Advertisement

ಕಚೇರಿ ವರ್ಗಾವಣೆ: ಅಸಮರ್ಪಕ ನಡೆ

08:11 AM Aug 11, 2018 | |

ಕುಮಾರಸ್ವಾಮಿ ನೇತೃತ್ವದ ಸರಕಾರ ಮಾತು ಮತ್ತು ಕೃತಿಯಲ್ಲಿ ಪದೇ ಪದೇ ಎಡವುತ್ತಿರುವುದು ದುರದೃಷ್ಟಕರ. ಬೆಳಗಾವಿಯಿಂದ ಕೆಲವು ಸರಕಾರಿ ಕಚೇರಿಗಳನ್ನು ಹಾಸನಕ್ಕೆ ವರ್ಗಾಯಿಸುವ ಆದೇಶ ಈ ಮಾತನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. ಮಂತ್ರಿ ಮಂಡಲ ಮತ್ತು ಬಜೆಟ್‌ನಲ್ಲಿ ತಾರತಮ್ಯ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಕೂಗು ತಾರಕಕ್ಕೇರಿತ್ತು. ಆಗ ಸ್ವತಃ ಕುಮಾರಸ್ವಾಮಿಯವರು ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ನಾನೇನೂ ಹಾಗೆ ಮಾಡಿಲ್ಲ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದರು. ವಿಪರ್ಯಾಸವೆಂದರೆ, ತಮ್ಮ ಬಜೆಟ್‌ನಲ್ಲಿ ಅಖಂಡ ಕರ್ನಾಟಕಕ್ಕೆ ಎಷ್ಟು ಪ್ರಾಮುಖ್ಯ ಕೊಟ್ಟಿದ್ದರು ಎಂಬುದು ಎಲ್ಲರ ಕಣ್ಣಮುಂದಿತ್ತು. ಪ್ರತ್ಯೇಕತೆಯ ಹೋರಾಟದ ಕಾವನ್ನು  ತಣ್ಣಗಾಗಿಸುವ ತಂತ್ರವಾಗಿ ಕುಮಾರಸ್ವಾಮಿಯವರು ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವುದೂ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿ ಹೋರಾಟಗಾರರನ್ನು ಸಮಾಧಾನಪಡಿಸಿದರು. ಆದರೆ ಆಶ್ವಾಸನೆ ಕೊಟ್ಟು ಕೆಲವೇ ದಿನಗಳಾಗಿವೆ. ಈಗಾಗಲೇ ಬೆಳಗಾವಿಯಲ್ಲಿದ್ದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆ-ಶಿಪ್‌) ವಿಭಾಗೀಯ ಕಚೇರಿಯನ್ನು ಸದ್ದಿಲ್ಲದೆ ಸಮ್ಮಿಶ್ರ ಸರಕಾರ ಹಾಸನಕ್ಕೆ ಎತ್ತಂಗಡಿ ಮಾಡಿದೆ. 

Advertisement

ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ಕೆಲವು ಇಲಾಖೆಗಳನ್ನು, ಆಡಳಿತಾತ್ಮಕ ಕಚೇರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾಯಿಸಬೇಕೆಂದು ಈ ಭಾಗದ ಹೋರಾಟಗಾರರು ಒತ್ತಾಯಿಸುತ್ತಿದ್ದರೆ ಸರಕಾರ ಇದಕ್ಕೆ ತದ್ವಿರುದ್ಧವಾಗಿ ಅಲ್ಲಿದ್ದ ಕಚೇರಿಯನ್ನೇ ಜೆಡಿಎಸ್‌ ವರಿಷ್ಠ ದೇವೇಗೌಡರ ಕುಟುಂಬದ ರಾಜಕೀಯ ಆಡುಂಬೊಲವಾಗಿರುವ ಹಾಸನಕ್ಕೆ ವರ್ಗಾಯಿಸಿದೆ. ಸಹಜವಾಗಿಯೇ ಸರಕಾರದ ಈ ನಡೆಗೆ ಉತ್ತರ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದು ಸುತ್ತಿನ ಹೋರಾಟಕ್ಕಿದು ಹೇತುವಾದರೆ ಸರಕಾರದ ಬೇಜವಾಬ್ದಾರಿಯೇ ಕಾರಣ.

