ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಂ.ಬಿ. ಪಾಟೀಲ ಅವರಿಂದ ಬಹಿರಂಗವಾಗಿಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಕ್ರಮಗಳು ನಡೆಯುತ್ತಿದೆ. ನಾವು ದೂರು ನೀಡಿದರೂ ಕ್ರಮ ಕೈಗೊಳ್ಳದ ಚುನಾವಣೆ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ವಿಜಯಪುರ ಜಿಲ್ಲೆಯ ಚುನಾವಣಾ ಅಧಿಕಾರಿಗಳ ವಿರುದ್ಧ ರಾಜ್ಯ ಹಾಗೂ ಕೇಂದ್ರ ಚುನಾವಣಾ ಅಧಿಕಾರಿಗಳಿಗೆ ಖುದ್ದು ದೂರು ನೀಡಲಿದ್ದೇನೆ ಎಂದು ಬಿಜೆಪಿ ಸಂಭಾವ್ಯ ಅಭ್ಯರ್ಥಿ ವಿಜುಗೌಡ ಪಾಟೀಲ ತಿಳಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ಕ್ಷೇತ್ರದಲ್ಲಿ ಮುಕ್ತ ನ್ಯಾಯ ಸಮ್ಮತ ಚುನಾವಣೆ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ. ಹಣ ಹಾಗೂ ಇತರೆ ವಸ್ತುಗಳ ಹಂಚಿಕೆ, ಧರ್ಮದ ಹೆಸರಿನಲ್ಲಿ ಪ್ರವಾಸ ಆಯೋಜನೆ, ಎಂ.ಬಿ. ಪಾಟೀಲ ಅಧ್ಯಕ್ಷರಾಗಿರುವ ಬಿಎಲ್‌ಡಿಇ ಸಂಸ್ಥೆಯ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಕೊಂಡು, ಅವರ ಮೂಲಕ ಅಕ್ರಮಗಳನ್ನು ನಡೆಸಲಾಗುತ್ತಿದೆ. ಈ ಎಲ್ಲ ಅಕ್ರಮಗಳ ಕುರಿತು ಲಿಖೀತ ದೂರು ನೀಡಿದರೂ ಜಿಲ್ಲೆಯ ಚುನಾವಣೆಯ ಯಾವ ಅಧಿಕಾರಿಗಳು ದೂರು ದಾಖಲಿಸಿಕೊಂಡು ಕ್ರಮಗೊಂಡಿಲ್ಲ ದೂರಿದರು.
ಸಚಿವ ಎಂ.ಬಿ. ಪಾಟೀಲ ಅವರು ತಾವು ಅಧ್ಯಕ್ಷರಾಗಿರುವ ಬಿಎಲ್‌ಡಿಇ ಸಂಸ್ಥೆ ಆವರಣದಲ್ಲಿ ಬಹಿರಂಗವಾಗಿಯೇ ಅಕ್ರಮವಾಗಿ ಜನರಿಗೆ ಹಣ ಹಾಗೂ ತಮ್ಮ ಭಾವಚಿತ್ರ ಮುದ್ರಿಸಿರುವ ವಿವಿಧ ವಸ್ತುಗಳಿರುವ ಕಿಟ್ ಹಂಚುತ್ತಿದ್ದಾರೆ. ಪ್ರತಿ ಕಿಟ್‌ನಲ್ಲಿ ಒಂದು ಬ್ಯಾನರ್, ಕೊಡೆ, ಟಿ-ಶರ್ಟ್, ಕಾಂಗ್ರೆಸ್ ಪಕ್ಷದ ಧ್ವಜ, ಬೈಕ್‌ಗಳ ಹ್ಯಾಂಡಲ್‌ಗಳಿಗೆ ಅಳವಡಿಸುವ ಸ್ಟಿಕ್, ಬೈಕ್ ನೇಮ್‌ಪ್ಲೇಟ್ ಹೀಗೆ ಹಲವು ವಸ್ತುಗಳನ್ನು ಹಾಡಹಗಲೇ ಹಂಚಿಕೆ ಮಾಡುತ್ತಿದ್ದಾರೆ ಪರಿಕರಗಳನ್ನು ಪ್ರದರ್ಶಿಸಿದರು.
ಚುನಾವಣಾ ಅಧಿಕಾರಿಗಳ ಕಣ್ಮುಂದೆ ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಕಾರಣ ಅವರು ಕಾಂಗ್ರೆಸ್ ಏಜೆಂಟರು ಎಂಬುದರಲ್ಲಿ ಅನುಮಾನ ಉಳಿದಿಲ್ಲ. ಲಿಖೀತ ದೂರು ನೀಡಿದರೂ ದಾಖಲಿಸಿಕೊಳ್ಳುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ, ಕರೆ ಸ್ವೀಕರಿಸಿದರೂ ಜಾಣ ಕುರುಡರಂತೆ ವರ್ತನೆ ತೋರುತ್ತಿದ್ದಾರೆ. ಹೀಗಾಗಿ ಚುನಾವಣಾ ಕಾನೂನು ಜಾರಿಯಲ್ಲೇ ಇಲ್ಲವೇನೋ ಎನಿಸುವ ಬಬಲೇಶ್ವರ ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡಬೇಕೋ, ಬೇಡವೋ ಎಂಬ ಅನುಮಾನ ಮೂಡಿದೆ ಎಂದರು. ಮತ್ತೂಂದೆಡೆ ಬಬಲಾದ ಜಾತ್ರೆ ನೆಪದಲ್ಲಿ ಸುಮಾರು 2,000 ಬಾಕ್ಸ್ ಅಕ್ರಮ ಮದ್ಯ ಸಂಗ್ರಹಿಸಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಹಣ ಹಾಗೂ ಚುನಾವಣಾ ಕ್ರಮ ವಸ್ತುಗಳನ್ನು ಸಾಗಿಸಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ಬಿಎಲ್‌ಡಿಇ ಸಂಸ್ಥೆ ವಾಹನಗಳನ್ನು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಂಡು ಹಣ ಸಾಗಿಸುವ ಹುನ್ನಾರ ನಡೆಯುತ್ತಿದೆ. ಹೀಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಗ್ಗಿಲ್ಲದೇ ಸಾಗಿದೆ. ಇಷ್ಟಾದರೂ ಚುನಾವಣಾಧಿ ಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು.
ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸಲು ತಕ್ಷಣದಿಂದಲೇ ಅಕ್ರಮ ಚಟುವಟಿಕೆ ತಡೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಖುದ್ದು ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಲು ಮುಂದಾಗುತ್ತೇನೆ ಎಂದರು.