ವಿಟ್ಲ : ಬಡವರಿಗೆ, ಅಸಹಾಯಕರಿಗೆ ಒದಗಿಸುವ ಸೌಲಭ್ಯಗಳಿಂದ ಯಾವುದೇ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ. ಅಧಿಕಾರಿಗಳು ಕಂದಾಯ ಅದಾಲತ್ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಉದ್ದೇಶ ಈಡೇರುತ್ತದೆ. ನಾಗರಿಕರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಲ್ಲಿ ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಜವಾಬ್ದಾರಿ ಇದೆ ಎಂದು ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಹೇಳಿದರು.
ಅವರು ಗುರುವಾರ ವಿಟ್ಲ ಮಾದರಿ ಶಾಲೆಯ ಶತಮಾನೋತ್ಸವ ಕಟ್ಟಡದಲ್ಲಿ ಕಂದಾಯ ಇಲಾಖೆ, ಬಂಟ್ವಾಳ ತಾಲೂಕು ಕಚೇರಿ ವತಿಯಿಂದ ವಿಟ್ಲ ಹೋಬಳಿ ವ್ಯಾಪ್ತಿಗೆ ಸೇರಿದ ಎಲ್ಲ ಗ್ರಾಮಗಳ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು ಮಾತನಾಡಿ, ಪ್ರತಿಯೊಬ್ಬ ಫಲಾನುಭವಿಗೂ ಸರಕಾರದ ಯೋಜನೆಗಳು ತಲುಪಲು ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಅವಶ್ಯ. ಕೇರಳದ ಅಧಿಕಾರಿಗಳು ಸಮರ್ಪಕವಾದ ದಾಖಲೆ ನೀಡದಿರುವ ಪರಿಣಾಮವಾಗಿ ಅಲ್ಲಿಂದ ಬಂದವರಿಗೆ ದಾಖಲೆಗಳ ಸಮಸ್ಯೆ ಕಾಡುತ್ತಿದೆ. ಕಾಸರಗೋಡು ಜಿಲ್ಲೆಯಿಂದ ಬಂದು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಪ.ಜಾ./ ಪರಿಶಿಷ್ಟ ಪಂಗಡದವರಿಗೆ ಮಾನವೀಯ ನೆಲೆಯಲ್ಲಿ ದಾಖಲೆ ನೀಡಲು ಸ್ಥಳೀಯ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ವಿಟ್ಲ ಪ.ಪಂ. ಉಪಾಧ್ಯಕ್ಷ ಜಯಂತ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ತಾ.ಪಂ. ಸದಸ್ಯೆ ಶೋಭಾ ರೈ, ವಿಟ್ಲ ಪ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ವಿ. ರಾಮದಾಸ ಶೆಣೈ, ಪ.ಪಂ. ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ವಿಟ್ಲಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಅಳಿಕೆ ಗ್ರಾ.ಪಂ. ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕೇಪು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ, ಪೆರುವಾಯಿ ಗ್ರಾ.ಪಂ. ಅಧ್ಯಕ್ಷ ರಾಲ್ಫ್ ಡಿ’ಸೋಜಾ, ಕರೋಪಾಡಿ ಗ್ರಾ.ಪಂ.ಅಧ್ಯಕ್ಷೆ ಬೇಬಿ ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ರವಿಶಂಕರ ಸಿ.ಎಂ., ಕಂದಾಯ ನಿರೀಕ್ಷಕ ದಿವಾಕರ್ ಇಲಾಖೆಯ ಮಾಹಿತಿ ನೀಡಿದರು. ವಿವಿಧ ಗ್ರಾಮಗಳ ಗ್ರಾಮಕರಣಿಕರು, ಗ್ರಾಮ ಸಹಾಯಕರು ವಿವಿಧ ದೂರುಗಳನ್ನು ಸ್ವೀಕರಿಸಿದರು.
ಉಪಯುಕ್ತ
ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಮಾತನಾಡಿ, ಕಂದಾಯ ಅದಾಲತ್ ಬಡವರಿಗೆ ಅತ್ಯಂತ ಉಪಯುಕ್ತವಾಗಿದೆ. ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅದಾಲತ್ ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕಾರಿಗಳು ಅವರಿಗೆ ತತ್‌ಕ್ಷಣ ಸ್ಪಂದಿಸಿ, ಅದಾಲತ್ ಅನ್ನು ಯಶಸ್ವಿಗೊಳಿಸಬೇಕು. ಪ್ರಾಮಾಣಿಕ ಹಾಗೂ ಉತ್ತಮ ಸೇವೆ ನೀಡಿದಾಗ ಈ ಯೋಜನೆ ಫಲಪ್ರದವಾಗುತ್ತದೆ ಎಂದು ಅವರು ಹೇಳಿದರು.