ಚಾಮರಾಜನಗರ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ತಾಲೂಕು ಮಟ್ಟದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಗೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ ಕಾರಣ ಸಭೆಯನ್ನು ಅ.23ಕ್ಕೆ ಮುಂದೂಡಲಾಯಿತು.
ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ಕರೆದಿದ್ದ ತಾಲೂಕು ಮಟ್ಟದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಗೆ 33 ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಬೇಕಿತ್ತು. ಆದರೆ ಸಭೆಗೆ ಕೇವಲ ಐದಾರು ಇಲಾಖೆ ಅಧಿಕಾರಿಗಳು ಹಾಜರಾಗಿದ್ದರು. ಇದನ್ನು ನೋಡಿದ ಸಮಿತಿ ಸದಸ್ಯರು ಎರಡು, ಮೂರು ಸಮಸ್ಯೆಗಳನ್ನು ಪರಿಹರಿಸಿದರೆ ಸಾಲದು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ನಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪಟ್ಟು ಹಿಡಿದರು.
ಪ.ಜಾತಿ, ಪಂಗಡಗಳ ಹಿತರಕ್ಷಣಾ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ, ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು. ಆದರೆ ಸಭೆಯಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಖಂಡನೀಯ. ಶೋಷಿತ ವರ್ಗದ ಜನರಿಗೆ ಮಾಡಿದ ಅನ್ಯಾಯ ಎಂದು ಸದಸ್ಯರು ಆರೋಪಿಸಿದರು.
ಅನುಪಾಲನಾ ವರದಿ ಸಲ್ಲಿಸದ ಅಧಿಕಾರಿಗಳು ಹಾಗೂ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು. ಅಂಥ ಅಧಿಕಾರಿಗಳ ಮೇಲೆ ಜಾತಿ ನಿಂದನೆ, ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊ ಳ್ಳುವಂತೆ ಸಮಿತಿ ಸದಸ್ಯರಾದ ಸಿ.ಎಂ.ಶಿವಣ್ಣ, ಪಿ.ಸಂಘಸೇನಾ, ಕೆ.ಎಂ.ನಾಗರಾಜು, ಅಂಬರೀಶ್, ಮಹಾಲಿಂಗು, ಸಿದ್ದರಾಜು, ಹಂಡ್ರಕಳ್ಳಿ ಬಸವರಾಜು, ರಾಮಚಂದ್ರ, ಬಸವರಾಜು, ಬ್ಯಾಡಮೂಡ್ಲು ಬಸವಣ್ಣ ಇತರರು ಒತ್ತಾಯಿಸಿದರು. ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಹಾಜ ರಾಗದ ಕಾರಣ ಸಭೆಯನ್ನು ಮುಂದೂಡಬೇಕು ಎಂದು ಪಟ್ಟು ಹಿಡಿದರು. ಆಗ ನಿರ್ವಾಹಣೆವಿಲ್ಲದೇ, ತಹಶೀಲ್ದಾರ್ ಮಹೇಶ್ ಸಭೆ ಮುಂದೂಡಿದರು.ತಾಲೂಕು ಮಟ್ಟದ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ಇಒ ಡಿ.ಎಸ್.ಪ್ರೇಮ್‌ಕುಮಾರ್, ಪ.ಪಂಗಡಗಳ ಕಲ್ಯಾಣಾಧಿಕಾರಿ ರಾಮಸ್ವಾಮಿ ಇದ್ದರು.