ಚಿಕ್ಕೋಡಿ: ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಸಂರಕ್ಷಣಾ ಸಭೆ ಅಧ್ಯಕ್ಷತೆ ವಹಿಸಬೇಕಿದ್ದ ಚಿಕ್ಕೋಡಿ ತಹಶೀಲ್ದಾರ್ ಎಸ್.ಎಸ್. ಸಂಪಗಾವಿ ಸಭೆಗೆ ಗೈರಾಗಿದ್ದರಿಂದ ದಲಿತ ಸಮುದಾಯದವರು ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಚಿಕ್ಕೋಡಿ ತಾಲೂಕಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಹಿತರಕ್ಷಣಾ ಹಾಗೂ ಸಂರಕ್ಷಣಾ ಸಭೆಯು ನಗರದ ಐಎಂಎ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದರು. ಸಭೆ ಆರಂಭವಾಗಿ ಒಂದು ಗಂಟೆಯದಾರೂ ಸಭೆಗೆ ಬಾರದ ತಹಶೀಲ್ದಾರ್ ವಿರೋದ್ಧ ದಲಿತ ಸಮುದಾಯದವರು ಸಭೆ ಬಹಿಷ್ಕರಿಸಿ ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ದಲಿತ ಮುಖಂಡ ಶೇಖರ ಪ್ರಭಾತ ಮತ್ತು ಬಸವರಾಜ ಢಾಕೆ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಎಸ್ಸಿ-ಎಸ್ಟಿ ವರ್ಗದ ಹಿತರಕ್ಷಣಾ ಸಭೆಯು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯಬೇಕಾಗುತ್ತದೆ. ಆದರೆ ಸಭೆಗೆ ತಹಶೀಲ್ದಾರರೇ ಬರದೇ ಇರುವುದರಿಂದ ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅ ಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಶೀಲ್ದಾರ್ ಎಸ್.ಎಸ್.ಸಂಪಗಾವಿ ಮತ್ತು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಅವರು ಸಭೆಗೆ ಆಗಮಿಸಿದರೂ ಕೂಡಾ ದಲಿತ ಬಾಂಧವರು ಸಭೆಗೆ ಆಗಮಿಸಲಿಲ್ಲ, ಹೀಗಾಗಿ ತಹಶೀಲ್ದಾರ್ ಸೂಚನೆ ಮೇರಿಗೆ ಸಮಾಜ ಕಲ್ಯಾಣ ಅಧಿ ಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಅವರು ಸಭೆಯನ್ನು ಮಾರ್ಚ್ 2ರಂದು ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಭೆ ಬಹಿಷ್ಕಾರ ಮುನ್ನ ನಡೆದ ಸಭೆಯಲ್ಲಿ ಚಿಕ್ಕೋಡಿ ಡಿವೈಎಸ್‌ಪಿ ಮನೋಜ ನಾಯಿಕ ಮಾತನಾಡಿ, ನಗರದ ಹೊರವಲಯದಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗೆ ಹೋಗುವ ವಿದ್ಯಾರ್ಥಿನಿಯರಿಗೆ ಕೆಲವು ಕಿಡಿಗೇಡಿ ಯುವಕರು ಕಿರುಕುಳ ನೀರುವ ಕುರಿತು ದೂರುಗಳು ಬಂದಿದ್ದು, ಕೂಡಲೇ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಸಭೆಯಲ್ಲಿ ನಿಪ್ಪಾಣಿ ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ, ಸಮಾಜ ಕಲ್ಯಾಣ ಅಧಿ ಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಸಿಡಿಪಿಒ ದೀಪಾ ಕಾಳೆ, ಪಿಎಸ್‌ಐ ರಾಕೇಶ ಬಗಲಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ, ದಲಿತ ಮುಖಂಡರಾದ ನ್ಯಾಯವಾದಿ ಸುದರ್ಶನ ತಮ್ಮನ್ನವರ, ಅಪ್ಪಾಸಾಹೇಬ ತಡಾಕೆ, ಘಟ್ಟಿ, ಸುಜಾತಾ ಕಾಂಬಳೆ ಇದ್ದರು.