ಕೆ-ಶಿಪ್‌ನ ವಿಭಾಗೀಯ ಕಚೇರಿ ಹಾಸನಕ್ಕೆ ಸಿಬಂದಿ ಸಮೇತ ವರ್ಗಾವಣೆಗೊಂಡಿದ್ದರೆ, ಲೋಕೋಪಯೋಗಿ ಇಲಾಖೆಯಡಿಯಲ್ಲಿರುವ ಉಪ ವಿಭಾಗೀಯ ಕಚೇರಿಯನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ಇಎಸ್‌ಐ ನಿರ್ಮಾಣ ವಿಭಾಗವನ್ನು ಹುದ್ದೆಗಳ ಸಮೇತ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಹೀಗೆ ಗಾಯದ ಮೇಲೆ ಉಪ್ಪು ಸವರುವಂತೆ ಉತ್ತರ ಕರ್ನಾಟಕದಲ್ಲಿದ್ದ ಸೌಲಭ್ಯಗಳನ್ನು ಕಿತ್ತುಕೊಂಡಿರುವುದರ ಹಿಂದೆ ಲೋಕೋಪಯೋಗಿ ಸಚಿವ ಎಚ್‌. ಡಿ. ರೇವಣ್ಣ ಅವರ ಕೈವಾಡವಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.  ಸಮ್ಮಿಶ್ರ ಸರಕಾರ ಬಂದ ಬಳಿಕ ಉತ್ತರ ಕರ್ನಾಟಕದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎನ್ನುವುದು ಸಚಿವ ರೇವಣ್ಣನವರಿಗೆ ತಿಳಿಯದ ವಿಷಯವಲ್ಲ. ಅಂತೆಯೇ ಕುಮಾರಸ್ವಾಮಿ ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ನೀಡುವ ಪ್ರಸ್ತಾವ ಇಟ್ಟಿರುವುದೂ ಅವರಿಗೆ ಗೊತ್ತಿದೆ. ಈಗಾಗಲೇ ಆ ಭಾಗದಲ್ಲಿರುವ ಸರಕಾರಿ ಕಚೇರಿಯನ್ನು ಬೇರೊಂದು ಜಿಲ್ಲೆಗೆ ಅದೂ ತಮ್ಮ ತವರು ಜಿಲ್ಲೆಗೆ ವರ್ಗಾಯಿಸಿದರೆ ವ್ಯಕ್ತವಾಗಬಹುದಾದ ಪರಿಣಾಮಗಳನ್ನು ಊಹಿಸ ಲಾರದಷ್ಟು ಅಮಾಯಕರೂ ಅವರಲ್ಲ. ಇದರ ಹೊರತಾಗಿಯೂ ರೇವಣ್ಣ ಮುಖ್ಯಮಂತ್ರಿಯ ಅನುಮತಿಯನ್ನೂ ಪಡೆಯದೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯ ಸಂಗತಿ. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದೊಳಗೇ ಸಚಿವರು ತಮಗೆ ಇಷ್ಟ ಬಂದಂತೆ ತೀರ್ಮಾನ ಕೈಗೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಸಹಜ. ಇಲ್ಲವಾದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಮೌನ ಸಮ್ಮತಿ ಕಾರಣ ಆಗಿರಬಹುದೇ ಎಂಬ ಸಂಶಯವೂ ಮೂಡುತ್ತದೆ. ಆದರೆ ರಾಜ್ಯದ ಹಿತದೃಷ್ಟಿಯಲ್ಲಿ ಇಂಥ ನಡೆ ನಿಜಕ್ಕೂ ಆರೋಗ್ಯಕರವಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಸಚಿವರೂ ತಮ್ಮ ತಮ್ಮ ತವರಿಗೆ ತಮಗೆ ಬೇಕಾದ ಇಲಾಖೆಯನ್ನು ವರ್ಗಾಯಿಸಿಕೊಳ್ಳತೊಡಗಿದರೆ ರಾಜ್ಯದ ಜನರು ಹಾಹಾಕಾರ ಎಬ್ಬಿಸಬೇಕಾದ ಸ್ಥಿತಿ ನಿರ್ಮಾಣವಾದೀತು. ಬೆಳಗಾವಿ ಯಲ್ಲಿರುವ ಸುವರ್ಣ ಸೌಧಕ್ಕೆ ಕೆಲವು ಇಲಾಖೆಗಳು ಮತ್ತು ಆಡಳಿತಾತ್ಮಕ ಕಚೇರಿಗಳು ಬಂದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲಕರ ಎನ್ನುವ ಭಾವನೆ ಇಲ್ಲಿನ ಜನರಲ್ಲಿದೆ. ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಈ ಬಾರಿ ಮಳೆ ಕಡಿಮೆಯಾಗಿ ಬರದ ಭೀತಿಯೂ ತಲೆದೋರಿದೆ. ಇಂಥ ಸಂದರ್ಭದಲ್ಲಿ ಆಡಳಿತದ ಒಂದು ಭಾಗ ಇಲ್ಲಿಯೇ ಇದ್ದಿದ್ದರೆ ಪರಿಹಾರ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕಿ³ಪ್ರವಾಗಿ ಕೈಗೊಳ್ಳಲು ಅನುಕೂಲವಾಗುತ್ತಿತ್ತು. ಸಚಿವರಿಗೆ ಮತ್ತು ಅಧಿಕಾರಿಗಳಿಗೆ ವಾಸ್ತವ ವಿಷಯವನ್ನು ತಿಳಿದುಕೊಳ್ಳಲು ಸಹಾಯ ಆಗುತ್ತಿತ್ತು. ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವ ಕುಮಾರಸ್ವಾಮಿಯ ಮಾತಿನಲ್ಲಿ ನೈಜ ಕಾಳಜಿ ಇದ್ದಿರಬಹುದು. ಆದರೆ ಕೃತಿಯಲ್ಲಿ ಅದ್ಯಾವುದೂ ತೋರುತ್ತಿಲ್ಲ. ಮತ್ತಷ್ಟು ಅಸಂಬದ್ಧ ಆಲೋಚನೆಗಳು ತೀರ್ಮಾನ ಸ್ವರೂಪ ಪಡೆದು ಜಾರಿಯಾಗುವ ಮೊದಲೇ ಸಮ್ಮಿಶ್ರ ಸರಕಾರ ಚುಕ್ಕಾಣಿ ಹಿಡಿದವರು ಎಚ್ಚೆತ್ತುಕೊಳ್ಳುವುದು ಸೂಕ್ತ. 

Advertisement

Udayavani is now on Telegram. Click here to join our channel and stay updated with the latest news.

Next