Advertisement

ಕೋವಿಡ್‌ ಕೇರ್‌ನಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ

02:29 PM Aug 08, 2020 | Suhan S |

ಗದಗ: ಕೆಲ ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮಲಪ್ರಭಾ, ತುಂಗಭದ್ರ ಹಾಗೂ ಬೆಣ್ಣೆಹಳ್ಳ ಪಾತ್ರದ ಜಿಲ್ಲೆಯ ನರಗುಂದ, ರೋಣ ಹಾಗೂ ಮುಂಡರಗಿ ತಾಲೂಕಿನ ಗ್ರಾಮಗಳಲ್ಲಿ ತೀವ್ರ ನಿಗಾವಹಿಸಬೇಕು. ಪ್ರವಾಹಕ್ಕೊಳಗಾಗಬಹುದಾದ ಗ್ರಾಮಗಳಲ್ಲಿ ಮುನೆಚ್ಚರಿಕೆ ಕ್ರಮವಾಗಿ ಗಾಮಗಳಲ್ಲಿ ಡಂಗುರ ಸಾರಬೇಕು. ಈ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಪಂ ವಿಡಿಯೋ ಕಾನ್ಫೆರೆನ್ಸ್‌ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನೆರೆ ಸಂತ್ರಸ್ತರಿಗೆ ಗುರುತಿಸಲಾದ ಪರಿಹಾರ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಬೇಕು. ಅಲ್ಲದೇ ಇಂತಹ ಸಂದರ್ಭಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ವಿಷ ಜಂತುಗಳ ಹಾವಳಿ ಹೆಚ್ಚಾಗಬಹುದಾಗಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿ ಹಾಗೂ ಔಷಧಗಳನ್ನು ದಾಸ್ತಾನಿಟ್ಟುಕೊಳ್ಳುವಂತೆ ನಿರ್ದೇಶಿಸಿದರು. ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿರಂತರ ನಿಗಾವಹಿಸಿ, ನಿಗದಿತ ಅವಧಿಯೊಳಗೆ ವರದಿ ನೀಡಬೇಕು. ಕೋವಿಡ್‌-19 ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ಚಿಕಿತ್ಸೆ ಒದಗಿಸಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವುದು ಹಾಗೂ ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ವಿರುದ್ಧ ಕ್ರಮ ಜರುಗಿಸಬೇಕು. ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿದ್ದು, ನಿಯಮಿತವಾಗಿ ಸಭೆ ಜರುಗಿಸಿ ವರದಿ ಮಾಡದೇ ಇದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಜಿಪಂ ಸಿಇಒ ಡಾ| ಆನಂದ ಕೆ. ಮಾತನಾಡಿ, ಸೋಂಕು ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ಸಮಿತಿ ರಚಿಸಿದ್ದು, ಈ ಸಮಿತಿ ಪ್ರತಿನಿತ್ಯ ಸಭೆ ನಡೆಸಬೇಕು. ಪ್ರವಾಹಕ್ಕೊಳಗಾಗಬಹುದಾದ ಜಿಲ್ಲೆಯ ಗ್ರಾಮಗಳಲ್ಲಿ ಸಾರ್ವಜನಿಕ ಜಾಗೃತಿ ಹಾಗೂ ಒದಗಿಸಬಹುದಾದ ಸೌಕರ್ಯಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಸ್‌ಪಿ ಯತೀಶ ಎನ್‌. ಮಾತನಾಡಿ, ಗೃಹ ದಿಗ್ಬಂಧನ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಹೊರಬರದಂತೆ ಅಗತ್ಯದ ಪೊಲೀಸ್‌ ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್‌.ಎನ್‌. ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಡಿಎಚ್‌ಒ ಡಾ| ಸತೀಶ ಬಸರೀಗಿಡದ ಸೇರಿದಂತೆ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next