Advertisement

ಪಡಿತರ ಧಾನ್ಯ ಸೋರಿಕೆಯಾದರೆ ಅಧಿಕಾರಿಗಳೇ ಹೊಣೆ

05:14 PM Dec 15, 2017 | |

ಮುಳಬಾಗಿಲು: ಸರ್ಕಾರದ ನಿರ್ದೇಶನದ ಪ್ರಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬರಿಗೂ ತಲಾ 7 ಕೆ.ಜಿ. ಧಾನ್ಯಗಳನ್ನು ನೀಡಲೇಬೇಕು. ದಾರಿ ಮಧ್ಯದಲ್ಲಿ ಸೋರಿಕೆಯಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸತ್ಯವತಿ ಎಚ್ಚರಿಕೆ ನೀಡಿದರು. ನಗರದ ತಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.

Advertisement

ಕಠಿಣ ಕ್ರಮದ ಎಚ್ಚರಿಕೆ: ಎಂ.ಗೊಲ್ಲಹಳ್ಳಿ ಗ್ರಾಮದ ನಕಾಶೆಯಲ್ಲಿ ದಾರಿ ಇದ್ದರೂ ಕೆಲವರು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ 3 ವರ್ಷಗಳ ಹಿಂದೆಯೇ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲವೆಂದು ಗ್ರಾಮಸ್ಥರು ದೂರು ನೀಡಿದರು. ಆಗ ನಕಾಶೆಯಲ್ಲಿರುವ ರಸ್ತೆಯನ್ನು ಗುರ್ತಿಸಲು 3 ವರ್ಷಗಳು ಬೇಕೇ?

ಎಂದು ಜಿಲ್ಲಾಧಿಕಾರಿಗಳು ಸರ್ವೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ, ನನಗೆ ಗೊತ್ತಿಲ್ಲ, ನಾನು ಆಗ ಇರಲಿಲ್ಲ, ನಾನು ನೋಡಲಿಲ್ಲ, ಗಲಾಟೆ ಆಗುತ್ತೆ ಎಂಬ ಹಾರಿಕೆ ಉತ್ತರ ನೀಡಬಾರದು. ಒಂದು ವೇಳೆ ಗಲಾಟೆ ಆಗುವುದಾದರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಒತ್ತುವರಿ ತೆರವು ಮಾಡಿ ದಾರಿಯನ್ನು ಗುರ್ತಿಸಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಅಮಾನತು ಖಚಿತ: ಆವಣಿ ಹೋಬಳಿ ಕುರುಬರಹಳ್ಳಿ ಗ್ರಾಮದ ನಾರಾಯಣಪ್ಪ ಸೇರಿದಂತೆ 4 ಜನ ರೈತರು ದರಕಾಸ್ತು ಮೂಲಕ ಮಂಜೂರಾಗಿರುವ ಜಮೀನಿಗೆ ಪೋಡಿ ಮಾಡಿಸಿಕೊಳ್ಳಲು 5 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನೆಯಾಗಿಲ್ಲವೆಂದು ಅಳಲನ್ನು ತೋಡಿಕೊಂಡಾಗ, ಕಡತ ನಿರ್ವಾಹಕ ಶಿವಾನಂದ್‌ಗೆ ಮಾಹಿತಿ ಕೇಳಿದರು.

ಕಡತಗಳು ನಾಪತ್ತೆಯಾಗಿವೆ ಎಂಬ ಉತ್ತರದಿಂದ ಕೋಪಗೊಂಡ ಜಿಲ್ಲಾಧಿಕಾರಿಗಳು ರೆಕಾರ್ಡ್‌ ರೂಂ ಸಿಬ್ಬಂದಿ ಮತ್ತು ನಿರ್ವಾಹಕ ಶಿವಾನಂದ್‌ ತೀವ್ರ ತರಾಟೆಗೆ ತೆಗೆದುಕೊಂಡು, ಒಂದು ವಾರದೊಳಗೆ ಕಡತಗಳನ್ನು ಪತ್ತೆ ಹಚ್ಚಬೇಕು. ಕಡತ ನಾಪತ್ತೆ ಮಾಡಿರುವ ಗ್ರಾಮ ಸಹಾಯಕರಾಗಲಿ ಅಥವಾ ರಾಜಸ್ವ ನಿರೀಕ್ಷಕರಾಗಲಿ ತಮಗೆ ಸಂಬಂಧವಿಲ್ಲ. ಒಂದು ವಾರದ ಒಳಗಾಗಿ ಇವರ ಕಡತ ಪತ್ತೆ ಹಚ್ಚಬೇಕು. ಇಲ್ಲವಾದಲ್ಲಿ ಆಗಿನ ಸಂದರ್ಭದಲ್ಲಿ ಯಾರೇ ಕೆಲಸ ಮಾಡಿರಲಿ ಅವರನ್ನು ಅಮಾನತು ಮಾಡಲಾಗುವುದೆಂದರು.

