ಬೆಂಗಳೂರು: ಪರೀಕ್ಷಾ ಕೇಂದ್ರದಿಂದ ಯಾವುದೇ ರೀತಿಯ ಅಪಸ್ವರ ಬಂದರೂ ಆಯಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ವಿಕಾಸ ಸೌಧದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಸಿದ್ಧತೆ ಪರಿಶೀಲನೆಯ ಅಂತಿಮ ಹಂತವಾಗಿ ಬೆಂಗಳೂರು ನಗರ ಜಿಲ್ಲೆಯ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಬೆಂಗಳೂರು ಮಹಾನಗರ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆ, ಸಾರಿಗೆ, ಮತ್ತು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಕಂಟೈನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಎನ್.95 ಮಾಸ್ಕ್ ವಿತರಿಸುವುದು,
ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡಬೇಕು. ಪರೀಕ್ಷೆ ಸಂಬಂಧ ಯಾವುದೇ ಅಪಸ್ವರ ಬಂದರೂ ಆಯಾ ವ್ಯಾಪ್ತಿಯ ಡಿಡಿಪಿಐ ಮತ್ತು ಬಿಇಒಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಪೋಷಕರ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಹೊರಗೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
ವಾಹನ ಪಾರ್ಕಿಂಗ್ ಕುರಿತಂತೆ ಹೆಚ್ಚಿನ ಗಮನ ಹರಿಸಬೇಕು ಪೊಲೀಸ್ ಇಲಾಖೆಗೆ ಸೂಚಿಸಿದರು. ಬೆಂಗಳೂರಿನ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜೇಷನ್ ಮುಗಿದಿದ್ದು, ಬುಧವಾರ ಬೆಳಗ್ಗೆ ಪುನಃ ಎಲ್ಲ ಕೇಂದ್ರಗಳ ಸ್ಯಾನಿಟೈಸೇಷನ್ ಮುಗಿಯಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪಾರ್ಕಿಂಗ್ ನಿರ್ವಹಣೆ ಮತ್ತು ಪರೀಕ್ಷಾ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಗಮನ ಹರಿಸಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದರು.
“ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಿರಿ’: ಕೋವಿಡ್ 19 ಪ್ರಕರಣಗಳ ಸಂಖ್ಯೆ ತೀವ್ರಗೊಂಡು ಆತಂಕ ಪರಿಸ್ಥಿತಿ ಇರುವಾಗ ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿ, ಪ್ರತಿಷ್ಠೆ ಬಿಟ್ಟು ಪರೀಕ್ಷೆ ನಿರ್ಧಾರದಿಂದ ತಕ್ಷಣ ಹಿಂದೆ ಸರಿಯಬೇಕು. ಒಂದೊಮ್ಮೆ ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್‌ವರೆಗೆ ಕಾದು ನೋಡಿ ಎಂದು ಸಲಹೆ ನೀಡಿದ್ದಾರೆ. ಕೋವಿಡ್ 19 ಏರುಗತಿಯಲ್ಲಿದೆ. ಸುಮಾರು 8 ಲಕ್ಷ ವಿದ್ಯಾರ್ಥಿಗಳು, ಪೋಷಕರು, ಪರೀಕ್ಷಾ ಸಿಬ್ಬಂದಿ ಸೇರಿ 24 ಲಕ್ಷ ಮಂದಿ ಜೀವ- ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡಲು ಹೊರಟಿದೆ. ತೆಲಂಗಾಣ ರಾಜ್ಯ ಮಾದರಿ ಸರ್ಕಾರ ಅನುಸರಿಸಲಿ ಎಂದು ಹೇಳಿದ್ದಾರೆ.