Advertisement

ಕಾಮಗಾರಿಗಳಿಗಿಲ್ಲ ಅಧಿಕಾರಿಗಳ ನಿಗಾ

11:43 AM Aug 06, 2019 | Team Udayavani |

ಸೇಡಂ: ತಾಲೂಕು ಸೇರಿದಂತೆ ಪಟ್ಟಣದಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಿಗಾವಹಿಸುವವರೇ ಇಲ್ಲದಂತಾಗಿದೆ. ಕೋಟ್ಯಂತರ ರೂ. ವ್ಯಯಿಸಿ ನಿರ್ಮಾಣ ಹಂತದಲ್ಲಿರುವ ಕೆಲಸಗಳು ಆಮೆಗಿಂತ ನಿಧಾನವಾಗಿ ಸಾಗಿವೆ.

Advertisement

ಪ್ರಮುಖ ಕಾಮಗಾರಿಗಳಾದ ಮಿನಿ ವಿಧಾನಸೌಧ ನಿರ್ಮಾಣ, ಒಳಾಂಗಣ ಕ್ರೀಡಾಂಗಣದ ಬಗ್ಗೆ ಲೋಕೋಪಯೋಗಿ ಇಲಾಖೆ, ಭೂಸೇನಾ ನಿಗಮ, ಕರ್ನಾಟಕ ಗೃಹ ಮಂಡಳಿಯವರಿಗೆ ಸರಿಯಾದ ಮಾಹಿತಿಯೇ ಇಲ್ಲ ಎಂಬುದು ಸಾಬೀತಾಗಿದೆ.

ಸುಮಾರು 9.15 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಾಮಗಾರಿ ಆಗು ಹೋಗುಗಳನ್ನು ವೀಕ್ಷಿಸುವವರೇ ಇಲ್ಲದಂತಾಗಿದೆ. ಇದರಿಂದ ಗುತ್ತಿಗೆ ಪಡೆದ ಕೆಎಂವಿ ಪ್ರಾಜೆಕ್ಸ್‌ ನವರು ಬೇಕಾಬಿಟ್ಟು ಕಾಮಗಾರಿ ಮಾಡಿ ಕೈ ತೊಳೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ಅರ್ಥವಾಗುತ್ತಿದೆ.

ಇನ್ನು ಒಳಾಂಗಣ ಕ್ರೀಡಾಂಗಣದ ಕುರಿತು ಲೊಕೋಪಯೋಗಿ ಇಲಾಖೆ ಭೂಸೇನಾ ನಿಗಮದ ಹೆಸರೇಳುತ್ತಿದೆ. ಭೂಸೇನಾ ನಿಗಮ ಗೃಹ ಮಂಡಳಿ ಹೆಸರೇಳುತ್ತಿದೆ. ಆದರೆ ಗೃಹ ಮಂಡಳಿ ತಾವು ಒಳಾಂಗಣ ಕ್ರೀಡಾಂಗಣ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಈಗಾಗಲೇ ಒಂದು ಹಂತಕ್ಕೆ ಪೂರ್ಣಗೊಂಡಿರುವ ಸುವರ್ಣ ಭವನವನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ. ಆದರೆ ಇನ್ನೂ ಜನರ ಪಾಲಿಗೆ ಬಾಗಿಲು ತೆರೆಯುತ್ತಿಲ್ಲ ಎಂಬುದು ಸಾಹಿತ್ಯಾಸಕ್ತರ ಅಳಲಾಗಿದೆ.

Advertisement

ರಾಜಕಾರಣಿ ಬಂದಾಗ ಚುರುಕು: ಮಿನಿ ವಿಧಾನಸೌಧ, ಒಳಾಂಗಣ ಕ್ರೀಡಾಂಗಣ, ತಾಲೂಕು ಕ್ರೀಡಾಂಗಣ, ಸುವರ್ಣ ಭವನ ಕಾಮಗಾರಿಗಳು ಆಮೆಗಿಂತಲೂ ನಿಧಾನವಾಗಿ ಸಾಗುತ್ತಿವೆ. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅಧಿಕಾರದಲ್ಲಿದ್ದಾಗ ವೇಗಗತಿಯಲ್ಲಿದ್ದ ಕಾಮಗಾರಿಗಳು ಚುನಾವಣೆ ಮುಗಿದ ನಂತರ ಹಠಾತ್ತನೇ ಸ್ಥಗಿತಗೊಂಡಿದ್ದವು. ಆದರೆ ಕೆಲ ಸಮಯದಲ್ಲಿ ಪ್ರಮುಖ ರಾಜಕಾರಣಿಗಳು ಪಟ್ಟಣಕ್ಕೆ ಭೇಟಿ ನೀಡುವಾಗ ಕೆಲಸ ಚುರುಕುಗೊಂಡು ನಂತರ ಮಮ್ಮರು ಮಲಗುತ್ತಿವೆ.

ಒಟ್ಟಾರೆಯಾಗಿ ಜನರ ಹಣದಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗಳು ಅಧಿಕಾರಿಗಳ ಜಾಣಕುರುಡುತನಕ್ಕೋ ಅಥವಾ ರಾಜಕಾರಣಿಗಳ ಮಧ್ಯಸ್ಥಿಕೆಯಿಂದಲೋ ಕಾಮಗಾರಿ ಮಾತ್ರ ಕುಂಠಿತವಾಗಿವೆ.

ಕಾಮಗಾರಿ ಕೈಗೊಂಡು ವರ್ಷಗಳೇ ಕಳೆದಿವೆ. ಆದರೆ ಕಾಮಗಾರಿ ಸ್ಥಿತಿ, ಗತಿ ಕುರಿತು ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ವಿಧಾನಸೌಧ ಕಾಮಗಾರಿಯಲ್ಲಿ ಲೋಪ ಕಂಡುಬಂದಿವೆ. ಕೆಲವೆಡೆ ಸಿಮೆಂಟ್ ಬಳಸಿದರೆ, ಮತ್ತೆ ಕೆಲವೆಡೆ ಬರೀ ಕಲ್ಲು ಇಟ್ಟು ಕಟ್ಟಡ ನಿರ್ಮಿಸಲಾಗುತ್ತಿದೆ. ಇದು ಮುಂದೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ.•ರಾಜು ಕಟ್ಟಿ, ನಿವಾಸಿ

 

•ಶಿವಕುಮಾರ ಬಿ. ನಿಡಗುಂದಾ

Advertisement

Udayavani is now on Telegram. Click here to join our channel and stay updated with the latest news.

Next