Advertisement

ಬದಲಾಗುತ್ತಿದೆ ಕಚೇರಿಗಳ ಸ್ವರೂಪ

11:16 AM May 23, 2020 | sudhir |

ಮಣಿಪಾಲ: ಕೋವಿಡ್‌ ವೈರಸ್‌ ಕಚೇರಿಗಳ ಕಾರ್ಯಶೈಲಿಯ ಮೇಲೆ ಅಗಾಧ ಪರಿಣಾಮ ಬೀರಿರುವುದು ಈಗ ಸರ್ವವಿಧಿತ. ಮನೆಯಿಂದಲೇ ಕೆಲಸ ಮಾಡುವ ಶೈಲಿಯನ್ನು ಹೆಚ್ಚಿನೆಲ್ಲ ಕಂಪೆನಿಗಳು ಅಳವಡಿಸಿಕೊಂಡಿವೆ. ಇದೀಗ ಹಲವು ಜಾಗತಿಕ ಕಂಪೆನಿಗಳು ವರ್ಕ್‌ ಫ್ರಂ ಹೋಮ್‌ ಪದ್ಧತಿಯನ್ನು ಖಾಯಂ ನೆಲೆಯಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಅಂತರ ಪಾಲನೆ ಹಾಗೂ ಇತರ ಸುರಕ್ಷಾ ವಿಧಾನಗಳ ಪಾಲನೆಗೆ ಅನುಕೂಲವಾಗುವ ಶೈಲಿಯನ್ನು ಕಚೇರಿಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿವೆ. ಒಟ್ಟಾರೆಯಾಗಿ ಕೋವಿಡ್‌ ವೈರಸ್‌ ಭವಿಷ್ಯದಲ್ಲಿ ಕಚೇರಿಗಳ ಸ್ವರೂಪವನ್ನೇ ಬದಲಾಯಿಸಲಿದೆ.

Advertisement

ಫ್ಲೆಕ್ಸಿಬಲ್‌ ವರ್ಕಿಂಗ್‌
ಫ್ಲೆಕ್ಸಿಬಲ್‌ ವರ್ಕಿಂಗ್‌ ಅಂದರೆ ನೌಕರರು ಮಾನಸಿಕವಾಗಿ ತಾವು ಸುರಕ್ಷಿತ ಎಂದು ಭಾವಿಸುವ ಕೆಲಸದ ಶೈಲಿಯ ಬಗ್ಗೆ ಗಂಭೀರವಾದ ಚಿಂತನೆ ನಡೆಯುತ್ತಿದೆ. ಇದರ ಸಾಧಕಬಾಧಕಗಳನ್ನು ಅಳೆದಾಗ ಅನುಕೂಲಗಳೇ ಹೆಚ್ಚಿರುವುದು ತಿಳಿದು ಬಂದಿದೆ.

ಆಧುನಿಕ ಸಂವಹನ ಸೌಲಭ್ಯಗಳು ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತು ಕಚೇರಿಯ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿವೆ. ಹೀಗಾಗಿ ನೌಕರರು ಕಚೇರಿಗೆ ಹೋಗಿಯೇ ಕೆಲಸ ಮಾಡಬೇಕೆಂಬ ಪದ್ಧತಿ ಸದ್ಯದಲ್ಲೇ ಇತಿಹಾಸಕ್ಕೆ ಸೇರಬಹುದು ಎನ್ನುತ್ತಾರೆ ನ್ಯೂಜಿಲ್ಯಾಂಡ್‌ನ‌ ಪ್ರಧಾನಿ ಜಸಿಂಡಾ ಅರ್ಡೆರ್‌.

ನಾಲ್ಕು ದಿನದ ವಾರ
ನ್ಯೂಜಿಲ್ಯಾಂಡ್‌ನ‌ಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡುವ ಹೊಸ ಪದ್ಧತಿಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಹಿಂದಿನ ಉದ್ದೇಶವಾಗಿದ್ದರೂ ಜತೆಗೆ ಹೊಸ ಶೈಲಿಯ ಶ್ರಮ ಸಂಸ್ಕೃತಿಗೆ ನಾಂದಿ ಹಾಡುವ ಅಗತ್ಯ ಉಂಟಾಗಿದೆ ಎನ್ನುತ್ತಿದ್ದಾರೆ ಅರ್ಡೆರ್‌.

