುದಕ್ಕೆ ಇದೀಗ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

Advertisement

ಲೈಟ್‌ಫಿಶಿಂಗ್‌ ಮತ್ತು ಬುಲ್‌ಟ್ರಾಲ್‌ ಮೀನುಗಾರಿಕೆ ದೇಶದಲ್ಲೇ ನಿಷೇಧಿಸಿದ್ದರೂ ಕರಾವಳಿಯಲ್ಲಿ ಮೀತಿಮೀರಿದೆ. ಈ ಕುರಿತು ಮೀನುಗಾರರ ಸಂಘಟನೆಗಳು ನಿರಂತರ ದೂರು ನೀಡುತ್ತಿವೆ. ಈ ನಡುವೆ ಮಂಗ‌ಳೂರು ಭಾಗದಲ್ಲಿ ಕೆಲವು ಬೋಟ್‌ಗಳ ನಡುವೆ ಸಂಘರ್ಷ ಉಂಟಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದು ಕೆಎಸ್‌ಆರ್‌ಪಿ ಪೊಲೀಸರ ನೆರವನ್ನು ಪಡೆಯಲಾಗಿದೆ.

“ಪರ್ಸಿನ್‌ ಬೋಟ್‌ನವರ ಲೈಟ್‌ಫಿಶಿಂಗ್‌ನಿಂದಾಗಿ ಮೀನು ಸಂತತಿ ನಶಿಸಿ ಇತರ ಮೀನುಗಾರರಿಗೆ ಮೀನುಗಳೇ ಲಭ್ಯವಾಗುತ್ತಿಲ್ಲ’ ಎಂಬುದು ಟ್ರಾಲ್‌ಬೋಟ್‌ ಹಾಗೂ ನಾಡದೋಣಿಯವರ ದೂರು. “ಟ್ರಾಲ್‌ಬೋಟ್‌ನವರು ಬುಲ್‌ಟ್ರಾಲ್‌ ಮಾಡಿ ಅಕ್ರಮವೆಸಗುತ್ತಿದ್ದಾರೆ’ ಎಂಬುದು ಪರ್ಸಿನ್‌ ಬೋಟ್‌ನವರ ದೂರು. ಸಣ್ಣ ಕಣ್ಣಿನ ಬಲೆಗಳನ್ನು (35 ಎಂಎಂಗಿಂತ ಕಡಿಮೆ) ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ಅತೀ ಸಣ್ಣ ಮೀನುಗಳು ಕೂಡ ಬಲೆಗೆ ಬಿದ್ದು ಮತ್ಸéಕ್ಷಾಮವಾಗುತ್ತಿದೆ ಎನ್ನಲಾಗಿದೆ.

30 ಬೋಟ್‌ಗಳ ತಪಾಸಣೆ
ಮೂರು ದಿನಗಳಲ್ಲಿ 30ಕ್ಕೂ ಅಧಿಕ ಬೋಟ್‌ಗಳ ತಪಾಸಣೆ ನಡೆಸಲಾಗಿದ್ದು 8 ಬೋಟ್‌ಗಳು ಲೈಟ್‌ ಫಿಶಿಂಗ್‌ ನಡೆಸಿರುವುದು ಪತ್ತೆಯಾಗಿದೆ. 5 ಬೋಟ್‌ಗಳು ನಿಗದಿಗಿಂತ ಸಣ್ಣ ಕಣ್ಣಿನ ಬಲೆಗಳನ್ನು ಬಳಸಿ (10 ಎಂಎಂ, 20 ಎಂಎಂ) ಮೀನುಮರಿಗಳನ್ನು ಕೂಡ ಹಿಡಿಯುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಪತ್ತೆಯಾದ ಬೋಟ್‌ಗಳ ಮಾಲಕರಿಗೆ ನೋಟಿಸ್‌ ಕಳುಹಿಸಲಾಗಿದೆ.

ಮೀನಿನ ಕೊರತೆ; ಸಂಘರ್ಷ ಹೆಚ್ಚಳ
ಮೀನಿನ ಕೊರತೆ ಹೆಚ್ಚಾದಂತೆ ಸಂಘರ್ಷ ಹೆಚ್ಚುತ್ತಿರುವುದು ಕಂಡುಬಂದಿದೆ. ಕಡಲು ಪ್ರಕ್ಷುಬ್ಧತೆಯಿಂದ ಒಂದೂವರೆ ತಿಂಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿಲ್ಲ. ಮೂರು ತಿಂಗಳಲ್ಲಿ ಸುಮಾರು 30 ದಿನ ನಷ್ಟವಾಗಿದ್ದು ಈ ವೇಳೆ ಪಸೀìನ್‌ ಬೋಟ್‌ನವರು ಲೈಟ್‌ಫಿಶಿಂಗ್‌ ಹೆಚ್ಚಿಸಿದ್ದಾರೆ. ಹೀಗಾಗಿ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

Advertisement

2,000 ವ್ಯಾಟ್‌ನ ಬಲ್ಬ್ಗಳು
ಒಂದೊಂದು ಬೋಟ್‌ಗಳಲ್ಲಿ ಲೈಟ್‌ ಫಿಶಿಂಗ್‌ಗಾಗಿ 15ರಿಂದ 25 ಕೆವಿ ಸಾಮರ್ಥ್ಯದ ಜನರೇಟರ್‌ಗಳನ್ನು ಕೊಂಡೊಯ್ಯಲಾಗುತ್ತದೆ. 2,000 ವ್ಯಾಟ್‌ನ ಎಲ್‌ಇಡಿ ಬಲ್ಬ್ಗಳನ್ನು ಬಳಸಲಾಗುತ್ತದೆ.

ಸಮುದ್ರದಲ್ಲಿ ಕಾರ್ಯಾಚರಣೆ ಶುರು
ಹಿಂದೆ ಬೋಟ್‌ಗಳ ಪರವಾನಿಗೆ ನವೀಕರಣ, ಮಾಲಕರ ಹೆಸರು ಬದಲಾವಣೆ ಸಂದರ್ಭ ತಪಾಸಣೆ ನಡೆಸಲಾಗುತ್ತಿತ್ತು. ಈಗ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ತಪಾಸಣೆ, ದಿಢೀರ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ. 50,000 ರೂ. ವರೆಗೂ ದಂಡ, ಪರವಾನಿಗೆ ರದ್ದತಿಗೂ ಅವಕಾಶವಿದೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಮೀನುಗಾರಿಕೆ ಈಗಲೇ ಸಂಕಷ್ಟ ದಲ್ಲಿದೆ. ಮೀನುಗಾರಿಕೆ ಉಳಿಯ  ಬೇಕಾದರೆ ಕಾನೂನುಬಾಹಿರ ಮೀನುಗಾರಿಕೆ ನಿಲುಗಡೆಯಾಗಬೇಕು.
-ನಿತಿನ್‌ ಕುಮಾರ್‌, ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷರು, ದ.ಕ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next