ಪಿರಿಯಾಪಟ್ಟಣ: ತಾಲೂಕಿನ ಅಬ್ಬಳತಿ ಆಶ್ರಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಬುಡಕಟ್ಟು ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳು ಭಾಗವಹಿಸದ ಕಾರಣ ಹಾಗೂ ತಾಪಂ ಸದಸ್ಯ ಶ್ರೀನಿವಾಸ್ ಹಾಗೂ ಗ್ರಾಪಂ ಸದಸ್ಯೆ ಜಾನಕಮ್ಮ ಬುಡಕಟ್ಟು ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಡಿಸಿದರು.
ತಾಲೂಕಿನ ಅಬ್ಬಳತಿ ಆಶ್ರಮ ಶಾಲೆಯ ಆವರಣದಲ್ಲಿ ಪಿರಿಯಾಪಟ್ಟಣ ಹಾಗೂ ವಿರಾಜಪೇಟೆ ತಾಲೂಕಿನ ಮಕ್ಕಳಿಗಾಗಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಮಾಲಂಗಿ ಗ್ರಾಪಂ ಸಹಯೋಗದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ನಡೆಯಿತು.
ಬುಡಕಟ್ಟು ಸಮುದಾಯಕ್ಕೆ ಸರ್ಕಾರದ ಸವಲತ್ತು ತಲುಪಲು ವಿಳಂಬ ಮತ್ತು ಅರ್ಹರಿಗೆ ಸೌಲಭ್ಯ ನೀಡದೇ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಕಾರ್ಯಕ್ರಮದಲ್ಲಿ ಅಳಲನ್ನು ತಹಶೀಲ್ದಾರ್ ಶ್ವೇತಾ, ಇಒ ಡಿ.ಸಿ. ಶೃತಿ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ, ಮಾಲಂಗಿ ಗ್ರಾಪಂ ಪಿಡಿಒ ಡಾ.ಆಶಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿಕೊಳ್ಳಲು ಕಾಯುತ್ತಿದ್ದರು.
ಆದರೆ, ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕಾರಣ ಸಮುದಾಯ ಬೇಸರ ವ್ಯಕ್ತಪಡಿಸಿತು. ಇನ್ನು ಮುಂದೆ ಬುಡಕಟ್ಟು ಸಮುದಾಯದ ಕಾರ್ಯಕ್ರಮಗಳಿಗೆ ಯಾವ ಅಧಿಕಾರಿಗೂ ಆಹ್ವಾನ ನೀಡಬಾರದು. ಬುಡಕಟ್ಟು ಜನರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳಿಗೆ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯೆ ಹಾಗೂ ಆದಿವಾಸಿ ಸಮುದಾಯದ ಜಾನಕಮ್ಮ ಮಾತನಾಡಿ, ಸೌಜನ್ಯಕ್ಕಾದರೂ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಾರದ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಬುಡಕಟ್ಟು ಸಮುದಾಯ ಮುಖ್ಯವಾಹಿನಗೆ ಬರಬೇಕೆಂದು ಹೆಸರಿಗಷ್ಟೇ ಹೇಳುತ್ತಾರೆ. ಈ ಸಮುದಾಯದ ಜನರು ಯಾವುದಾದರೂ ಕಾರ್ಯಕ್ರಮದ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದರೆ ನಿರ್ಲಕ್ಷ್ಯ ತೋರುತ್ತಾರೆಂದು ಹರಿಹಾಯ್ದರು.
ತಾಪಂ ಸದಸ್ಯ ಶ್ರೀನಿವಾಸ್ ಮಾತನಾಡಿ ಅಧಿಕಾರಿಗಳ ಕೃತ್ಯಕ್ಕೆ ಅಸಹನೆ ಹೊರಹಾಕಿದರು. ತಾ.ಪಂ.ಅದ್ಯಕ್ಷೆ ಕೆ.ಆರ್. ನಿರೂಪಾ ಮಾತನಾಡಿದರು. ಜಿಪಂ ಸದಸ್ಯ ಜಯಕುಮಾರ್, ಗ್ರಾಪಂ ಅದ್ಯಕ್ಷೆ ಮುನೀರಾ ಜಾನ್, ಮುಖಂಡರಾದ ಈಶ್ವರ್, ಸುಶೀಲ, ಗ್ರಾಪಂ ಸಿಬ್ಬಂದಿ ಬಲರಾಮ್ ಇತರರಿದ್ದರು.
ಮೈಕ್ರೋ ಪೈನಾನ್ಸ್, ಸಂಘಗಳ ವಿರುದ್ಧ ಆರೋಪ: ಬುಡಕಟು ಜನಾಂಗದ ಜಿಲ್ಲಾ ಕಾರ್ಯದರ್ಶಿ ಶೈಲೇಂದ್ರ ಮಾತನಾಡಿ, ಕೆಲವು ಮೈಕ್ರೋ ಪೈನಾನ್ಸ್ ಮತ್ತು ಸಂಘ ಸಂಸ್ಥೆಗಳು ಸಾಲ ಸೌಲಭ್ಯ ನೀಡುತ್ತೇವೆ ಎಂದು ನಮ್ಮ ಜನರನ್ನು ವಂಚಿಸುವ ಕೆಲಸ ಮಾಡುತ್ತಿವೆ. ತಿಳಿವಳಿಕೆ ಇಲ್ಲದ ನಮ್ಮ ಜನ ಇಂಥ ಪೈನಾನ್ಸ್ ಸಂಸ್ಥೆಯಿಂದ ಸಾಲ ಮಾಡಿ ಮೋಸ ಹೋಗುತ್ತಿದ್ದಾರೆ ಇಲ್ಲಿನ ಮುಖಂಡರು ನಮ್ಮ ಜನರಿಗೆ ತಿಳಿವಳಿಕೆ ಹೇಳಬೇಕು ಎಂದರು.