ನೌಕರರು ರೆಡಿ
ಕ್ರಮೇಣ ಕಚೇರಿಗಳು ಪ್ರಾರಂಭವಾಗುತ್ತಿದ್ದರೂ ನೌಕರರು ಮನೆಯಿಂದಲೇ ಕೆಲಸ ಮಾಡುವ ಪದ್ಧತಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ತಿಳಿಸುತ್ತದೆ ಒಂದು ಸಮೀಕ್ಷೆ. ಕಚೇರಿಯಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಲ್ಲದೆ ಪ್ರಯಾಣಿಸುವಾಗಲೂ ಸೋಂಕಿಗೆ ತುತ್ತಾಗಬಹುದು ಎಂಬ ಭೀತಿ ನೌಕರರಿಗಿದೆ. ಈ ಹಿನ್ನೆಲೆಯಲ್ಲಿ ವರ್ಕ್‌ ಫ್ರಂ ಹೋಮ್‌ ಸುರಕ್ಷಿತ ಎನ್ನುತ್ತಿದ್ದಾರೆ ನೌಕರರು.

Advertisement

ರಿಮೋಟ್‌ ಹೈರಿಂಗ್‌
ಫೇಸ್‌ಬುಕ್‌ “ರಿಮೋಟ್‌ ಹೈರಿಂಗ್‌’ ಎಂದರೆ ದೂರದಿಂದಲೇ ಕೆಲಸ ಮಾಡುವ ನೌಕರರ ನೇಮಕಾತಿಗೆ ಆದ್ಯತೆ ನೀಡಲು ನಿರ್ಧರಿಸಿದೆ. ಜುಲೈಯಲ್ಲಿ ರಿಮೋಟ್‌ ಹೈರಿಂಗ್‌ ಪ್ರಾರಂಭಿಸುತ್ತೇವೆ. ಮುಂದಿನ 5-10 ವರ್ಷಗಳಲ್ಲಿ ಫೇಸ್‌ಬುಕ್‌ನ ಶೇ. 50 ಸಿಬಂದಿ ಕಚೇರಿಗೆ ಹೋಗದೆಯೇ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌.
ಇದರ ಬೆನ್ನಿಗೆ ಟ್ವಿಟ್ಟರ್‌ ಸೇರಿದಂತೆ ಸಿಲಿಕಾನ್‌ ವ್ಯಾಲಿಯ ಇತರ ಕೆಲವು ದೈತ್ಯ ಕಂಪೆನಿಗಳು ಕೂಡ ನೌಕರರು ಬಯಸಿದರೆ ಖಾಯಂ ಆಗಿ ವರ್ಕ್‌ ಫ್ರಂ ಹೋಮ್‌ ಮಾಡಬಹುದು ಎಂದಿವೆ.

ಕಂಪೆನಿಗಳಿಗೂ ಲಾಭ
ವರ್ಕ್‌ ಪ್ರಂ ಹೋಮ್‌ನಿಂದ ಕಂಪೆನಿಗಳಿಗೂ ಲಾಭಗಳಿವೆ. ಮುಖ್ಯವಾಗಿ ನೌಕರರ ಆರೋಗ್ಯದ ಸುರಕ್ಷೆಗಾಗಿ ಮಾಡುವ ಖರ್ಚು ಉಳಿತಾಯವಾಗುತ್ತದೆ. ಜತೆಗೆ ವಿದ್ಯುತ್‌, ಆಹಾರ ಇತ್ಯಾದಿ ಖರ್ಚುಗಳು ಗಣನೀಯವಾಗಿ ಕಡಿತವಾಗುತ್ತವೆ. ಸಾಮಾಜಿಕ ಅಂತರ ಪಾಲನೆ ನಿಯಮಗಳಿಂದಾಗಿ ಕಚೇರಿಗಳಲ್ಲಿ ಹೆಚ್ಚು ಸ್ಥಳವಕಾಶ ಸೃಷ್ಟಿಸುವ ಅಗತ್ಯವಿತ್ತು. ವರ್ಕ್‌ ಫ್ರಂ ಹೋದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next