Advertisement

ಅಕ್ರಮ ಮದ್ಯ ತಡೆಗೆ ಕ್ರಮ: ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆಂಬ ರೈತ ಸಂಘದ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಶೀಘ್ರವೇ ಪೊಲೀಸ್‌ ಮತ್ತು ಅಬಕಾರಿ ಅಧಿಕಾರಿಗಳ ಸಭೆ ಕರೆಯಲಾಗಿದ್ದು,ಚರ್ಚಿಸಿ ಅಕ್ರಮ ಮದ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದೆಂದರು.

ನಗರದಲ್ಲಿರುವ ವಿಠಲಾಪುರ ಸ.ನಂ.ನಲ್ಲಿರುವ ಸರ್ಕಾರಿ ಜಮೀನು ಒತ್ತುವರಿ ವಿಚಾರವಾಗಿ ಸಾರ್ವಜನಿಕರ ದೂರಿಗೆ ಸ್ಪ$ಂದಿಸಿದ ಜಿಲ್ಲಾಧಿಕಾರಿಗಳು ಶೀಘ್ರವೇ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಬೇಕೆಂದು ಶಿರಸ್ತೇದಾರ್‌ ಸುಬ್ರಹ್ಮಣ್ಯರಿಗೆ ಸೂಚಿಸಿದರು.

ಆವಣಿ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯ ಹಾಗೂ ಬೆಟ್ಟದ ಸುತ್ತಮುತ್ತಲೂ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಐತಿಹಾಸಿಕ ದೇವಾಲಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಗಂಜಿಗುಂಟೆ ಕೃಷ್ಣಮೂರ್ತಿ ದೂರು ನೀಡಿದರು. ಆಗ, ಗಣಿ ಮತ್ತು ಭೂ ವಿಜಾnನ ಇಲಾಖೆ ಅಧಿಕಾರಿಗಳೂಂದಿಗೆ ಚರ್ಚಿಸಿ ಶೀಘ್ರವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದೆಂದರು.

ಸಾರ್ವಜನಿಕರು ವಿವಿಧ ಇಲಾಖೆಗಳ ವಿರುದ್ಧ 35 ಅರ್ಜಿಗಳನ್ನು ಸಲ್ಲಿಸಿದರು. ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್‌, ಪೌರಾಯುಕ್ತ ಪ್ರಹ್ಲಾದ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿರಾಜ್‌, ಲೋಕೋಪಯೋಗಿ ಇಲಾಖೆ ಎಇಇ ಬೋಗೇಗೌಡ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್‌ರೆಡ್ಡಿ,

ಜಿಪಂ ಎಇಇ ರಾಮಾಂಜನಪ್ಪ, ಶಿರಸ್ತೇದಾರ್‌ ಹರಿಪ್ರಸಾದ್‌, ಅಬಕಾರಿ ನಿರೀಕ್ಷಕ ಚಿರಂಜೀವಿ, ತಾಲೂಕು ಆರೋಗ್ಯಾಧಿಕಾರಿ ಆನಂದ್‌, ಸಿಡಿಪಿಒ ಶಂಕರಮೂರ್ತಿ, ರಾಜಸ್ವ ನಿರೀಕ್ಷರಾದ ಸುಬ್ರಹ್ಮಣ್ಯ, ಬಲರಾಮೇಗೌಡ, ವೆಂಕಟೇಶ್‌ ಸೇರಿದಂತೆ ತಾಲೂಕು ಮಟ್ಟದ ಹಲವಾರು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next